'ಹನುಮಾನ್' ಹೀರೋ ತೇಜ್ ಸಜ್ಜಾ ನಟನೆಯ 'ಮಿರಾಯ್' ಸಿನಿಮಾದ ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್
ತೆಲುಗಿನಲ್ಲಿ ಕೆಲವು ವರ್ಷಗಳ ಹಿಂದೆ 'ಹನುಮಾನ್' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಯುವ ನಟ ತೇಜ್ ಸಜ್ಜಾ ಈ ಸಿನಿಮಾಗೆ ಹೀರೋ ಆಗಿದ್ದರು. ಯುವ ನಟನಾಗಿದ್ದರೂ, ತೇಜ್ ಸಜ್ಜಾ ನಟಿಸಿದ ಇದೇ 'ಹನುಮಾನ್' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗಮನ ಸೆಳೆಯಿತು. ಯಾವುದೇ ಸೂಪರ್‌ಸ್ಟಾರ್ ಸಿನಿಮಾಗಳಿಗೂ ಕಮ್ಮಿ ಎನಿಸದೆ ಬಾಕ್ಸಾಫೀಸ್ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿತ್ತು. ಇಷ್ಟು ದೊಡ್ಡ ಸಕ್ಸಸ್ ಕೊಟ್ಟ ಬಳಿಕ ಇದೇ ನಟನ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಹೌದು, 'ಹನುಮಾನ್' ಸಿನಿಮಾ ಬಳಿಕ ತೇಜ್ ಸಜ್ಜಾ ನಟಿಸಿದ ಮತ್ತೊಂದು ಸಿನಿಮಾ 'ಮಿರಾಯ್'. ಈ ಚಿತ್ರ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. 'ಹನುಮಾನ್' ಆದ್ಮೇಲೆ ಮತ್ತೊಂದು ಸೂಪರ್ ಹೀರೋ ಸಿನಿಮಾದಲ್ಲಿ ನಟಿಸಿದ್ದು, ಬಹುಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. 'ಮಿರಾಯ್' ಟೈಟಲ್‌ನಿಂದಲೇ ಗಮನ ಸೆಳೆದಿದ್ದು, ಮೊದಲ ಹಾಡು ರಿಲೀಸ್ ಆಗಿದೆ. ಈ ಹಾಡಿಗೆ ಭರ್ಜರಿ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

ತೇಜ್ ಸಜ್ಜಾ ನಟನೆಯ 'ಮಿರಾಯ್' ಸಿನಿಮಾದ ಮೊದಲ ಹಾಡು ಸಖತ್ ಸ್ಟೈಲಿಶ್ ಆಗಿದೆ. "ವೈಬ್ ಐತೆ ಬೇಬಿ" ಎಂಬ ಹಾಡು ಈಗಾಗಲೇ ಕಿಕ್ ಕೊಟ್ಟಿದೆ. ಈ ಸಿನಿಮಾದ ನಾಯಕ ತೇಜ್ ಸಜ್ಜಾ ಹಾಗೂ ರಿತಿಕಾ ನಾಯಕ್ "ವೈಬ್ ಐತೆ ಬೇಬಿ" ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿಯೂ ಈ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಈ ಹಾಡು ನಮ್ಮ ಭಾಷೆಯಲ್ಲಿಯೂ ರಿಲೀಸ್ ಆಗಿದೆ. ಈ ಹಾಡಿಗೆ ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಸಂಗೀತ ನೀಡಿದವರು ಗೌರ ಹರಿ.
ತೆಲುಗಿನಿಂದ ಕನ್ನಡಕ್ಕೆ ಡಬ್ ಆಗುವ ಬಹುತೇಕ ಎಲ್ಲಾ ಸಿನಿಮಾಗಳಿಗೆ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಬರೆಯುತ್ತಾರೆ. ತೇಜ್ ಸಜ್ಜಾ ನಟಿಸಿರುವ 'ಮಿರಾಯ್' ಸಿನಿಮಾದ ಮೊದಲ ಹಾಡಿಗೆ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯವನ್ನು ರಚಿಸಿದ್ದಾರೆ. ಈಗಾಗಲೇ ಈ ಹಾಡು ಎಲ್ಲಾ ಭಾಷೆಯಿಂದ ಮೆಚ್ಚುಗೆಯನ್ನು ಪಡೆದು ಹೊಸ ಟ್ರೆಂಡ್ ಅನ್ನು ಹುಟ್ಟಾಕಿದೆ.
ತೇಜ್ ಸಜ್ಜಾ ನಟನೆಯ 'ಮಿರಾಯ್' ಸಿನಿಮಾದಲ್ಲಿ ಕೇವಲ ಹಾಡಷ್ಟೇ ಅಲ್ಲ. ಭರ್ಜರಿ ಆಕ್ಷನ್ ಸೀಕ್ವೆನ್ಸ್ ಅನ್ನೂ ಇಡಲಾಗಿದೆ. ಹೀಗಾಗಿ 'ಹನುಮಾನ್'ನಂತೆಯೇ ಈ ಸಿನಿಮಾ ಕೂಡ ಆಕ್ಷನ್ ಪ್ರಿಯರಿಗೆ ಕಿಕ್ ಕೊಡಲಿದೆ. ಅಂದ್ಹಾಗೆ ಈ ಆ್ಯಕ್ಷನ್ ಚಿತ್ರವನ್ನ ಕಾರ್ತಿಕ್ ಘಟ್ಟಮನೇನಿ ಡೈರೆಕ್ಷನ್ ಮಾಡಿದ್ದಾರೆ. ಇನ್ನು 'ಮಿರಾಯ್' ಕೂಡ ಆಕ್ಷನ್, ಫ್ಯಾಂಟಸಿ ಸಿನಿಮಾ ಆಗಿದ್ದರಿಂದ 2ಡಿ ಹಾಗೂ 3ಡಿ ರೂಪದಲ್ಲಿಯೇ ಸಿನಿಮಾ ರಿಲೀಸ್ ಆಗುತ್ತಿದೆ. ಅತೀ ದೊಡ್ಡ ಮಟ್ಟದಲ್ಲಿಯೇ ಈ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 5ರಂದು 'ಮಿರಾಯ್' ಬಿಡುಗಡೆಯಾಗಲಿದೆ.
ತೆಲುಗಿನ ಈ ಪ್ಯಾನ್ ಇಂಡಿಯಾ ಸಿನಿಮಾ 'ಮಿರಾಯ್' ಟೈಟಲ್‌ನಿಂದಲೇ ಗಮನ ಸೆಳೆದಿದೆ. ಅಂದ್ಹಾಗೆ 'ಮಿರಾಯ್' ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಈ ಸಿನಿಮಾ ಹೇಳುವುದಕ್ಕೆ ಹೊರಟಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಮೂಲಕ ಟಿ.ಜಿ.ವಿಶ್ವಪ್ರಸಾದ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ತೇಜ್ ಸಜ್ಜಾ ನಟಿಸುತ್ತಿರುವ ಈ ಸಿನಿಮಾದಲ್ಲಿ ಮನೋಜ್ ಮಂಚು ಖಳನಾಯಕನಾಗಿ ನಟಿಸಿದ್ದಾರೆ. ಹಾಗೇ ನಾಯಕಿಯಾಗಿ ರಿತಿಕಾ ನಾಯಕ್ ನಟಿಸಿದ್ದಾರೆ. 'ಮಿರಾಯ್'ನಲ್ಲಿ ತೇಜ್ ಸಜ್ಜಾ ಡಿಫರೆಂಟ್ ರೋಲ್‌ನಲ್ಲಿ ನಟಿಸಿದ್ದಾರೆ. ಕಾರ್ತಿಕ್ 'ಮಿರಾಯ್'ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ, ಗೌರ ಹರಿ ಸಂಗೀತ ಚಿತ್ರಕ್ಕಿದೆ.


Click it and Unblock the Notifications











