'ಕಾಂತಾರ' ವಿತರಿಸಿದ್ದ ಅಲ್ಲು ಅರವಿಂದ್ ಜೇಬು ಸೇರಿದ್ದು ಬರೀ ₹4 ಕೋಟಿ ಅಷ್ಟೇನಾ? ಲೆಕ್ಕ ಮಿಸ್ ಆಗಿದ್ದೆಲ್ಲಿ?
ಕಳೆದೊಂದು ತಿಂಗಳಿನಿಂದ ಸಿನಿಪ್ರಿಯರು 'ಕಾಂತಾರ' ಬಿಟ್ಟು ಬೇರೆ ಮಾತು ಆಡುತ್ತಲೇ ಇಲ್ಲ. ದೇಶದ ಉದ್ದಗಲಕ್ಕೂ ಕೇವಲ 'ಕಾಂತಾರ' ಸಿನಿಮಾನೇ ಸದ್ದು ಮಾಡುತ್ತಿದೆ. ಬಿಡುಗಡೆಗೂ ಮುನ್ನ ಹಿಂದಿ ಬೆಲ್ಟ್ ಹಾಗೂ ತೆಲುಗು ಬೆಲ್ಟ್‌ನಲ್ಲಿ ಸಿನಿಮಾ ಗೆಲ್ಲುತ್ತಾ? ಅನ್ನೋ ಪ್ರಶ್ನೆಗಳಿಗೀಗ ಉತ್ತರ ಸಿಕ್ಕಿದೆ.
ತೆಲುಗು ಮಂದಿ ಕೂಡ 'ಕಾಂತಾರ' ಸಿನಿಮಾ ನೋಡಿ ಮೆಚ್ಚಿ ಕೊಂಡಾಡುತ್ತಿದ್ದಾರೆ. ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಸಿನಿಮಾ ತೆಲುಗು ಪ್ರೇಕ್ಷಕರನ್ನು ಸೆಳೆದಿದೆ. ಈ ಕಾರಣಕ್ಕೆ 'ಕಾಂತಾರ' ಸಿನಿಮಾ ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಅದ್ಭುತ ಕಲೆಕ್ಷನ್ ಮಾಡುತ್ತಿದೆ.
ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ 'ಕಾಂತಾರ' ಸಿನಿಮಾವನ್ನು ಟಾಲಿವುಡ್‌ನಲ್ಲಿ ವಿತರಣೆ ಮಾಡಿದ್ದರಿಂದ ಅವರಿಗೆ ಭರ್ಜರಿ ಲಾಭ ಬಂದಿದೆ ಅಂತಲೇ ಭಾವಿಸಲಾಗಿತ್ತು. ಆದ್ರೀಗ ಅಲ್ಲು ಅರವಿಂದ್‌ಗೆ 'ಕಾಂತಾರ' ವಿತರಣೆ ಮಾಡಿದ್ದರಿಂದ ಹೆಚ್ಚೇನು ಲಾಭ ಆಗಿಲ್ಲ ಅಂತ ಟಾಲಿವುಡ್ ಮಂದಿನೇ ಲೆಕ್ಕ ನೀಡುತ್ತಿದ್ದಾರೆ. ಅಷ್ಟಕ್ಕೂ ಅಲ್ಲು ಅರವಿಂದ್‌ಗೆ ಲಾಭ ಆಗಿಲ್ಲ ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಟಾಲಿವುಡ್‌ನಲ್ಲಿ 'ಕಾಂತಾರ' 2ನೇ ದೊಡ್ಡ ಸಿನಿಮಾ!
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಕಾಂತಾರ' ಟಾಲಿವುಡ್‌ನಲ್ಲೂ ದಾಖಲೆ ಬರೆದಿದೆ. 'ಕೆಜಿಎಫ್ 2' ಬಳಿಕ ತೆಲುಗಿನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಡಬ್ ಸಿನಿಮಾ 'ಕಾಂತಾರ' ಎಂಬ ಹೆಗ್ಗಳಿಕೆ ಗಳಿಸಿದೆ. ಅಂದ್ಹಾಗೆ ಟಾಲಿವುಡ್‌ನಲ್ಲಿ ಈ ಸಿನಿಮಾ ಸುಮಾರು 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದರಲ್ಲಿ ಅಮೆರಿಕಾದ ಗಳಿಕೆ ಕೂಡ ಸೇರಿಕೊಂಡಿದೆ. ಹೀಗಾಗಿ 'ಕಾಂತಾರ' ಸಿನಿಮಾ ತೆಲುಗು ಚಿತ್ರರಂಗದ ಸೆನ್ಸೆಷನಲ್ ಅಂತ ಸಾಬೀತಾಗಿದೆ. ಈ ಮಧ್ಯೆ 'ಕಾಂತಾರ' ವಿತರಣೆ ಮಾಡಿದ್ದ ಅಲ್ಲು ಅರವಿಂದ್‌ಗೆ ಸಿಕ್ಕಿರೋ ಲಾಭದ ಬಗ್ಗೆನೂ ಚರ್ಚೆಯಾಗುತ್ತಿದೆ.

ಅಲ್ಲು ಅರವಿಂದ್‌ಗೆ ಲಾಭ ಆಗಿಲ್ಲ
ಆಂಧ್ರ ಹಾಗೂ ತೆಲಂಗಾಣದಿಂದಲೇ 'ಕಾಂತಾರ' ಸುಮಾರು 40 ಕೋಟಿ ರೂಪಾಯಿಯನ್ನು ಕಲೆಹಾಕಿದೆ. ಆದರೂ ತೆಲುಗಿನಲ್ಲಿ ಸಿನಿಮಾ ವಿತರಣೆ ಮಾಡಿದ್ದ ಅಲ್ಲು ಅರವಿಂದ್‌ಗೆ ಮಾತ್ರ ಲಾಭ ಆಗಿಲ್ಲ ಅನ್ನೋ ಚರ್ಚೆ ಆಗುತ್ತಿದೆ. ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರವಿಂದ್ ತೆಗೆದುಕೊಂಡ ನಿರ್ಧಾರವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲು ಅರವಿಂದ್ 'ಕಾಂತಾರ' ಸಿನಿಮಾದ ಸಂಪೂರ್ಣ ಹಕ್ಕುಗಳನ್ನು ಪಡೆದುಕೊಂಡಿರಲಿಲ್ಲ. ಹೀಗಾಗಿ ಸ್ಟೈಲಿಶ್ ಸ್ಟಾರ್ ತಂದೆಗೆ ಕೇವಲ 4 ಕೋಟಿ ರೂಪಾಯಿ ಲಾಭ ಆಗಿದೆ ಅಷ್ಟೇ ಅನ್ನೋ ಮಾತು ಕೇಳಿ ಬರುತ್ತಿದೆ.

ತಪ್ಪು ಮಾಡಿದ್ರಾ ಅಲ್ಲು ಅರವಿಂದ್?
ತೆಲುಗಿನಲ್ಲಿ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್ 'ಕಾಂತಾರ' ಸಿನಿಮಾವನ್ನು ವಿತರಣೆ ಮಾಡಿತ್ತು. ಆದರೆ, ಬಿಡುಗಡೆ ವೇಳೆ ಹೊಂಬಾಳೆ ಫಿಲ್ಮ್ಸ್ ಜೊತೆ ಕಮಿಷನ್ ಆಧಾರದ ಮೇಲೆ ಸಿನಿಮಾ ಖರೀದಿ ಮಾಡಿದ್ದರಂತೆ. ಸಿನಿಮಾದ ಗಳಿಕೆಯಲ್ಲಿ ಬರುವ ಶೇ.10ರಷ್ಟು ಒಟ್ಟು ಮೊತ್ತವನ್ನು ನೀಡುವಂತೆ ಒಡಂಬಡಿಕೆ ಆಗಿತ್ತು. ಹೀಗಾಗಿ ಅಂದಾಜು 4 ಕೋಟಿ ರೂಪಾಯಿ ಅಲ್ಲು ಅರವಿಂದ್ ಜೇಬು ಸೇರಿರಬಹುದು ಎಂದು ಟಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

ಹೊಂಬಾಳೆಗೆ ಹೆಚ್ಚು ಲಾಭ ಬಂತಾ?
ಅಲ್ಲು ಅರವಿಂದ್ ಹಾಗೂ ಬನ್ನಿ ವಾಸ್ ಇಬ್ಬರೂ ಇಡೀ ಸಿನಿಮಾವನ್ನೇ ಖರೀದಿಸಿದ್ದರೆ ಒಳ್ಳೆ ಲಾಭವನ್ನೇ ಗಳಿಸಬಹುದಿತ್ತು. ಆದರೆ, ಲಾಭದ ಬಹುಪಾಲನ್ನು ಹೊಂಬಾಳೆಗೆ ಬಿಟ್ಟುಕೊಟ್ಟಿದೆ ಎಂದು ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್‌ಗೆ 15 ಕೋಟಿಯಿಂದ 20 ಕೋಟಿ ರೂಪಾಯಿ ಅಂತೂ ಲಾಭ ಆಗಿದೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಇನ್ನೂ ಪಬ್ಲಿಸಿಟಿ ಮಾಡಿದ್ದರೆ, 'ಕಾಂತಾರ' ಮತ್ತಷ್ಟು ಕಲೆಕ್ಷನ್ ಮಾಡುತ್ತಿತ್ತು ಅನ್ನೋ ಮಾತೂ ಕೂಡ ಕೇಳಿ ಬರುತ್ತಿದೆ. ಆದರೆ, ಈ ಬಗ್ಗೆ ಎರಡೂ ಸಂಸ್ಥೆಗಳೂ ಅಧಿಕೃತ ಮಾಹಿತಿಯನ್ನು ನೀಡಿಲ್ಲ.


Click it and Unblock the Notifications










