'ಪುಷ್ಪ 2' ಕಾಲ್ತುಳಿತ ಪ್ರಕರಣ; ಹೈದರಾಬಾದ್‌ನ 'ಸಂಧ್ಯಾ ಥಿಯೇಟರ್' ಆಡಳಿತ ಮಂಡಳಿ ನೀಡಿದ ಕಾರಣಗಳೇನು?
ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2: ದಿ ರೂಲ್' ಬಿಡುಗಡೆ ವೇಳೆ ಕಾಲ್ತುಳಿತದ ಅವಘಡ ನಡೆದಿತ್ತು. ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಈ ಘಟನೆಯಲ್ಲಿ ಒಬ್ಬ ಮಹಿಳೆ ಮೃತ ಪಟ್ಟಿದ್ದು, ಅವರ ಪುತ್ರ ಗಂಭೀರವಾಗಿ ಗಾಯಗೊಂದಿದ್ದರು. ಈ ಘಟನೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಹೈದರಾಬಾದ್‌ನ ಪ್ರಸಿದ್ಧ ಆರ್.ಟಿ.ಸಿ ಕ್ರಾಸ್ ರಸ್ತೆಯಲ್ಲಿರುವ ಈ ಚಿತ್ರಮಂದಿರದಲ್ಲಿ ಸೂಪರ್‌ಸ್ಟಾರ್‌ಗಳ ಸೆಲೆಬ್ರೆಟಿ ಶೋ ನಡೆಯುತ್ತವೆ. ಸ್ಟಾರ್‌ಗಳ ಫೇವರಿಟ್ ಚಿತ್ರಮಂದಿರವಿದು. 'ಪುಷ್ಪ 2' ಬಿಡುಗಡೆ ವೇಳೆ ನಡೆದ ಈ ಘಟನೆ ವೇಳೆ ಅಲ್ಲು ಅರ್ಜುನ್ ಕೂಡ ಇದ್ದರು. ಹೀಗಾಗಿ ಈ ಪ್ರಕರಣ ಇನ್ನಷ್ಟು ತೀವ್ರತೆಯನ್ನು ಪಡೆದುಕೊಂಡಿತ್ತು. ಅಲ್ಲು ಅರ್ಜುನ್ ಬಂಧನ ಕೂಡ ಆಗಿತ್ತು.

ಈ ಇಡೀ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಹಾಗೂ ಕಾನೂನು ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲೇ ಸಂಧ್ಯಾ ಚಿತ್ರಮಂದಿರದ ಆಡಳಿತ ಮಂಡಳಿ ಇದೀಗ ಅಧಿಕೃತ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ಭದ್ರತಾ ವ್ಯವಸ್ಥೆಯಲ್ಲಿ ಲೋಪ ಆಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾಗಿ ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಥಿಯೇಟರ್‌ನಿಂದ ಸಂತಾಪ
'ಪುಷ್ಪ 2' ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಗೆ ಸಂಧ್ಯಾ ಚಿತ್ರಮಂದಿರದ ಆಡಳಿತ ಮಂಡಳು ಸಂತಾಪವನ್ನು ಸೂಚಿಸಿದೆ. "ಪುಷ್ಪ 2 ಕಾಲ್ತುಳಿತ ಇದು ಅತ್ಯಂತ ದುರದೃಷ್ಟಕರ ಹಾಗೂ ನಾವ್ಯಾರೂ ಊಹಿಸದೇ ಇರುವ ಘಟನೆ. ಮೃತಪಟ್ಟ ಕುಟುಂಬದ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ" ಎಂದು ಸಂಧ್ಯಾ ಥಿಯೇಟರ್‌ನ ಆಡಳಿತ ಮಂಡಳಿ ವಿಷಾದ ವ್ಯಕ್ತಪಡಿಸಿದೆ. ಅಲ್ಲದೆ ಕೆಲವು ಸ್ಪಷ್ಟತೆಯನ್ನು ನೀಡಿದೆ.
ಜನ ಸಾಗರ ನಿಯಂತ್ರಿಸಲು ಆಗಿಲ್ಲ
'ಪುಷ್ಪ 2' ಪ್ರೀಮಿಯರ್ ವೇಳೆ ನಟ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಇದೇ ವೇಳೆ ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡುವ ಸಲುವಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹೀಗಾಗಿ ಅಪಾರ ಪ್ರಮಾಣದಲ್ಲಿ ಸೇರಿದ್ದ ಜನಸಂದಣಿಯನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗಿಲ್ಲ ಎಂದು ಸಂಧ್ಯಾ ಚಿತ್ರಮಂದಿರದ ಆಡಳಿತ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಭದ್ರತಾ ವ್ಯವಸ್ಥೆಯಲ್ಲಿ ಲೋಪವಿರಲಿಲ್ಲ
ಘಟನೆ ವೇಳೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪವನ್ನು ಸಂಧ್ಯಾ ಚಿತ್ರಮಂದಿರದ ಆಡಳಿತ ಮಂಡಳಿ ತಳ್ಳಿ ಹಾಕಿದೆ. "ನಾವು ಈ ಮೊದಲೇ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿದ್ವಿ. ಅಲ್ಲದೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಿದ್ವಿ. ಆದರೆ, ಏಕಾಏಕಿ ನುಗ್ಗಿದ ಸಾವಿರಾರು ಜನರ ನೂಕುನುಗ್ಗಲನ್ನು ತಡೆಯುವುದು ಭದ್ರತಾ ಸಿಬ್ಬಂದಿಗೆ ಸಾಧ್ಯವಾಗಲಿಲ್ಲ" ಎಂದು ಚಿತ್ರಮಂದಿರದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ತನಿಖೆಗೆ ಸಂಪೂರ್ಣ ಸಹಕಾರ
'ಪುಷ್ಪ 2' ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂಧ್ಯಾ ಚಿತ್ರಮಂದಿರದ ಆಡಳಿತ ಮಂಡಳಿ ಹೇಳಿದೆ. ಸಿಸಿಟಿವಿ ದೃಶ್ಯಾವಳಿಗಳು, ತನಿಖೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳು ಹಾಗೂ ಸಂಪೂರ್ಣ ಸಹಕಾರವನ್ನು ಪೊಲೀಸರಿಗೆ ನೀಡುತ್ತಿರುವುದಾಗಿ ತಿಳಿಸಿದೆ. ಈ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿ ಮತ್ತು ಚಿತ್ರದ ಪ್ರಚಾರದ ಜವಾಬ್ದಾರಿ ಹೊತ್ತಿದ್ದ ತಂಡದ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಈಗಾಗಲೇ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Click it and Unblock the Notifications
