"ಊ ಅಂಟಾವಾ" ಹಾಡಿಗೆ ಶಾರುಖ್-ವಿಕ್ಕಿ ಡ್ಯಾನ್ಸ್: ವಿಡಿಯೋ ವೈರಲ್ ಆಗುತ್ತಿದ್ದಂತೆ ಸಮಂತಾ ಹೇಳಿದ್ದೇನು?
ಟಾಲಿವುಡ್‌ನ 'ಪುಷ್ಪ' ಸಿನಿಮಾದ "ಊ ಅಂಟಾವಾ.." ಹಾಡು ಬೇಜಾನ್ ಸದ್ದು ಮಾಡಿತ್ತು. ಅದರಲ್ಲೂ ಸಮಂತಾ ರುಥ್ ಪ್ರಭು ಹಾಕಿದ ಸ್ಟೆಪ್ಸ್‌ಗೆ ಥಿಯೇಟರ್‌ನ ರೂಫ್ ಕಿತ್ತು ಹೋಗುವಂತೆ ಶಿಳ್ಳೆಗಳನ್ನು ಹಾಕಿದ್ದರು. ಅದೇ ಮೊದಲ ಬಾರಿಗೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದ ಸಮಂತಾ ತಮ್ಮ ಅಭಿಮಾನಿಗಳ ಮನಸ್ಸು ಗೆದ್ದಿದ್ದರು.
"ಊ ಅಂಟಾವಾ.." ಸಾಂಗ್ ಯಾರದ್ದೇ ಬಾಯಲ್ಲಿ ಬಂದರೂ ಹಾಗೇ ಹೆಜ್ಜೆ ಹಾಕುವುದಕ್ಕೆ ಶುರು ಮಾಡುತ್ತಾರೆ. ಆ ಮಟ್ಟಿಗೆ ಸಾಂಗ್ ಕ್ರೇಜ್ ಹುಟ್ಟಿಸಿತ್ತು. ಇದೇ ಹಾಡಿಗೆ ಶಾರುಖ್ ಖಾನ್ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಐಫಾ (IIFA 2024) ವೇದಿಕೆ ಮೇಲೆ ಹೆಜ್ಜೆ ಹಾಕಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ದುಬೈನಲ್ಲಿ ಐಫಾ 2024 (IIFA 2024) ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದ ನಿರೂಪಕರಾಗಿ ಶಾರುಖ್ ಖಾನ್ ಹಾಗೂ ವಿಕ್ಕಿ ಕೌಶಲ್ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ ಪ್ರಶಸ್ತಿ ಸಮಾರಂಭದಲ್ಲಿ ಶಾರುಖ್ ಹಾಗೂ ವಿಕ್ಕಿ ಸ್ಟೆಪ್ಸ್ ವೈರಲ್ ಆಗುತ್ತಿದ್ದಂತೆ ಸಮಂತಾ ರುಥ್ ಪ್ರಭು ತಮ್ಮದೇ ಸ್ಟೈಲ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶಾರುಖ್ ಖಾನ್ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಕೇವಲ ಸಿನಿಮಾದಲ್ಲಷ್ಟೇ ಅಲ್ಲ, ನಿರೂಪಣೆ ಮಾಡುವುದರಲ್ಲೂ ಎತ್ತಿದ ಕೈ. ಇಬ್ಬರು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡರೆ ಭರಪೂರ ಮನರಂಜನೆ ಸಿಗುವುದಂತೂ ಗ್ಯಾರಂಟಿ. ಐಫಾ ಕಾರ್ಯಕ್ರಮದಲ್ಲೂ ಈ ಜೋಡಿ ಅಷ್ಟೇ ಮನರಂಜನೆಯನ್ನು ನೀಡಿದೆ. ಕಾರ್ಯಕ್ರಮಕ್ಕೆ ಬಂದಿದ್ದವರನ್ನು ನಗೆಗಡಲಲ್ಲಿ ತೇಲಿಸಿದೆ.
ಶಾರುಖ್ ಖಾನ್ ಹಾಗೂ ವಿಕ್ಕಿ ಕೌಶಲ್ ಇಬ್ಬರೂ 'ಪುಷ್ಪ' ಸಿನಿಮಾದ ಬಗ್ಗೆ ವೇದಿಕೆ ಮೇಲೆ ಮಾತಾಡುತ್ತಿದ್ದರು. ಈ ವೇಳೆ ಶಾರುಖ್ ಖಾನ್ ಹಾಗೂ ವಿಕ್ಕಿ ಕೌಶಲ್‌ಗೆ ನಾವ್ಯಾಕೆ ಸಮಂತಾ ಹೆಜ್ಜೆ ಹಾಕಿರುವ "ಊ ಅಂಟಾವಾ.." ಹಾಡಿಗೆ ಹೆಜ್ಜೆ ಹಾಕಬಾರದು ಅಂತ ಅನಿಸಿತ್ತು. ಆ ಕೂಡಲೇ ಶಾರುಖ್ ಖಾನ್ ಹಾಗೂ ವಿಕ್ಕಿ ಕೌಶಲ್ ತಮ್ಮದೇ ವಿಚಿತ್ರ ಸ್ಟೈಲ್‌ನಲ್ಲಿ ಹೆಜ್ಜೆ ಹಾಕಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಮಂತಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದೇ ವಿಡಿಯೋವನ್ನು ಹಂಚಿಕೊಂಡು ತಮಾಷೆಯಾಗಿ ಬರೆದುಕೊಂಡಿದ್ದಾರೆ. "ಇದು ಇನ್ನು ಮಿಲಿಯನ್ ವರ್ಷಗಳಾದರೂ ನೋಡುವುದಕ್ಕೆ ಸಿಗುತ್ತೆ ಅನ್ನೋ ಕಲ್ಪಿಸಿಕೊಳ್ಳುವುದಕ್ಕೂ ನನಗೆ ಆಗುವುದಿಲ್ಲ" ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಸಮಂತಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡ ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಹಾಗಂತ ಶಾರುಖ್ ಖಾನ್ ಕಾಲೆಳೆಯುವ ಕಾರ್ಯಕ್ರಮ ಅಲ್ಲಿಗೆ ನಿಂತಿಲ್ಲ. ಐಫಾ ಪ್ರಶಸ್ತಿ ಸಮಾರಂಭದಲ್ಲಿ 'ಅನಿಮಲ್' ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಬಳಿಗೆ ಹೋಗಿ 'ಪುಷ್ಪ'ದಂತಹ ಒಂದು ಸಿನಿಮಾವನ್ನೂ ತನಗೂ ಮಾಡುವಂತೆ ಬೇಡಿಕೆ ಇಟ್ಟಿದ್ದರು. 'ಪುಷ್ಪ' ಅವತಾರದಲ್ಲಿ ತನ್ನನ್ನು ತಾನು ನೋಡಿಕೊಳ್ಳುವುದಕ್ಕೆ ಇಷ್ಟ ಪಡುತ್ತೇನೆ ಎಂದು ಕಿಂಗ್ ಖಾನ್ ಹೇಳಿಕೊಂಡಿದ್ದಾರೆ.
'ಪುಷ್ಪ' ಹಾಡಿನ ಜೊತೆ ಜೊತೆಗೆ ಶಾರುಖ್ ಖಾನ್ ಹಾಗೂ ವಿಕ್ಕಿ ಕೌಶಲ್ ಹಲವು ಹಾಡುಗಳಿಗೆ ತಮ್ಮದೇ ಸ್ಟೈಲ್‌ನಲ್ಲಿ ಹೆಜ್ಜೆ ಹಾಕಿದ್ದರು. ಅಲ್ಲದೆ, ವಿಕ್ಕಿ ಕೌಶಲ್ ಸಿನಿಮಾದ "ತೌಬಾ ತೌಬಾ" ಹಾಡಿನ ಹೆಜ್ಜೆಯನ್ನು ಕಲಿತುಕೊಂಡರು. ಇದೆಲ್ಲವೂ ಅಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತ್ತು. ಶೀಘ್ರದಲ್ಲಿ ಈ ಕಾರ್ಯಕ್ರಮ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ.


Click it and Unblock the Notifications











