ಅಕ್ಕಿನೇನಿ ಕುಟುಂಬದ ವಿಚ್ಛೇದಿತ ನಟನೊಂದಿಗೆ ಮದುವೆ ಆಗ್ತಿದ್ದಾರಾ ಮೃಣಾಲ್ ಠಾಕೂರ್? ಏನಿದು ಸುದ್ದಿ?
ಚಿತ್ರರಂಗದಲ್ಲಿ ಕ್ಷಣ ಕ್ಷಣಕ್ಕೂ ಒಂದೊಂದು ಗಾಳಿ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಗಾಸಿಪ್‌ಗಳಿ ಬಣ್ಣದ ಜಗತ್ತಿನಲ್ಲೇನು ಕಮ್ಮಿಯಿರುವುದಿಲ್ಲ. ಅದರಲ್ಲೂ ಡೇಟಿಂಗ್ ಮ್ಯಾಟರ್ ಅಂತೂ ಹಾಟ್ ಕೇಕ್ ರೀತಿ ಸೇಲ್ ಆಗುತ್ತೆ. ಕೆಲವೊಮ್ಮೆ ಈ ಗಾಳಿ ಸುದ್ದಿಗಳೇ ನಿಜವಾಗಿವೆ. ಇನ್ನೊಮ್ಮೆ ಇದು ಕೇವಲ ವದಂತಿಗಳಾಗಿಯೇ ಉಳಿದುಕೊಂಡಿವೆ. ಈಗ ಟಾಲಿವುಡ್‌ನಲ್ಲಿ ಇಂತಹದ್ದೇ ಒಂದು ಸುದ್ದಿ ಸಿನಿಮಾ ಪ್ರೇಮಿಗಳನ್ನು ಗೊಂದಲಕ್ಕೆ ತಳ್ಳಿದೆ.
ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. 'ಸೀತಾ ರಾಮಂ' ಸಿನಿಮಾ ಮೂಲಕ ಈಗಾಗಲೇ ತೆಲುಗು ಮಂದಿಯ ಪ್ರೀತಿಗೆ ಪಾತ್ರರಾಗಿರುವ ಬಾಲಿವುಡ್ ನಟಿಯ ಪ್ರೀತಿ ವಿಷಯವಿದು. ನಟಿ ಮೃಣಾಲ್ ಠಾಕೂರ್ ಹಾಗೂ ಅಕ್ಕಿನೇನಿ ಕುಟುಂಬದ ಹೀರೋ ಸುಮಂತ್ ನಡುವೆ ಸಮ್‌ಥಿಂಗ್ ಏನೋ ನಡೀತಿದೆ ಅನ್ನೋ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ ಅಂತ ಗೊತ್ತಿದ್ದರೂ, ಈ ಜೋಡಿ ಮಾತ್ರ ಇದೂವರೆಗೂ ತುಟಿ ಬಿಚ್ಚಿಲ್ಲ.

ಮೃಣಾಲ್ ಠಾಕೂರ್ 'ಸೀತಾರಾಮಂ' ಹಾಗೂ 'ಹಾಯ್ ನಾನ್ನಾ' ಸಿನಿಮಾ ಮೂಲಕ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೇರಿದ್ದರು. ಇತ್ತೀಚೆಗೆ ತೆಲುಗಿನಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರೂ, ತೆಲುಗು ಮಂದಿಯಿಂದ ಮಾತ್ರ ದೂರ ಆಗಿಲ್ಲ. ಸದ್ಯ ಟಾಲಿವುಡ್‌ನಲ್ಲಿ ಇವರ ಸಿನಿಮಾಗಿಂತ ಹೆಚ್ಚಾಗಿ ಡೇಟಿಂಗ್ ಮ್ಯಾಟರ್ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಹರಿದಾಡುತ್ತಿರುವ ವದಂತಿಯ ಹಿನ್ನೆಲೆಯೇನು? ತಿಳಿಯುವುದಕ್ಕೆ ಮುಂದೆ ಓದಿ.
ಮೃಣಾಲ್ ಠಾಕೂರ್ ಜೊತೆ ತಳುಕು ಹಾಕಿಕೊಂಡಿರುವ ಸುಮಂತ್ ತೆಲುಗಿನ ಪ್ರತಿಷ್ಠಿತ ಅಕ್ಕಿನೇನಿ ಕುಟುಂಬದ ಹೀರೋ. ಇತ್ತೀಚೆಗೆ ಮತ್ತೆ ಸಿನಿಮಾಗಳಲ್ಲಿ ಹೆಚ್ಚು ಆಕ್ಟೀವ್ ಆಗಿದ್ದಾರೆ. ಸುಮಂತ್ ಸಿನಿಮಾರಂಗದಲ್ಲಿ ಇದ್ದರೂ, ಮಾಧ್ಯಮಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಸಿನಿಮಾದಲ್ಲಿ ತಕ್ಕ ಮಟ್ಟಿಗೆ ಸಕ್ಸಸ್ ಸಿಕ್ಕಿದ್ದರೂ, ವೈವಾಹಿಕ ಜೀವನದಲ್ಲಿ ಯಶಸ್ಸು ಕಂಡಿಲ್ಲ.
ಸಮಂತ್ 2004ರಲ್ಲಿ ತೆಲುಗು ನಟಿ ಕೀರ್ತಿ ರೆಡ್ಡಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಈ ವಿವಾಹ ಹೆಚ್ಚು ದಿನ ಉಳಿಯಲಿಲ್ಲ. ಎರಡೇ ವರ್ಷಕ್ಕೆ ಅಂತ್ಯ ಕಂಡಿತ್ತು. 2006ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಬೇರೆಯಾದರು. ಕೀರ್ತಿ ರೆಡ್ಡಿ ಮತ್ತೊಂದು ಮದುವೆಯಾಗಿ ಸಿಂಗಾಪುರದಲ್ಲಿ ಸೆಟಲ್ ಆಗಿದ್ದಾರೆ. ಆದರೆ, ಸುಮಂತ್ ಎರಡನೇ ಮದುವೆ ಮುಂದಾಗಿಲ್ಲ. ಸಾಕಷ್ಟು ಬಾರಿ ಮದುವೆ ಬಗ್ಗೆ ಸುದ್ದಿ ಹರಿದಾಡಿದ್ದರೂ ಒಂಟಿಯಾಗಿಯೇ ಉಳಿದು ಬಿಟ್ಟಿದ್ದಾರೆ. ಇನ್ನು ಕೀರ್ತಿ ರೆಡ್ಡಿ ಕನ್ನಡದಲ್ಲಿ ಉಪೇಂದ್ರ ನಟಿಸಿದ 'ಸೂಪರ್‌ಸ್ಟಾರ್' ಸಿನಿಮಾಗೆ ನಾಯಕಿಯಾಗಿದ್ದರು.
ಮೊದಲ ಮದುವೆಯಿಂದ ಹೊರ ಬಂದು ಒಂಟಿಯಾಗಿರುವ ಸುಮಂತ್ ತನ್ನ 50ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಅದರಲ್ಲೂ ಸುಮಂತ್ ಜೊತೆ ಮೃಣಾಲ್ ಠಾಕೂರ್ ಹೆಸರು ತಳುಕು ಹಾಕಿಕೊಂಡ ಮೇಲಂತೂ ಈ ಸುದ್ದಿ ಟಾಲಿವುಡ್‌ನಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಅಕ್ಕಿನೇನಿ ಕುಟುಂಬದ ನಾಯಕನ ಎರಡನೇ ಮದುವೆ ತೆಲುಗು ಚಿತ್ರರಂಗದಲ್ಲಿ ಬಿಸಿ ಬಿಸಿ ಚರ್ಚೆಯಾಗಿ ಮಾರ್ಪಟ್ಟಿದೆ. ಆದರೆ, ಸುಮಂತ್ ಅವರ ಆಪ್ತ ಮೂಲಗಳು ಈ ವಿಷಯವನ್ನು ತಳ್ಳಿ ಹಾಕಿವೆ ಎಂದು ಮೂಲಗಳು ಹೇಳುತ್ತಿವೆ.
ಮೃಣಾಲ್ ಠಾಕೂರ್ ಹಾಗೂ ಸುಮಂತ್ ನಡುವೆ ಏನೂ ಇಲ್ಲ. ಇಬ್ಬರೂ ಒಳ್ಳೆಯ ಸ್ನೇಹಿತರು ಎಂದು ಆಪ್ತ ಮೂಲಗಳು ಹೇಳಿದ್ದಾಗಿ ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಮೃಣಾಲ್ ಹಾಗೂ ಸುಮಂತ್ 'ಸೀತಾ ರಾಮಂ' ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಅಲ್ಲಿಂದ ಇಬ್ಬರಿಗೂ ಪರಿಚಯ ಎನ್ನಲಾಗಿದೆ. ಆದರೆ, ಇವರಿಬ್ಬರ ಗಾಳಿ ಸುದ್ದಿಗೆ ಸಿಕ್ಕಿಬಿದ್ದಿದ್ದಕ್ಕೆ ಇದೊಂದು ಫೋಟೊ ಕಾರಣ ಆಯ್ತಾ ಅನ್ನೋ ಅನುಮಾನ ಕೂಡ ಎದ್ದಿದೆ. ಆದರೆ, ಇಬ್ಬರೂ ಕ್ಲಾರಿಟಿ ನೀಡಿದರೆ, ಈ ಗಾಸಿಪ್‌ಗೆ ಬ್ರೇಕ್ ಬೀಳಬಹುದು.


Click it and Unblock the Notifications











