Jailer Vs Bhola Shankar: 24 ವರ್ಷಗಳ ಬಳಿಕ ಬಾಕ್ಸಾಫೀಸ್ ಕದನ.. 5ನೇ ಬಾರಿ ಗೆಲ್ಲೋದ್ಯಾರು?
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಇಬ್ಬರು ಚಿತ್ರರಂಗದಲ್ಲಿ ಒಳ್ಳೆಯ ಸ್ನೇಹಿತರು. ಈ ವಿಷಯ ಅವರಿಬ್ಬರಿಗಷ್ಟೇ ಅಲ್ಲ. ಇಡೀ ಚಿತ್ರರಂಗಕ್ಕೇ ಗೊತ್ತಿದೆ. ಆದರೆ, ಸಿನಿಮಾ ವಿಚಾರದಲ್ಲಿ ಇಬ್ಬರೂ ಅಪ್ಪಟ ವೈರಿಗಳಾಗಿ ಬಿಡುತ್ತಾರೆ. ಬಾಕ್ಸಾಫೀಸ್‌ನಲ್ಲಿ ಪರಸ್ಪರ ಕದನಕ್ಕೆ ಇಳಿದುಬಿಡುತ್ತಾರೆ.
ರಜನಿಕಾಂತ್ ತಮಿಳುನಾಡಿನಲ್ಲಿ ಎಷ್ಟು ಜನಪ್ರಿಯರೋ.. ತೆಲುಗು ಚಿತ್ರರಂಗದಲ್ಲೂ ಅಷ್ಟೇ. ಸುಮಾರು 44 ವರ್ಷಗಳಿಂದ ರಜನಿ ಹಾಗೂ ಚಿರಂಜೀವಿ ಇಬ್ಬರೂ ವೃತ್ತಿ ಜೀವನದಲ್ಲಿ ಸ್ಪರ್ಧಿಗಳಾಗಿಯೇ ಗುರುತಿಸಿಕೊಂಡಿದ್ದಾರೆ. ಈಗ ಮತ್ತೊಮ್ಮೆ ಬಾಕ್ಸಾಫೀಸ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

ರಜನಿ ಹಾಗೂ ಚಿರುಗೆ ಬಾಕ್ಸಾಫೀಸ್ ಕದನ ಹೊಸದೇನಲ್ಲ. 'ಜೈಲರ್' ಹಾಗೂ 'ಬೋಳಾ ಶಂಕರ್'ಗೂ ಮುನ್ನ ಸುಮಾರು ನಾಲ್ಕು ಬಾರಿ ಬಾಕ್ಸಾಫೀಸ್‌ನಲ್ಲಿ ಮುಖಾ ಮುಖಿಯಾಗಿದ್ದಾರೆ. ಆ ವೇಳೆ ಗೆದ್ದಿದ್ಯಾರು? ಈಗ ಯಾರಿಗೆ ಗೆಲುವು ಸಿಗಬಹುದು? ಇಬ್ಬರ ಬಾಕ್ಸಾಫೀಸ್ ಕದನದ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.
ಮೊದಲ ಬಾರಿ ರಜನಿ Vs ಚಿರು
ರಜನಿಕಾಂತ್ ಹಾಗೂ ಚಿರಂಜೀವಿ ಇಬ್ಬರು ಆಗ ತಾನೇ ಚಿತ್ರರಂಗಕ್ಕೆ ಕಾಲಿಟ್ಟು ನೆಲೆ ಕಂಡುಕೊಳ್ಳುತ್ತಿದ್ದ ಕಾಲ. ಚಿಕ್ಕ ಪುಟ್ಟ ಪಾತ್ರಗಳು, ಸೆಕೆಂಡ್ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದರು. 1979 ಆಗಸ್ಟ್ 12ರಂದು ರಜನಿ ನಟನೆಯ 'ತಾಯರಮ್ಮ ಬಂಗಾರಮ್ಮ' ಅನ್ನೋ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಚಿರು ಪೂರ್ಣ ಪ್ರಮಾಣದ ನಾಯಕ ಆಗಿರಲಿಲ್ಲ. ಅತ್ತ ಒಂದು ವಾರದ ಅಂತರದಲ್ಲಿ ರಜನಿಕಾಂತ್ ಸಿನಿಮಾ 'ಇದ್ದರು ಅಸಾಧ್ಯುಲೆ' ಇದೇ ವರ್ಷ ಜನವರಿ 25ರಂದು ರಿಲೀಸ್ ಆಗಿತ್ತು. ರಜನಿಕಾಂತ್ ಕೂಡ ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ಹೀರೊ ಆಗಿರಲಿಲ್ಲ.

2ನೇ ಬಾರಿ ರಜನಿ Vs ಚಿರು
1979ರಲ್ಲಿ ಎನ್‌ಟಿಆರ್ ನಟಿಸಿದ 'ಟೈಗರ್' ಸಿನಿಮಾದಲ್ಲಿ ರಜನಿ ಕೂಡ ನಟಿಸಿದ್ದರು. ಇದು ಸೆಪ್ಟೆಂಬರ್ 5ರಂದು ರಿಲೀಸ್ ಆಗಿತ್ತು. 10 ದಿನಗಳ ಬಳಿಕ ಚಿರಂಜೀವಿ ನಟಿಸಿದ 'ಕೊತ್ತಲ ರಾಯುಡು' ಸಿನಿಮಾ ಬಿಡುಗಡೆ ಆಗಿತ್ತು. ಈ ಬಾರಿ ಬಾಕ್ಸಾಫೀಸ್‌ನಲ್ಲಿ ಚಿರಂಜೀವಿ ಸದ್ದು ಮಾಡಿದ್ದರು.
3ನೇ ಬಾರಿ ರಜನಿ Vs ಚಿರು
1980, ಮೇ 22ರಂದು ಚಿರು, ಶೋಭನ್ ಬಾಬು ನಟಿಸಿದ ಸಿನಿಮಾ 'ಮೋಸಗಾಡು' ರಿಲೀಸ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಯ್ತು. ಸರಿಯಾಗಿ 9 ದಿನಗಳ ಬಳಿಕ ಅಂದರೆ, ಮೇ 31ರಂದು ಕೃಷ್ಣ, ರಜನಿ, ಚಂದ್ರಮೋಹನ್ ಸಿನಿಮಾ 'ರಾಮ್ ರಾಬರ್ಟ್ ರಹಿಂ' ರಿಲೀಸ್ ಆಗಿತ್ತು. ಈ ಸಿನಿಮಾವನ್ನೂ ಪ್ರೇಕ್ಷಕರು ಇಷ್ಟಪಟ್ಟಿದ್ದರು.
4ನೇ ಬಾರಿ ರಜನಿ Vs ಚಿರು
1999, ಏಪ್ರಿಲ್ 10ರಂದು ರಿಲೀಸ್ ಆಗಿದ್ದ ಸಿನಿಮಾದಲ್ಲಿ ರಜನಿಕಾಂತ್ ಮೇಲುಗೈ ಸಾಧಿಸಿದ್ದರು. ಸೂಪರ್‌ಸ್ಟಾರ್ ನಟಿಸಿದ್ದ 'ನರಸಿಂಹ' ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಕ್ಸಸ್ ಕಂಡಿತ್ತು. ಅದೇ ಏಪ್ರಿಲ್ 30ರಂದು ತೆರೆಕಂಡಿದ್ದ 'ಇದ್ದರು ಮಿತ್ರುಲು' ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಇದಾದ 24 ವರ್ಷಗಳ ಬಳಿಕ ಮತ್ತೆ ಬಾಕ್ಸಾಫೀಸ್‌ನಲ್ಲಿ ಯುದ್ದಕ್ಕೆ ಇಳಿದಿದ್ದಾರೆ.
5ನೇ ಬಾರಿ ರಜನಿ Vs ಚಿರು
ಈಗ 5ನೇ ಬಾರಿಗೆ ರಜನಿಕಾಂತ್ ಹಾಗೂ ಚಿರು ಮತ್ತೆ ಬಾಕ್ಸಾಫೀಸ್ ಯುದ್ದಕ್ಕೆ ನಿಂತಿದ್ದಾರೆ. ರಜನಿಕಾಂತ್ ಸಿನಿಮಾ 'ಜೈಲರ್' ಇಂದು(ಆಗಸ್ಟ್ 10) ರಿಲೀಸ್ ಆಗಿದೆ. ನಾಳೆ (ಆಗಸ್ಟ್ 11) ಚಿರಂಜೀವಿಯ 'ಬೋಳಾ ಶಂಕರ್' ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಇಬ್ಬರ ಫ್ಯಾನ್ಸ್ ಯಾರು ಗೆಲ್ಲಬಹುದು ಎಂದು ಎದುರು ನೋಡುತ್ತಿದ್ದಾರೆ.


Click it and Unblock the Notifications











