" ಮಾಡಬಾರದ ದೃಶ್ಯದಲ್ಲಿ ನಟಿಸುವಂತೆ ಮಾಡಿ ನನ್ನ ಜೀವನ ಹಾಳು ಮಾಡಿದ"; ಜಮೀನ್ದಾರು ಚಿತ್ರದ ನಟಿ ಕಣ್ಣೀರು
90ರ ದಶಕದಲ್ಲಿ ತೆಲುಗು ರಾಶಿ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದರು. ಇವರೊಂದಿಗೆ ಸಿನಿಮಾ ಮಾಡುವುದಕ್ಕೆ ಅಂದಿನ ಸೂಪರ್‌ಸ್ಟಾರ್‌ಗಳು ಕಾದು ಕೂರುತ್ತಿದ್ದರು. ತೆಲುಗು ನಟಿಯಾಗಿದ್ದರೂ ದಕ್ಷಿಣ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ನಟಿಸಿದ್ದರು. ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿ ನಟಿಸಿ ಬಹುಬೇಡಿಕೆಯ ನಟಿಯಾಗಿದ್ದರು. ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗ ಹಿಂದಿ ಭಾಷೆಯಲ್ಲೂ ನಟಿಸಿದ್ದರು.
ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ಸ್ನೇಹಾ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆನಂತರ ವಿಷ್ಣುವರ್ಧನ್ ನಟನೆಯ 'ಜಮೀನ್ದಾರ್ರು', 'ರಾಜ ನರಸಿಂಹ', ಶಿವಣ್ಣ ಹಾಗೂ ರಮೇಶ್ ಅರವಿಂದ್ ನಟನೆಯ 'ನಿನ್ನೆ ಪ್ರೀತಿಸುವೆ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಈ ನಟಿ ಕನ್ನಡಿಗರಿಗೂ ಚೆನ್ನಾಗಿಯೇ ಗೊತ್ತಿದೆ.

ಇತ್ತೀಚೆಗೆ ನಟಿ ರಾಶಿ ಪಾಡ್‌ಕಾಸ್ಟ್‌ನಲ್ಲಿ ಪ್ರತ್ಯಕ್ಷ ಆಗಿದ್ದರು. 'ಜಬರ್ದಸ್ತ್ ವರ್ಷಾ' ನಡೆಸಿಕೊಡುವ 'ಕಿಸ್ಸಕ್ ಟಾಕ್ಸ್' ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ತಮ್ಮ ವೃತ್ತಿ ಬದುಕಿನ ಜೊತೆಗೆ ಕಷ್ಟ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಹಾಗೇ ನಿರ್ದೇಶಕನೊಬ್ಬನಿಂತ ತನ್ನ ವೃತ್ತಿ ಬದುಕೇ ನಾಶವಾಯ್ತು ಎಂದು ರಾಶಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯರಾದ ರಾಶಿ ತೆಲುಗು ಮಂದಿಗೆ ಇಂದಿಗೂ ಫೇವರಿಟ್. ಬಾಲ ನಟಿಯಾಗಿ 'ರಾವ್ గారి ಇಲ್ಲು', 'ಬಾಲ ಗೋಪಾಲುಡು', 'ಚೆಟ್ಟು ಕಿಂದ ಪ್ಲೀಡರ್', 'ಆದಿತ್ಯ 369', 'ಪಲ್ನಾಟಿ ಪೌರುಷಂ'ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ತಮಿಳಿನ 'ಪ್ರಿಯಂ' ಸಿನಿಮಾ ಮೂಲಕ ನಾಯಕಿಯಾಗಿ ಪರಿಚಯವಾಗಿದ್ದರು.
90ರ ದಶಕದಲ್ಲಿ ರಾಶಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಪೆಳ್ಳಿಪಂದಿರಿ', 'ಶುಭಾಕಾಂಕ್ಷಲು', 'ಪಂಡಗ', 'ಡ್ಯಾಡಿ ಡ್ಯಾಡಿ', 'ಗೋಕುಲಂಲೋ ಸೀತಾ', 'ಸ್ವಪ್ನಲೋಕಂ', 'ಹರೀಶ್ಚಂದ್ರ', 'ಕೃಷ್ಣಬಾಬು', 'ಸಮುದ್ರಂ', 'ಪ್ರೇಯಸಿ ರಾವೆ', 'ಪೋಸ್ಟ್‌ಮನ್', 'ಮೂಡು ಮುಕ್ಕಲಾಟ' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಹಾಗಂತ ಈಕೆ ಕೇವಲ ನಟಿಯಾಗಿ ಅಷ್ಟೇ ಅಲ್ಲದೆ, 'ಸಮುದ್ರಂ', 'ವೀಡೆ', 'ವೆಂಕಿ' ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು.

ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ರಾಶಿಗೆ ವೃತ್ತಿ ಬದುಕು ಬೇರೆ ದಾರಿಗೆ ಹಿಡಿದಿತ್ತು. ಈ ಸಂದರ್ಶನದಲ್ಲಿ ರಾಶಿ ತನ್ನ ವೃತ್ತಿ ಬದುಕಿಗೆ ಕೊಳ್ಳಿ ಇಟ್ಟ ಇಬ್ಬ ನಿರ್ದೇಶಕನಿಗೆ ಹಿಡಿಶಾಪ ಹಾಕಿದ್ದಾರೆ. "ಒಬ್ಬ ನಿರ್ದೇಶಕ ನನ್ನನ್ನು ಗಂಡು ಹುಡುಗಿಯಂತೆ ತೋರಿಸುವುದಕ್ಕೆ ಬಯಸಿದ್ದ. ಹೀಗಾಗಿ ತೂಕ ಇಳಿಸಿಕೊಳ್ಳುವಂತೆ ಹೇಳಿದ. ಆ ಸಿನಿಮಾದ ಮೊದಲ ದಿನ ಶೂಟಿಂಗ್‌ಗೆ ಹೋಗಿದ್ದಾಗ ಮಾಡಬಾರದ ದೃಶ್ಯವನ್ನು ಮೊದಲ ದಿನವೇ ಇಟ್ಟಿದ್ದ. ನನಗೆ ಚಿತ್ರರಂಗದಲ್ಲಿ ಯಾವ ನಿರ್ದೇಶಕನನ್ನು ಮರೆಯಲು ಇಷ್ಟ ಪಡಿತ್ತೀರಾ ಎಂದು ಕೇಳಿದರೆ. ನಾನು ಆ ನಿರ್ದೇಶಕನ ಹೆಸರನ್ನು ಹೇಳುತ್ತೇನೆ." ಎಂದು ನಟಿ ರಾಶಿ ಹೇಳಿಕೊಂಡಿದ್ದಾರೆ.
ಆ ಸಿನಿಮಾ ರಾಶಿ ವೃತ್ತಿ ಬದುಕಿನ ಕೆಟ್ಟ ಸಿನಿಮಾ ಆಯ್ತು." ಆ ಸಿನಿಮಾ ನನ್ನ ವೃತ್ತಿ ಜೀವನಕ್ಕೆ ಪೂರ್ಣ ವಿರಾಮ ಇಟ್ಟಿತ್ತು. ಆ ಚಿತ್ರದ ಬಳಿಕ ನಾನು ಬೇರಾವುದೇ ಸಿನಿಮಾವನ್ನು ಮಾಡಿಲ್ಲ." ಎಂದು ರಾಶಿ ಸಂದರ್ಶನದಲ್ಲಿ ಬೇಸರ ಹೊರ ಹಾಕಿದ್ದಾರೆ. ಇದೇ ಸಂದರ್ಶನದಲ್ಲಿ ಪ್ರೀತಿಸಿ ವಿವಾಹವಾಗಿದ್ದು, 10 ವರ್ಷಗಳ ಬಳಿಕ ಮಕ್ಕಳಾಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.


Click it and Unblock the Notifications











