"ಅಮ್ಮ ದೇವರ ಸಿನಿಮಾ ರಿಲೀಸ್ ಆಗೋವರೆಗೂ ಬದುಕಿಸಿಕೋ"; ಜೂ.ಎನ್‌ಟಿಆರ್ ಫ್ಯಾನ್ಸ್ ಚಿಕಿತ್ಸೆಗೆ ಬೇಕು ₹60 ಲಕ್ಷ
ಗ್ಲೋಬಲ್ ಲೆವೆಲ್‌ನಲ್ಲಿ RRR ಸದ್ದು ಮಾಡಿದ್ದ ಬಳಿಕ ಜೂ.ಎನ್‌ಟಿಆರ್ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಸಿನಿಮಾ ಪ್ರಚಾರ ಕೂಡ ಅಬ್ಬರದಿಂದ ನಡೆಯುತ್ತಿದೆ. ಈ ಸಿನಿಮಾ ನೋಡುವುದಕ್ಕೆ ಜೂ.ಎನ್‌ಟಿಆರ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಜೂ.ಎನ್‌ಟಿಆರ್ ಅಭಿಮಾನಿಯೊಬ್ಬನ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಅದು ಈಡೇರುತ್ತಾ? ಅನ್ನೋದನ್ನು ಅವರ ಅಭಿಮಾನಿ ಬಳಗ ಎದುರು ನೋಡುತ್ತಿದೆ.
ದಕ್ಷಿಣ ಭಾರತದಲ್ಲಿನ ಸ್ಟಾರ್‌ಗಳ ಅಭಿಮಾನಿಗಳ ಕ್ರೇಜ್ ಬೇರೆನೇ ಇದೆ. ಯಾವುದೇ ಭಾಷೆಗೆ ಹೋದರೂ ತಮ್ಮ ನೆಚ್ಚಿನ ನಟನನ್ನು ದೇವರಂತೆ ಕಾಣುತ್ತಾರೆ. ಅವರು ನಟಿಸುವ ಪ್ರತಿಯೊಂದು ಸಿನಿಮಾವನ್ನೂ ಫಸ್ಟ್ ಡೇ ಫಸ್ಟ್ ಶೋನೇ ನೋಡುವುದಕ್ಕೆ ಮುಗಿಬೀಳುತ್ತಾರೆ. ಆದರೆ, ಇಲ್ಲೊಬ್ಬ ಜೂ.ಎನ್‌ಟಿಆರ್ ಅಭಿಮಾನಿಗೆ ರಿಲೀಸ್‌ಗೆ ರೆಡಿಯಾಗಿರುವ 'ದೇವರ' ನೋಡುವ ಅವಕಾಶ ಸಿಗುತ್ತೋ ಇಲ್ಲವೋ ಗೊತ್ತಿಲ್ಲ.

ಯಂಗ್ ಟೈಗರ್ ಅಭಿಮಾನಿಯ ಕರುಣಾಜನಕ ಕಥೆಯೇ ಹಾಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಜೂ.ಎನ್‌ಟಿಆರ್ 'ದೇವರ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಗೆ ರೆಡಿಯಾಗಿರುವ ಈ ಸಿನಿಮಾ ನೋಡುವುದೇ ತನ್ನ ಕೊನೆಯ ಆಸೆ ಅಂತ ಜೂ.ಎನ್‌ಟಿಆರ್ ಅಭಿಮಾನಿ ಹೇಳುತ್ತಿದ್ದಾನೆ.
'ದೇವರ' ಸಿನಿಮಾವನ್ನು ಕಣ್ತುಂಬಿ ಕೊಳ್ಳುವುದಕ್ಕೆ ಜೂ.ಎನ್‌ಟಿಆರ್ ಅಭಿಮಾನಿ ಬಳಗ ಕಾತುರದಿಂದ ಕಾಯುತ್ತಿರುವಾಗಲೇ ಹೃದಯ ಕಲುಕುವ ಘಟನೆಯೊಂದು ಸಂಚಲವನ್ನು ಮೂಡಿಸುತ್ತಿದೆ. ತಿರುಪತಿ ಮೂಲದ ಜೂ.ಎನ್‌ಟಿಆರ್ ಅಭಿಮಾನಿ ಕೌಶಿಕ್ ಕೆಲವು ದಿನಗಳಿಂದ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. 19 ವರ್ಷ ಈ ಜೂ.ಎನ್‌ಟಿಆರ್ ಅಭಿಮಾನಿಗೆ ತಾನು ಸಾಯುವುದಕ್ಕೆ ಮುನ್ನ 'ದೇವರ' ಸಿನಿಮಾ ನೋಡಬೇಕು ಅನ್ನೋ ಆಸೆ.
ಕೌಶಿಕ್ ದಿಢೀರನೇ ಅನಾರೋಗ್ಯಕ್ಕೆ ಬಿದ್ದಿದ್ದ. ತಿರುಪತಿಯ ಆಸ್ಪತ್ರೆಗಳಿಗೆ ಸುತ್ತಿದರೂ ಕಡಿಮೆ ಆಗಲಿಲ್ಲ. ಬಳಿಕ ಸ್ಥಳೀಯ ರೂಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹಲವು ಪರೀಕ್ಷೆಗಳ ಬಳಿಕ ಬ್ಲಡ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬಳಿಕ ತಿರುಪತಿಯ ಶ್ರೀ ವೆಂಕಟೇಶ್ವರ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕಳುಹಿಸಿ ಕೊಡಲಾಯಿತು. ಅಲ್ಲಿನ ವೈದ್ಯರು ಬೋನ್ ಮ್ಯಾರೋ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಬಳಿಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ಬೋನ್ ಮ್ಯಾರೋ ಚಿಕಿತ್ಸೆ 60 ಲಕ್ಷ ರೂಪಾಯಿಯಷ್ಟು ಹಣದ ಅವಶ್ಯಕತೆಯಿದ್ದು, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಜೂ.ಎನ್‌ಟಿಆರ್ ಬಳಿ ಚಿಕಿತ್ಸೆಗೆ ಮನವಿ ಮಾಡಿಕೊಂಡಿದ್ದಾರೆ.
ಜೂ.ಎನ್‌ಟಿಆರ್ ಅಭಿಮಾನಿ ಕೌಶಿಕ್ ತನ್ನ ಪೋಷಕರ ಮುಂದೆ ಇಂತಹದ್ದೊಂದು ಬೇಡಿಕೆ ಇಟ್ಟಿದ್ದಾನೆ. "ಅಮ್ಮ ನಾನು ಬದುಕುವುದಿಲ್ಲ ಅನ್ನೋದು ಗೊತ್ತಿದೆ. ನನ್ನ ಬಗ್ಗೆ ಕೆಟ್ಟದಾಗಿ ಯೋಚಿಸಬೇಡಿ. ದಯವಿಟ್ಟು ದೇವರ ಸಿನಿಮಾ ರಿಲೀಸ್ ಆಗುವವರೆಗೂ ನನ್ನನ್ನು ಬದುಕಿಸು. ನನ್ನ ಕೊನೆಯ ಆಸೆಯನ್ನು ಈಡೇರಿಸು" ಎಂದು ಪೋಷಕರ ಬಳಿ ಹೇಳಿಕೊಂಡಿದ್ದಾನೆ. ಈ ವಿಷಯವನ್ನು ಅವರ ಪೋಷಕರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಜೂನಿಯರ್ ಎನ್‌ಟಿಆರ್ ಅವರ ದೊಡ್ಡ ಅಭಿಮಾನಿಯಾಗಿರುವ ಕೌಶಿಕ್ ಅನ್ನು ಬದುಕಿಸುವಂತೆ ಪೋಷಕರು ಕಣ್ಣೀರು ಇಡುತ್ತಿದ್ದಾರೆ. ತನ್ನ ಮಗನನ್ನು ಉಳಿಸಿಕೊಡುವಂತೆ ಅಂಗಲಾಚುತ್ತಿದ್ದಾರೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಜೂ.ಎನ್‌ಟಿಆರ್ ಅವರಿಗೆ ತನ್ನ ಮಗನ ಕೊನೆಯ ಆಸೆಯನ್ನು ಈಡೇರಿಸುವಂತೆ ಬೇಡಿಕೊಂಡಿದ್ದಾರೆ.
ಜೂ.ಎನ್‌ಟಿಆರ್ ಅವರ 19 ವರ್ಷದ ಅಭಿಮಾನಿ ಕೌಶಿಕ್ ಪರಿಸ್ಥಿತಿಯನ್ನು ನೋಡಿ ಅಭಿಮಾನಿಗಳು ಮರುಗುತ್ತಿದ್ದಾರೆ. ಕೌಶಿಕ್ ಅನ್ನು ಬದುಕಿಸುವುದಕ್ಕೆ ಅವರ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ. ಆದರೆ, ತನ್ನ ಅಭಿಮಾನಿಯ ಈ ಬೇಡಿಕೆಗೆ ಇನ್ನೂ ಜೂ.ಎನ್‌ಟಿಆರ್ ಪ್ರತಿಕ್ರಿಯೆ ನೀಡಿಲ್ಲ. ತನ್ನ ಅಭಿಮಾನಿಯ ಕೊನೆಯ ಆಸೆಯನ್ನು ಜೂ.ಎನ್‌ಟಿಆರ್ ಪ್ರತಿಕ್ರಿಯಿಸುತ್ತಾರಾ? ಅನ್ನೋದನ್ನು ನೋಡಬೇಕಿದೆ.
ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಜೂ.ಎನ್‌ಟಿಆರ್ 'ದೇವರ' ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ಸೆಪ್ಟೆಂಬರ್ 27ರಂದು ವಿಶ್ವದಾದ್ಯಂತ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕೊರಟಾಲ ಶಿವ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ಜಾಹ್ನವಿ ನಟಿಸಿದ್ದು, ಈ ಜೋಡಿಯನ್ನು ತೆರೆ ಮೇಲೆ ನೋಡುವುದಕ್ಕೆ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.


Click it and Unblock the Notifications











