JR.NTR-ರಾಮ್‌ಚರಣ್ ಇಬ್ಬರಲ್ಲಿ ಅತ್ಯುತ್ತಮ ನಟ ಯಾರು? ಈ ಪ್ರಶ್ನೆಗೆ ಉತ್ತರ ಸಿಗೋದ್ಯಾವಾಗ?
ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. "ನಾಟು ನಾಟು..." ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ ಮೇಲಂತೂ ಸಿನಿಮಾ ಬೇರೆ ಲೆವೆಲ್‌ಗೆ ಹೋಗಿದೆ. ಸಿನಿಮಾ ಬಿಡುಗಡೆಯಾಗಿ ವರ್ಷವೇ ಕಳೆದಿದ್ದರೂ, ಇನ್ನೂ ಈ ಸಿನಿಮಾದ ಹವಾ ಮಾತ್ರ ಕಮ್ಮಿಯಾಗಿಲ್ಲ.
RRR ಸಿನಿಮಾ ಗ್ಲೋಬಲ್ ಸಿನಿಮಾ ಆಗಿದ್ದೇನೋ ನಿಜ. ಆದರೆ, ಈ ಸಿನಿಮಾ ಪ್ರಶಸ್ತಿಗಳಿಗಾಗಿ ಕಾಂಪಿಟೇಷನ್‌ಗೆ ಇಳಿದರೆ ಮಾತ್ರ ದೊಡ್ಡ ತಲೆ ನೋವು ಎದುರಾಗುತ್ತೆ. ಯಾರಿಗೆ ಪ್ರಶಸ್ತಿ ಕೊಡೋದು? ಯಾರಿಗೆ ಬಿಡೋದು? ಅನ್ನೋ ಗೊಂದಲಕ್ಕೆ ಬಿದ್ದು ಬಿಡುತ್ತಾರೆ.

ರಾಜಮೌಳಿ ಸಿನಿಮಾ RRR ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತೆ ಅನ್ನೋದು ಗೊತ್ತಿತ್ತು. ಆದರೆ, ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಒಟ್ಟಿಗೆ ಸೇರಿಸಿದಾಗ ಅದು ಫ್ಯಾನ್ ವಾರ್‌ಗೆ ಕಾರಣ ಆಗಬಹುದು ಅನ್ನೋದು ಕೂಡ ಸ್ಪಷ್ಟವಾಗಿತ್ತು. ಸಿನಿಮಾ ರಿಲೀಸ್ ಆದಲ್ಲಿಂದ ಇಲ್ಲಿವರೆಗೂ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಫ್ಯಾನ್ಸ್ ನಡುವೆ ಯುದ್ಧ ನಡೆಯುತ್ತಲೇ ಇದೆ. ಈಗ ಪ್ರತಿಷ್ಠಿತ ಸೈಮಾ ಪ್ರಶಸ್ತಿಯಲ್ಲೂ ಈ ಇಬ್ಬರ ನಡುವೆ ಪೈಪೋಟಿ ನಡೆಯಲಿದೆ.
JR.NTR Vs ರಾಮ್‌ಚರಣ್ ನಡುವೆ ಸ್ಪರ್ಧೆ
2023ನೇ ಸಾಲಿನ ಸೈಮಾಗೆ (SIIMA - 2023) ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಅದರಲ್ಲಿ ಕುತೂಹಲ ಕೆರಳಿಸಿರುವುದು ಬೆಸ್ಟ್ ಆಕ್ಟರ್ ಕೆಟಗರಿ. ಯಾಕಂದ್ರೆ, ಇದರಲ್ಲಿ RRR ಸಿನಿಮಾದಿಂದಲೇ ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಇಬ್ಬರೂ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಇಬ್ಬರಲ್ಲಿ ಒಬ್ಬರಿಗೆ ಪ್ರಶಸ್ತಿ ಕೊಡಬೇಕಾಗಿ ಬಂದಲ್ಲಿ ಯಾರಿಗೆ ಕೊಡುತ್ತಾರೆ? ಅನ್ನೋ ಪ್ರಶ್ನೆ ಎದ್ದಿದೆ. ಅಲ್ಲದೆ ಒಬ್ಬರಿಗೆ ಕೊಟ್ಟರೆ, ಇನ್ನೊಬ್ಬರ ಅಭಿಮಾನಿಗಳು ರೊಚ್ಚಿಗೇಳುತ್ತಾರೆ. ಹೀಗಾಗಿ ಈ ಬಾರಿಯ ಸೈಮಾ ಎಲ್ಲರ ಗಮನ ಸೆಳೆಯುತ್ತಿದೆ.
ಇಬ್ಬರ ಅಭಿಮಾನಿಗಳ ನಡುವೆ ಫೈಟ್
ಎಸ್ ಎಸ್ ರಾಜಮೌಳಿ ನಿರ್ದೇಶನದ 'RRR' ಪ್ರಮುಖ ಆಕರ್ಷಣೆಯೇ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್. ಈ ಸಿನಿಮಾದಲ್ಲಿ ಇಬ್ಬರೂ ಪೈಪೋಟಿಗೆ ಬಿದ್ದು ನಟಿಸಿದ್ದರು. ಇತ್ತ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಯುದ್ಧಕ್ಕೆ ಇಳಿದಿದ್ದರು. RRR ರಿಲೀಸ್ ಆದಲ್ಲಿಂದ ಆಸ್ಕರ್ ಪ್ರಶಸ್ತಿ ಗೆಲ್ಲುವವರೆಗೂ ಇಬ್ಬರ ಫ್ಯಾನ್ಸ್ 'ಗ್ಲೋಬಲ್ ಸ್ಟಾರ್' ಪಟ್ಟಕ್ಕಾಗಿ ಕಿತ್ತಾಡಿದ್ದರು.

ಕ್ರೆಡಿಟ್‌ಗಾಗಿ ಫ್ಯಾನ್ಸ್ ಕಿತ್ತಾಟ
RRR ಸಿನಿಮಾ "ನಾಟು ನಾಟು..." ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಂತೆ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಅಭಿಮಾನಿಗಳು ಕಿತ್ತಾಟಕ್ಕೆ ಇಳಿದಿದ್ದರು. ಆಸ್ಕರ್ ಪ್ರಶಸ್ತಿ ಗೆದ್ದಿದ್ದರ ಕ್ರೆಡಿಟ್ ತಮ್ಮ ಹೀರೊಗೆ ಸಲ್ಲುತ್ತೆ ಅಂತ ಆಗಲೂ ಕಿತ್ತಾಡಿದ್ದರು. ಪರಿಸ್ಥಿತಿ ಹೀಗಿರುವಾಗಲೇ ಸೈಮಾ 2023ನೇ ಸಾಲಿನ ಅತ್ಯುತ್ತಮ ನಟ ವಿಭಾಗದಲ್ಲಿ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಹೆಸರನ್ನು ಪರಿಗಣಿಸಲಾಗಿದೆ. ಈಗ ಇವರಿಬ್ಬರಲ್ಲಿ ಯಾರು 'ಬೆಸ್ಟ್ ಆಕ್ಟರ್'? ತೀರ್ಪುಗಾರರು ಯಾರನ್ನು ಆಯ್ಕೆ ಮಾಡುತ್ತಾರೆ? ಅನ್ನೋ ಪ್ರಶ್ನೆ ಎದ್ದಿದೆ.
ಯಾರಿಗೆ ಒಲಿಯುತ್ತೆ ಪ್ರಶಸ್ತಿ?
ಆನ್‌ಲೈನ್ ಹಾಗೂ ತೀರ್ಪುಗಾರರು ಮತ ಹಾಕುವುದರ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆದರೆ, ಎಷ್ಟೇ ಪಾರದರ್ಶಕವಾಗಿದ್ದರೂ, ಇಬ್ಬರಲ್ಲಿ ಒಬ್ಬರಿಗೆ ಪ್ರಶಸ್ತಿ ಬಂದರೆ ಫ್ಯಾನ್ಸ್ ವಾರ್ ಮತ್ತೆ ಶುರುವಾಗೋದು ಪಕ್ಕಾ. ಸದ್ಯ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಜೊತೆಗೆ ಸಿದ್ದು ಜೊನ್ನಲಗಡ್ಡ (DJ Tillu), ನಿಖಿಲ್ (Karthikeya 2), ಅಡಿವಿ ಶೇಶ್ (Major) ಮತ್ತು ದುಲ್ಕರ್ ಸಲ್ಮಾನ್ (Seetha Ramam) ಸ್ಪರ್ಧೆಯಲ್ಲಿದ್ದಾರೆ. ಹೀಗಾಗಿ ಈ ಹೈ ವೋಲ್ಟೇಜ್ ಸಮಾರಂಭ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದೇ ಸೆಪ್ಟೆಂಬರ್ 15 ಮತ್ತು 16 ರಂದು ದುಬೈನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ.


Click it and Unblock the Notifications











