ಅಭಿಮಾನಿಗಳನ್ನು ಭೇಟಿ ಮಾಡಲು ಜೂ.ಎನ್‌ಟಿಆರ್ ಮಾಸ್ಟರ್ ಪ್ಲ್ಯಾನ್; ಯಾಕೀ ಕಸರತ್ತು?
ಟಾಲಿವುಡ್‌ನಲ್ಲಿ ಸೂಪರ್‌ಸ್ಟಾರ್‌ಗಳು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ಪರದಾಡುತ್ತಿದ್ದಾರಾ? ಇಂತಹದ್ದೊಂದು ಪ್ರಶ್ನೆ ಉದ್ಭವವಾಗಿದೆ. ಅದಕ್ಕೆ ಜೂ.ಎನ್‌ಟಿಆರ್ ಅನ್ನು ಮುಂದಿಟ್ಟುಕೊಂಡು ತೆಲುಗು ಚಿತ್ರರಂಗದಲ್ಲಿ ಚರ್ಚೆಯಂತೂ ಶುರುವಾಗಿದೆ. ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ತಾರೆಯರು ಯಾಕಿಷ್ಟು ಪರದಾಡುತ್ತಿದ್ದಾರೆ? ಅಂತ ಕಾರಣ ಹುಡುಕಿದರೆ ಸಿಗೋದು ಅಲ್ಲು ಅರ್ಜುನ್.
ಅಲ್ಲು ಅರ್ಜುನ್ 'ಪುಷ್ಪ 2' ಪ್ರೀಮಿಯರ್ ವೇಳೆ ಕಾಲ್ತುಳಿತಕ್ಕೆ ಸಾವನ್ನಪ್ಪಿದ ಮಹಿಳೆಯ ಸಾವಿನ ಪ್ರಕರಣ ಇನ್ನೂ ತಣ್ಣಗಾಗಿಲ್ಲ. ಅಲ್ಲು ಅರ್ಜುನ್ ಒಂದು ದಿನದ ಮಟ್ಟಿಗೆ ಜೈಲಿನಲ್ಲಿ ಕಾಲ ಕಳೆಯಬೇಕಾಗಿ ಬಂದಿತ್ತು. ತೆಲಂಗಾಣ ಸರ್ಕಾರ ಟಾಲಿವುಡ್ ನಟರ ವಿರುದ್ಧ ಮುನಿಸಿಕೊಂಡಿರೋದು ಈ ಘಟನೆಯಿಂದ ಸ್ಪಷ್ಟವಾಗಿ ಗೊತ್ತಾಗಿತ್ತು. ಇಷ್ಟೆಲ್ಲ ಆದ್ಮೇಲೆ ಉಳಿದ ನಟರು ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಜೂ.ಎನ್‌ಟಿಆರ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ದೇವರ ಪ್ರಿ-ರಿಲೀಸ್ ವೇಳೆ ಅಭಿಮಾನಿಗಳನ್ನು ಭೇಟಿ ಮಾಡುವ ಅವಕಾಶವಿತ್ತು. ಆದರೆ, ಆ ಇವೆಂಟ್ ಕ್ಯಾನ್ಸಲ್ ಆಗಿದ್ದರಿಂದ ತನ್ನ ಅಭಿಮಾನಿಗಳನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗಿರಲಿಲ್ಲ. ಜೂ.ಎನ್‌ಟಿಆರ್ ಹಾಗೂ ಅವರ ಅಭಿಮಾನಿಗಳು ಭೇಟಿಯಾಗದ ಬಹಳ ದಿನಗಳಾಗಿದೆ. ಈ ಅಂತರವನ್ನು ಕಡಿಮೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಆದರೆ, ಪರಿಸ್ಥಿತಿ ಬದಲಾಗಿದ್ದರಿಂದ ಪರದಾಡುತ್ತಿದ್ದಾರೆ ಅನ್ನೋದು ಸುದ್ದಿ.
ಇನ್ನು ಜೂ.ಎನ್‌ಟಿಆರ್ ಅವರನ್ನು ಭೇಟಿ ಮಾಡುವುದಕ್ಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಅವರಿಗಾಗಿ ಮನೆಯ ಮುಂದೆ ಕಾಯುತ್ತಿದ್ದಾರೆ. ಹೀಗಾಗಿ ತನ್ನ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ. ಇದು ಹೊರಬಿದ್ದ ಬಳಿಕ ಫ್ಯಾನ್ಸ್ ಅನ್ನು ಭೇಟಿ ಮಾಡುವುದಕ್ಕೆ ತೆಲುಗು ಸೂಪರ್‌ಸ್ಟಾರ್ ಪರದಾಡುತ್ತಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಅಂದ್ಹಾಗೆ ಈಗಾಗಲೇ ರವಾನಿಸಿರುವ ಸಂದೇಶದಲ್ಲಿ ಪೊಲೀಸರ ಸಂಪರ್ಕದಲ್ಲಿ ಇದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ತನ್ನ ಮೇಲೆ ಅಪಾರ ಪ್ರೀತಿ ಹಾಗೂ ಗೌರವವನ್ನು ತೋರಿಸುತ್ತಿರುವುದಕ್ಕೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹಾಗೇ ಜೂ.ಎನ್‌ಟಿಆರ್ ಕೂಡ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ಕಾತುರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಹಾಗೇ ಇದಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದ್ದು, ಅವರಿಂದ ಅನುಮತಿಯನ್ನು ಪಡೆಯುತ್ತಿರುವುದಾಗಿ ಸಂದೇಶದಲ್ಲಿ ತಿಳಿಸಿದ್ದಾರೆ.
ಅಭಿಮಾನಿಗಳನ್ನು ದೊಡ್ಡ ಮಟ್ಟದಲ್ಲಿ ಭೇಟಿ ಮಾಡುವುದಕ್ಕೆ ತಯಾರಿಗಳು ನಡೆಯುತ್ತಿವೆ. ಈ ವೇಳೆ ಯಾವುದೇ ರೀತಿ ಭದ್ರತಾ ಸಮಸ್ಯೆ ಹಾಗೂ ಗಲಾಟೆಗಳು ಸಂಭವಿಸದಂತೆ ಮುಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ಕಾರಣಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ತಾಳ್ಮೆಯಿಂದ ಇರಬೇಕು ಎಂದು ಅಭಿಮಾನಿಗಳಿಗೆ ಜೂ.ಎನ್‌ಟಿಆರ್ ಮನವಿಯನ್ನು ಮಾಡಿಕೊಂಡಿದ್ದಾರೆ.
ಜೂ.ಎನ್‌ಟಿಆರ್ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಿಂದ ಪಾದಯಾತ್ರೆ ಮಾಡಿಕೊಂಡು ಬರುತ್ತಿರುವುದು ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಅದನ್ನು ಮಾಡಬಾರದು . ನಿಮ್ಮ ಯೋಗಕ್ಷೇಮ ಹಾಗೂ ಸುರಕ್ಷತೆ ತುಂಬಾನೇ ಮುಖ್ಯ ಎಂದು ಹೇಳಿದ್ದಾರೆ. ಇನ್ನು ಜೂ.ಎನ್‌ಟಿಆರ್ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ಹೊರಟಿರುವುದು ರಾಜಕೀಯ ವಲಯದಲ್ಲೂ ಚರ್ಚೆಯಾಗುತ್ತಿದೆ. ಇದು ಕೇವಲ ಅಭಿಮಾನಿಗಳ ಭೇಟಿ ಅಷ್ಟೇನಾ? ಇಲ್ಲಾ ರಾಜಕೀಯವಾಗಿ ಏನಾದರೂ ಪ್ಲ್ಯಾನ್ ಇದೆಯಾ? ಎಂಬುವುದನ್ನು ಎದುರು ನೋಡುತ್ತಿದ್ದಾರೆ. ಯಾಕಂದ್ರೆ ನಂದಮೂರಿ ಕುಟುಂಬದಿಂದ ಜೂ.ಎನ್‌ಟಿಆರ್ ದೂರು ಉಳಿದು ಬಹಳ ದಿನಗಳಾಗಿವೆ. ಹೀಗಾಗಿ ಏನಾದರೂ ಮಾಸ್ಟರ್ ಪ್ಲ್ಯಾನ್ ಮಾಡಿರಬಹುದು ಎಂಬುವುದು ಇನ್ನೊಂದು ಚರ್ಚೆ.


Click it and Unblock the Notifications











