Devara Box Office Day 3: 3ನೇ ದಿನವೂ 'ದೇವರ' ಅಬ್ಬರ; ಕರ್ನಾಟಕದಲ್ಲೂ ಭರ್ಜರಿ ಕಲೆಕ್ಷನ್!
ಜೂ.ಎನ್‌ಟಿಆರ್ ಸಿನಿಮಾ 'ದೇವರ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ರಿಲೀಸ್ ಆಗಿ ಮೂರು ದಿನಗಳಾಗಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಜೂ.ಎನ್‌ಟಿಆರ್, ಜಾಹ್ನವಿ ಕಪೂರ್ ಹಾಗೂ ಸೈಫ್ ಅಲಿಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, 'ದೇವರ' ಪಾರ್ಟ್ 1ಗೆ ವಿಶ್ವದಾದ್ಯಂತ ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ.
'ದೇವರ' ಸಿನಿಮಾ ಕಳೆದ ಮೂರು ದಿನಗಳಿಂದ ದೇಶಾದ್ಯಂತ ಸದ್ದು ಮಾಡುತ್ತಿದೆ. ಹಾಗೇ ವಿದೇಶದಲ್ಲೂ ಕಲೆಕ್ಷನ್ ಏನೂ ಕಮ್ಮಿಯಿಲ್ಲ. ಕಳೆದ ಮೂರು ದಿನಗಳಲ್ಲಿ 'ದೇವರ' ಕಲೆಕ್ಷನ್ ದಾಖಲೆ ಮಾಡುವತ್ತ ಮುನ್ನುತ್ತಿದೆ. ಮೂರನೇ ದಿನ ಅಂದರೆ, ನಿನ್ನೆ (ಸೆಪ್ಟೆಂಬರ್ 29) ಸಿನಿಮಾದ ಕಲೆಕ್ಷನ್‌ನಲ್ಲಿ ಶೇ.5ರಷ್ಟು ಏರಿಕೆ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ.

ಜೂ.ಎನ್‌ಟಿಆರ್‌ಗೆ ಕರ್ನಾಟಕದಲ್ಲೂ ಫ್ಯಾನ್ಸ್ ಇದ್ದಾರೆ. ಹೀಗಾಗಿ ಕರ್ನಾಟಕದಲ್ಲೂ ಉತ್ತಮ ಗಳಿಕೆ ಕಂಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಸುಮಾರು 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಿದ್ದರು. ಮೂರನೇ ದಿನವೂ ವಿಶ್ವದಾದ್ಯಂತ ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಹಾಗಿದ್ದರೆ, ಮೂರನೇ ದಿನ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ?
3ನೇ ದಿನ 'ದೇವರ' ಕಲೆಕ್ಷನ್ ಎಷ್ಟು?
ವೀಕೆಂಡ್‌ನಲ್ಲಿ 'ದೇವರ' ಸಿನಿಮಾ ಕಲೆಕ್ಷನ್ ಚೆನ್ನಾಗಿ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಎಕ್ಸ್‌ಪೆಕ್ಟ್ ಮಾಡಿದಂತೆ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಆಗಿದೆ. ಭಾನುವಾರದಂದು (ಸೆಪ್ಟೆಂಬರ್ 29) ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆ ಸೇರಿ ಒಟ್ಟು ಐದು ಭಾಷೆಗಳಿಂದ 40.3 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಟ್ರ್ಯಾಕರ್ Sacnilk ವರದಿ ಮಾಡಿದೆ. ಹಾಗೇ ವಿಶ್ವದಾದ್ಯಂತ 50 ಕೋಟಿ ರೂಪಾಯಿ ಆಗಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ ಎಷ್ಟು?
ಜೂ.ಎನ್‌ಟಿಆರ್ ಕನ್ನಡಿಗರಿಗೂ ಚಿರಪರಿಚಿತ. ಕರ್ನಾಟಕಕ್ಕೆ ಬಂದಾಗಲೆಲ್ಲ ಕನ್ನಡದಲ್ಲೇ ಮಾತಾಡುವ ಜೂ.ಎನ್‌ಟಿಆರ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ಕರ್ನಾಟಕದಲ್ಲೂ ಈ ಸಿನಿಮಾ ಕಳೆದ ಮೂರು ದಿನಗಳಿಂದ ಜೋರಾಗಿಯೇ ಸದ್ದು ಮಾಡಿದೆ. ಮೊದಲ ದಿನ 10 ಕೋಟಿ ರೂ., ಎರಡನೇ ದಿನ 5 ರಿಂದ 6 ಕೋಟಿ ರೂ. ಹಾಗೂ ಮೂರನೇ ದಿನ 8 ಕೋಟಿ ರೂ. ಆಸುಪಾಸು ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯದಲ್ಲಿ ಆಗುತ್ತಿರುವ ಚರ್ಚೆ.
ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು?
ಜೂ.ಎನ್‌ಟಿಆರ್ 'ದೇವರ' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಬಂಪರ್ ಬಾರಿದೆ. ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಳ್ಳಬೇಡಿದೆ. ಆದರೆ, ಎರಡನೇ ದಿನ 'ದೇವರ' ತಂಡವೇ ಅನೌನ್ಸ್ ಮಾಡಿದಂತೆ ವಿಶ್ವದಾದ್ಯಂತ 243 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದಕ್ಕೆ ಇನ್ನೊಂದು 50 ಕೋಟಿ ಸೇರಿದರೆ, ವಿಶ್ವದಾದ್ಯಂತ 300 ಕೋಟಿ ರೂಪಾಯಿ ದಾಟಿದೆ ಎಂದು ಲೆಕ್ಕ ನೀಡಲಾಗುತ್ತಿದೆ.
ಸೋಮವಾರದಿಂದ ಅಸಲಿ ಆಟ
ಯಾವುದೇ ಸಿನಿಮಾ ಸೋಮವಾರದಿಂದ ಹೇಗೆ ಕಲೆಕ್ಷನ್ ಆಗುತ್ತೆ ಅನ್ನೋದು ಕುತೂಹಲ. ಒಂದು ವೇಳೆ ಸಿನಿಮಾ ಸೋಮವಾರವೂ ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿದ್ದರೆ, ಇನ್ನೊಂದು ವಾರ ಕಮ್ಮಿ ಅಂದರೂ 150 ಕೋಟಿ ರೂಪಾಯಿ ಕಲೆ ಹಾಕಬಹುದು. ಹಾಗೇ ದಸರಾ ಹಬ್ಬದ ಅಡ್ವಾಂಟೆಜ್ ಕೂಡ ಸಿಗಲಿದೆ. ಒಟ್ಟು ಲೈಫ್ ಟೈಮ್ ಕಲೆಕ್ಷನ್ 500 ಕೋಟಿ ರೂಪಾಯಿ ಎಂದು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications











