ಜೂ.ಎನ್‌ಟಿಆರ್‌ಗೆ ವೀಕ್ ಕಾಣ್ತಿರೋ ಪ್ರಶಾಂತ್ ನೀಲ್ ಸಿನಿಮಾಗಾಗಿನಾ? ಇಲ್ಲ ಕಾರಣ ಬೇರೆ ಇದೆಯಾ?
ಸೆಲೆಬ್ರೆಟಿಗಳು ಅಂದ್ಮೇಲೆ ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಲೇ ಇರುತ್ತಾರೆ. ಒಮ್ಮೆ ಸಣ್ಣಗಾಗುತ್ತಾರೆ. ಇನ್ನೊಮ್ಮೆ ದಪ್ಪಗಾಗುತ್ತಾರೆ. ಮಗದೊಮ್ಮೆ ಸಿಕ್ಸ್ ಪ್ಯಾಕ್ ಮಾಡಿ ಅಚ್ಚರಿಯನ್ನೂ ಹುಟ್ಟಿಸಿ ಬಿಡುತ್ತಾರೆ. ಆಮಿರ್ ಖಾನ್, ಸಲ್ಮಾನ್ ಖಾನ್, ತಮಿಳು ನಟ ವಿಕ್ರಮ್, ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಇವರೆಲ್ಲರೂ ಸಿನಿಮಾಗಾಗಿ ತಮ್ಮ ದೇಹದ ತೂಕವನ್ನು ಕಳೆದುಕೊಂಡಿದ್ದರು. ಈಗ ದಿಢೀರನೇ ಜೂ.ಎನ್‌ಟಿಆರ್ ಅನ್ನು ನೋಡಿ ಅವರ ಅಭಿಮಾನಿಗಳು ಕಂಗಾಲಾಗಿದ್ದಾರೆ.
ಜೂ.ಎನ್‌ಟಿಆರ್ ಒಂದು ಪ್ರಮೋಷನಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್‌ನ ಟ್ರೆಂಡ್ ಬದಲಿಸಿದ 'ಶಿವ' ಸಿನಿಮಾ ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತೆ ತೆರೆಮೇಲೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಟಾಲಿವುಡ್ ಸೂಪರ್‌ಸ್ಟಾರ್‌ಗಳು ತಮಗೇನಿಷ್ಟ ಅನ್ನೋ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಜೂ.ಎನ್‌ಟಿಆರ್ ಅನ್ನು ನೋಡಿ ಅಭಿಮಾನಿಗಳು ಕಂಗಾಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅದೇ ಚರ್ಚೆ.

ಟಾಲಿವುಡ್‌ನ ಯಂಗ್ ಟೈಗರ್ ಜೂ.ಎನ್‌ಟಿಆರ್ ಫಿಟ್ನೆಸ್‌ಗೆ ಫೇಮಸ್. ಪ್ರತಿಯೊಂದು ಸಿನಿಮಾದಲ್ಲಿಯೂ ಫಿಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ತೆರೆಕಂಡಿದ್ದ 'ವಾರ್ 2' ಸಿನಿಮಾದಲ್ಲಿಯೂ ಜೂ.ಎನ್‌ಟಿಆರ್ ಫಿಟ್ ಆಗಿಯೇ ಇದ್ದರು. ಆದ್ರೀಗ ಯಾಕೆ ಇಷ್ಟೊಂದು ಸಣ್ಣಗಾಗಿದ್ದಾರೆ? ಇದು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಿನಿಮಾಗೆ ಇರಬಹುದಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ, ಅಭಿಮಾನಿಗಳಿಗೆ ಸಣ್ಣಗಾಗಿದ್ದಾರೆ ಅಂತಷ್ಟೇ ಅಲ್ಲ. ವೀಕ್ ಆಗಿದ್ದಾರೆ ಅಂತಲೂ ಅನಿಸುತ್ತಿದೆ. ಟಾಲಿವುಡ್‌ನಲ್ಲಿ ಏನು ಚರ್ಚೆಯಾಗುತ್ತಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಕಾಂತಾರ' ಪ್ರಚಾರಕ್ಕೆ ಬಂದಿದ್ದ ಜೂ.ಎನ್‌ಟಿಆರ್
ಇತ್ತೀಚೆಗೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಜೂ.ಎನ್‌ಟಿಆರ್ ಕಾಣಿಸಿಕೊಂಡಿದ್ದರು. ಅಲ್ಲೂ ಕೂಡ ಸ್ವಲ್ಪ ಸಣ್ಣಗೇ ಕಾಣಿಸಿಕೊಂಡಿದ್ದರು. ಆದರೆ, ಅಭಿಮಾನಿಗಳು ಆತಂಕ ಪಡುವಂತೇನೂ ಇರಲಿಲ್ಲ. ಆದ್ರೀಗ ಜೂ.ಎನ್‌ಟಿಆರ್ ತೆಳ್ಳಗಾಗಿದ್ದು, ಬಳಲಿದಂತೆ ಕಾಣಿಸಿಸುತ್ತಿದ್ದಾರೆ. ಇದು ಅವರ ಅಭಿಮಾನಿಗಳನ್ನು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಲುಕ್ ನೋಡಿ ನೆಟ್ಟಿಗರು ಹಲವು ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಮದುವೆಯಲ್ಲಿ ಬಳಲಿದಂತೆ ಕಂಡಿದ್ದ ನಟ
ಜೂ.ಎನ್‌ಟಿಆರ್ ಇತ್ತೀಚೆಗೆ ಅವರ ಮೈದುನನ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಸದಾ ಉತ್ಸಾಹದಿಂದ ಹಾಗೂ ಚೈತನ್ಯದಿಂದ ಕಾಣುತ್ತಿದ್ದ ಜೂ.ಎನ್‌ಟಿಆರ್ ಬಳಲಿದಂತೆ ಕಂಡಿದ್ದರು. ಆ ವೇಳೆ ಕೂಡ ಮದುವೆಗಿಂತ ಹೆಚ್ಚಾಗಿ ತಮ್ಮ ನೆಚ್ಚಿನ ನಟನ ಲುಕ್ ಬಗ್ಗೆನೇ ಚರ್ಚೆಯಾಗಿತ್ತು. ಈಗಂತೂ ಇಷ್ಟಕ್ಕೆಲ್ಲ ಕಾರಣ ಪ್ರಶಾಂತ್ ನೀಲ್ ಎಂದು ಅಭಿಮಾನಿಗಳು ಬೊಟ್ಟು ಮಾಡಿ ತೋರಿಸುತ್ತಿದ್ದರೆ.
ಡಬಲ್ ರೋಲ್‌ಗಾಗಿ ಈ ಕಸರತ್ತು
ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಡ್ರ್ಯಾಗನ್' ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದಲ್ಲಿ ಜೂ.ಎನ್‌ಟಿಆರ್ ಡಬಲ್ ರೋಲ್ ಮಾಡುತ್ತಿದ್ದಾರೆ. ತಂದೆ ಹಾಗೂ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಮಗನ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ಈ ಪಾತ್ರಕ್ಕಾಗಿ ಜೂನಿಯರ್ ಎನ್‌ಟಿಆರ್ ತೀರಾ ಸಣ್ಣಗಾಗಿ ಕಾಣಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ ಜೂ.ಎನ್‌ಟಿಆರ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿಲ್ಲವೆಂದು ಅವರ ಆಪ್ತ ಮೂಲಗಳು ಹೇಳುತ್ತಿವೆ.
10 ತಿಂಗಳಿನಿಂದ ಡಯೆಟ್?
ಜೂನಿಯರ್ ಎನ್‌ಟಿಆರ್ 'ಡ್ರ್ಯಾಗನ್' ಸಿನಿಮಾ ಒಪ್ಪಿಕೊಳ್ಳುತ್ತಿದ್ದಂತೆ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸಿದ್ದರು. ಟಾಲಿವುಡ್ ಮಾಧ್ಯಮಗಳಲ್ಲಿ ವರದಿಯಾದಂತೆ ಈ ವರ್ಷದ ಆರಂಭದಲ್ಲೇ, ಅಂದರೆ, ಫೆಬ್ರವರಿಯಿಂದಲೇ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಈಗ ತೂಕವನ್ನು ಇಳಿಸಿಕೊಂಡು ಸಣ್ಣಗಾಗಿದ್ದಾರೆಂದು ವರದಿಗಳಾಗಿವೆ. ಆದರೆ, ಅಭಿಮಾನಿಗಳಿಗೆ ತಮ್ಮ ಲುಕ್ ಬಗ್ಗೆ ಜೂ.ಎನ್‌ಟಿಆರ್ ಇನ್ನೂ ಕ್ಲಾರಿಟಿ ಕೊಟ್ಟಿಲ್ಲ.


Click it and Unblock the Notifications











