ಪ್ರಭಾಸ್ 'ಕಲ್ಕಿ 2898 AD'ಗೆ ವಿಶ್ವದಾದ್ಯಂತ ಭರ್ಜರಿ ರೆಸ್ಪಾನ್ಸ್; ಕರ್ನಾಟಕದಲ್ಲಿ ಹೇಗಿದೆ ಅಡ್ವಾನ್ಸ್ ಬುಕಿಂಗ್?
ಭಾರತದ ಅತ್ಯಂತ ದುಬಾರಿ ಬಜೆಟ್ ಸಿನಿಮಾ 'ಕಲ್ಕಿ 2898 AD'. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾಗೆ ಇನ್ನೆರಡು ದಿನಗಳಲ್ಲಿ ರಿಲೀಸ್ ಆಗುತ್ತಿದೆ. ಕಳೆದ 15 ದಿನಗಳಿಂದ ಚಿತ್ರತಂಡ ನಿರಂತರವಾಗಿ ಪ್ರಚಾರ ಮಾಡುತ್ತಿದೆ. ಈ ಕಾರಣಕ್ಕೆ 'ಕಲ್ಕಿ' ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ.
'ಕಲ್ಕಿ 2898 AD' ಸಿನಿಮಾ ರಿಲೀಸ್ ಹಿನ್ನೆಲೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಈಗಾಗಲೇ ಸಿನಿಪ್ರಿಯರು ಈ ಸಿನಿಮಾ ನೋಡುವುದಕ್ಕೆ ಉತ್ಸಾಹ ತೋರಿಸಿದ್ದಾರೆ. ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೈನ್ಸ್ ಫಿಕ್ಷನ್ ಕಮ್ ಆಕ್ಷನ್ ಸಿನಿಮಾ ವಿಶ್ವದಾದ್ಯಂತ ಕುತೂಹಲವನ್ನು ಕೆರಳಿಸಿದೆ. ಜೂನ್ 27ರಂದು ಸಿನಿಮಾ ರಿಲೀಸ್ ಆಗುತ್ತಿರೋ ಬೆನ್ನಲ್ಲೇ ಅಡ್ವಾನ್ಸ್ ಬುಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿತ್ತು.

ಭಾರತದಲ್ಲಿ ಕಲ್ಕಿ ಅಡ್ವಾನ್ಸ್ ಬುಕಿಂಗ್ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಬುಕ್ ಮೈ ಶೋ ಅಧಿಕೃತ ವೆಬ್ ಸೈಟ್‌ನಲ್ಲಿ ಕಳೆದ ಎರಡು ಮೂರು ದಿನಗಳಿಂದ ಹೆಚ್ಚೆಚ್ಚು ಟಿಕೆಟ್‌ಗಳು ಬುಕ್ ಆಗುತ್ತಿವೆ. ಈ ಅಂಕಿ ಅಂಶಗಳನ್ನು ಗಮನದಲ್ಲಿಟ್ಟಿಕೊಂಡು ಮೊದಲ ದಿನ ಕಲ್ಕಿ ಸಿನಿಮಾ ಕೇವಲ ಅಡ್ವಾನ್ಸ್ ಬುಕಿಂಗ್‌ನಿಂದಲೇ 200 ಕೋಟಿ ರೂಪಾಯಿಗೂ ಅಧಿಕ ಗಳಿಸಬಹುದೆಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕ ಹಾಕುತ್ತಿದ್ದಾರೆ. ಹಾಗಿದ್ದರೆ, ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ಆಗಬಹುದು?
ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಕಲ್ಕಿ 2898 AD' ಸಿನಿಮಾ ಮೊದಲ ದಿನವೇ 200 ಕೋಟಿ ರೂಪಾಯಿ ಕಲೆ ಹಾಕುತ್ತಿರುವ ಮೂರನೇ ಸಿನಿಮಾ ಆಗುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ. ಈ ಹಿಂದೆ ಬಾಲಿವುಡ್ 2 ಹಾಗೂ RRR ಸಿನಿಮಾಗಳು ವಿಶ್ವದಾದ್ಯಂತ ಮೊದಲ ದಿನ ದಾಖಲೆಯನ್ನು ಬರೆದಿತ್ತು. ಈ ಕಾರಣಕ್ಕೆ 'ಕಲ್ಕಿ 2898 AD' ಸಿನಿಮಾ ವರ್ಲ್ಡ್‌ವೈಡ್ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಬಹುದೆಂದು ನಿರೀಕ್ಷೆ ಮಾಡಲಾಗುತ್ತಿದೆ.

ಅಡ್ವಾನ್ಸ್ ಬುಕಿಂಗ್‌ಗೆ ಸಿನಿಪ್ರಿಯರು ಆಸಕ್ತಿ ತೋರುತ್ತಿದ್ದಾರೆ. ಈ ಕಾರಣಕ್ಕೆ 'ಕಲ್ಕಿ 2898 AD' ಭಾರತದಲ್ಲಿಯೂ ಉತ್ತಮ ಗಳಿಕೆ ಕಾಣಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಈ ಸಿನಿಮಾ ಮೊದಲ ದಿನ 120 ರಿಂದ 140 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿದೆ. ಕೇವಲ ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಬಹುದು ನಿರೀಕ್ಷೆ ಮಾಡಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ 'ಕಲ್ಕಿ 2898 AD'ಗೆ ಉತ್ತಮ ರೆಸ್ಪಾನ್ಸ್ ಸಿಗಬಹುದು. ಕರ್ನಾಟಕ, ತಮಿಳುನಾಡು, ಕೇರಳದಿಂದ 20 ಕೋಟಿ ಯಿಂದ 30 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಗೆಸ್ ಮಾಡುತ್ತಿದ್ದಾರೆ. ಇದರಲ್ಲಿ ಕರ್ನಾಟಕದಿಂದ ಉತ್ತಮ ಗಳಿಕೆ ಆಗಬಹುದೆಂದು ನಿರೀಕ್ಷಿಸಲಾಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಕರ್ನಾಟಕದಲ್ಲಿ ಮೊದಲ ದಿನ 3 ರಿಂದ 5 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗುವ ಸಾಧ್ಯತೆಯಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾಚಾರ ಹಾಕಿದ್ದಾರೆ.
'ಕಲ್ಕಿ 2898 AD'ಸಿನಿಮಾಗಾಗಿ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಿದ ಕೇವಲ ಒಂದು ಗಂಟೆಯೊಳಗೆ ಬುಕ್ ಮೈ ಶೋನಲ್ಲಿ 36 ಸಾವಿರ ಟಿಕೆಟ್‌ಗಳು ಖರೀದಿ ಆಗಿವೆಯಂತೆ. ಇದೂವರೆಗೂ ಭಾರತದಲ್ಲಿ ಸುಮಾರು 2 ಲಕ್ಷ ಟಿಕೆಟ್‌ಗಳು ಸೋಲ್ಡ್ ಆಗಿವೆ. ಇನ್ನೂ ಹಲವು ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಬುಕಿಂಗ್ ಓಪನ್ ಆಗಬೇಕಿದ್ದು, ಇದು ದುಪ್ಪಟ್ಟಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ಕೇವಲ ಉತ್ತರ ಅಮೆರಿಕದಲ್ಲಿ ಒಂದು ಲಕ್ಷದ 25 ಸಾವಿರ ಟಿಕೆಟ್‌ಗಳು ಖರೀದಿ ಆಗಿವೆ ಎನ್ನಲಾಗಿದೆ. ಇನ್ನೊಂದು ಕಡೆ ಟಿಕೆಟ್ ಬೆಲೆ ಕೂಡ ಏರಿಕೆ ಮಾಡಲಾಗಿದೆ ಎನ್ನಲಾಗಿದೆ.


Click it and Unblock the Notifications











