"ಅತ್ಯಾಚಾರಿಗಳನ್ನು ನಿಂದಿಸಬಾರದು, ನಾವು ಅವರಿಗೆ ಮಹಾಭಾರತ ಉದಾಹರಣೆಯಾಗಿ ಕೊಟ್ಟಿದ್ದೀವಿ"- ಕಮಲ್ ಹೇಳಿಕೆ ವೈರಲ್
ತಮಿಳು ನಟ ಕಮಲ್ ಹಾಸನ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಗೆ ಪದೇ ಪದೇ ಸುದ್ದಿ ಆಗುತ್ತಾರೆ. ಇತ್ತೀಚೆಗೆ ಕನ್ನಡ ಭಾಷೆಯ ಬಗ್ಗೆ ಅವರು ನೀಡಿದ್ದ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಕರ್ನಾಟಕದಲ್ಲಿ ಕಮಲ್ ವಿರುದ್ಧ ಪ್ರತಿಭಟನೆಗಳು ನಡೆದವು. ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದವು.
ಕಮಲ್ ಹಾಸನ್ ಕೊನೆಗೂ ಕ್ಷಮೆ ಕೇಳಲೇ ಇಲ್ಲ. ನಾನು ಪ್ರೀತಿಯಿಂದ ಹೇಳಿದ ಮಾತು. ಅದಕ್ಕಾಗಿ ಕ್ಷಮೆ ಕೇಳಲ್ಲ ಎಂದರು. ಕರ್ನಾಟಕದಲ್ಲಿ ಅವರ 'ಥಗ್ ಲೈಫ್' ಸಿನಿಮಾ ಬಿಡುಗಡೆಯಾಗದೇ ನಷ್ಟ ಎದುರಿಸಿದರೂ ಕ್ಷಮೆ ಮಾತ್ರ ಕೇಳಲಿಲ್ಲ. ಇದೀಗ ಮಹಾಭಾರತ ಕಾವ್ಯದ ಬಗ್ಗೆ 10 ವರ್ಷಗಳ ಹಿಂದೆ ಕಮಲ್ ನೀಡಿದ್ದ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟಾಕ್ಕಿದೆ. ಅತ್ಯಾಚಾರಿಗಳನ್ನು ನಾವು ದೂಷಿಸುವುದರಲ್ಲಿ ತಪ್ಪಿಲ್ಲ, ಕಾರಣ ಅವರಿಗೆ ನಾವು ಮಹಾಭಾರತದಂತಹ ಉದಾಹರಣೆ ಕೊಟ್ಟಿದ್ದೀವಿ ಎಂದು ಹೇಳಿದ್ದರು.

ಬಹಳ ಹಿಂದೆ ಕಮಲ್ ನೀಡಿದ್ದ ಹೇಳಿಕೆ ಈಗ ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಟಿವಿ5 ನ್ಯೂಸ್ ತೆಲುಗು ವಾಹಿನಿ ಸಂದರ್ಶನದಲ್ಲಿ ಕಮಲ್ ಹಾಸನ್ ಮಾತನಾಡಿದ್ದರು. ಆ ಸಂದರ್ಶನದ ತುಣುಕು ಈಗ ವೈರಲ್ ಆಗುತ್ತಿದೆ. ಮಹಾಭಾರತ ಕಾವ್ಯದ ಬಗ್ಗೆ ಕಮಲ್ ನೀಡಿದ್ದ ಹೇಳಿಕೆ ಕೆಲವರ ಕಂಗಣ್ಣಿಗೆ ಗುರಿಯಾಗಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ಇದಕ್ಕೆ ಪರಿಹಾರ ಸಿಗುತ್ತಿಲ್ಲ. ನೀವು ಏನಾದರೂ ಪರಿಹಾರ ಸೂಚಿಸುತ್ತೀರಾ? ಎನ್ನುವ ಪ್ರಶ್ನೆಗೆ ಕಮಲ್ ಉತ್ತರಿಸಿದ್ದರು. "ಒಂದು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಅತ್ಯಾಚಾರಿಗಳನ್ನು ದೂಷಿಸಬಾರದು. ಯಾಕಂದರೆ ನಾವು ಅವರಿಗೆ ಮಹಾಭಾರತ ಕಾವ್ಯವನ್ನು ಉದಾಹರಣೆಯಾಗಿ ಕೊಟ್ಟಿದ್ದೇವೆ. ನಿಮ್ಮ ಪತ್ನಿಯನ್ನು ಪಣಕ್ಕೆ ಇಡಬಹುದು, ಕಳೆದುಕೊಳ್ಳಬಹುದು ಎನ್ನುವ ತಪ್ಪು ಕಥೆಯನ್ನು ಅನುಸರಿಸಲು ಕೊಟ್ಟಿದ್ದೇವೆ. ತಪ್ಪು ಉದಾಹರಣೆಯನ್ನು ಅನುಸರಿಸಲು ಹೇಳುತ್ತಿದ್ದೇವೆ. ಅದನ್ನು ಪವಿತ್ರ ಗ್ರಂಥ ಮಾಡಿಬಿಟ್ಟಿದ್ದೀವಿ. ಹಾಗಾಗಿ ಜನ ಈ ರೀತಿ ಮಾಡ್ತಾರೆ. ಆ ಬಳಿಕ ಸಮಾಜ ಬದಲಾಗುತ್ತಾ ಬಂದಿದೆ. ಅದಕ್ಕೆ ಹೇಳುವುದು ನೀವು ಇಷ್ಟಪಟ್ಟ ಹುಡುಗ, ಹುಡುಗಿಯನ್ನು ಮದುವೆ ಆಗಿ ಎಂದು" ಕಮಲ್ ಹೇಳಿದ್ದರು.
ಕಮಲ್ ಹಾಸನ್ ಈಗಾಗಲೇ 'ಕಲ್ಕಿ 2898AD' ಚಿತ್ರದಲ್ಲಿ ನಟಿಸಿದ್ದಾರೆ. ಅದರ ಸೀಕ್ವೆಲ್ ಕೂಡ ಬರಬೇಕಿದೆ. ಸದ್ಯ ಆ ಚಿತ್ರದಿಂದ ದೀಪಿಕಾ ಪಡುಕೋಣೆ ಅವರನ್ನು ಕೈಬಿಡಲಾಗಿದೆ. ಚಿತ್ರದಲ್ಲಿ ಮಹಾಭಾರತದ ಅಂಶಗಳಿವೆ. ಕಮಲ್ 10 ವರ್ಷಗಳ ಹಿಂದೆ ಮಹಾಭಾರತದ ಬಗ್ಗೆ ಈ ರೀತಿ ಮಾತನಾಡಿದ್ದರು. ಹಾಗಾಗಿ ಅವರನ್ನು ಕೂಡ ಕೈಬಿಟ್ಟು ಸಿನಿಮಾ ಮಾಡಿ ಎಂದು ಕೆಲವರು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಹಾಗಾಗಿ ಕಮಲ್ ಹಳೇ ಹೇಳಿಕೆ ವೈರಲ್ ಆಗುವಂತಾಗಿದೆ.
ಏಳೆಂಟು ವರ್ಷಗಳ ಹಿಂದೆ ಕಮಲ್ ಹೇಳಿಕೆ ಭಾರೀ ಚರ್ಚೆ ಹುಟ್ಟಾಕಿ ಅವರ ವಿರುದ್ಧ ದೂರುಗಳು ದಾಖಲಾಗಿದ್ದವು. ಕಮಲ್ ವಿರುದ್ಧ ಪ್ರಣವಾನಂದ ಸ್ವಾಮೀಜಿ ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. 'ಥಗ್ ಲೈಫ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿತ್ತು. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆದರೆ ಸಿನಿಮಾ ಸೋತಿದ್ದರಿಂದ ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಪ್ರಯತ್ನ ಮಾಡಲಿಲ್ಲ.
ರಜನಿಕಾಂತ್ ಜೊತೆ ದಶಕಗಳ ಬಳಿಕ ಒಟ್ಟಿಗೆ ಸೇರಿ ಸಿನಿಮಾ ಮಾಡಲು ಕಮಲ್ ಹಾಸನ್ ಒಪ್ಪಿದ್ದಾರೆ. ಆದರೆ ಯಾರು ಈ ಸಿನಿಮಾ ನಿರ್ದೇಶನ ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಇನ್ನು ಕಮಲ್ ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಆಗಿದ್ದು ರಾಜಕೀಯರಂಗದಲ್ಲೂ ಬ್ಯುಸಿಯಾಗಿದ್ದಾರೆ.


Click it and Unblock the Notifications











