"ಶವವಿತ್ತು.. ಮುಖದ ಗುರುತೇ ಇರಲಿಲ್ಲ": ಸೌಂದರ್ಯಾ ಸಾವಿನ ಬಗ್ಗೆ ಪ್ರೇಮಾ ಭಾವುಕ!
ಸೌಂದರ್ಯಾ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸುಂದರ ನಟಿ. ಹೆಸರಿಗೆ ತಕ್ಕಂತೆ ಸೌಂದರ್ಯಾವಿತ್ತು. ಕನ್ನಡ, ತೆಲುಗು ಎರಡೂ ಭಾಷೆಗಳಲ್ಲೂ ಜನಪ್ರಿಯರಾಗಿದ್ದ ನಟಿಯೀಕೆ. ಎರಡೂ ಭಾಷೆಯ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ ಸೌಂದರ್ಯ ಸೈ ಎನಿಸಿಕೊಂಡಿದ್ದರು.
ಸೌಂದರ್ಯಾ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮಿಂಚಿದ್ದರು. ಈ ನಾಲ್ಕೂ ಭಾಷೆಗಳಲ್ಲಿ ನಟಿಸಿದ ನಟಿ ಸೌಂದರ್ಯಾ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಸುಮಾರು ದಶಕಗಳ ಕಾಲ ನಟಿ ಸ್ಟಾರ್ ಪಟ್ಟಕ್ಕೇರಿದ್ದರು.

ರವಿಚಂದ್ರನ್, ವಿಷ್ಣುವರ್ಧನ್, ಬಾಲಕೃಷ್ಣ, ನಾಗಾರ್ಜುನಾ, ವೆಂಕಟೇಶ್, ರಜನಿಕಾಂತ್ ಅಂತ ಸೂಪರ್‌ಸ್ಟಾರ್ ಜೊತೆ ನಟಿಸಿದ್ದ ಸೌಂದರ್ಯಾ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದರು. 2004ರಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದರು. ಈಗ ನಟಿ ಪ್ರೇಮಾ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸೌಂದರ್ಯಾ ಸಾವನ್ನು ನೆನೆದು ಭಾವುಕರಾಗಿದ್ದಾರೆ.
ಕಣ್ಣಿನಿಂದಲೇ ಸಾವಿರ ಭಾವನೆ ವ್ಯಕ್ತಪಡಿಸಬಲ್ಲ ನಟಿ
ಸೌಂದರ್ಯ ಹಾಗೂ ಪ್ರೇಮಾ ಇಬ್ಬರೂ ಆತ್ಮೀಯ ಸ್ನೇಹಿತೆಯರಾಗಿದ್ದರು. ಸೌಂದರ್ಯ ಜೊತೆ ಪ್ರೇಮಾ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಎರಡು ಕನ್ನಡ ಹಾಗೂ ಮತ್ತೆರಡು ತೆಲುಗು. 'ನಾನು ನನ್ನ ಹೆಂಡ್ತೀರು' ಹಾಗೂ 'ಆಪ್ತಮಿತ್ರ' ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ಶೂಟಿಂಗ್ ವೇಳೆ ಮತ್ತಷ್ಟು ಹತ್ತಿರವಾಗಿದ್ದಾಗಿ ಪ್ರೇಮಾ ಹೇಳಿಕೊಂಡಿದ್ದಾರೆ.
"ಶೂಟಿಂಗ್ ವೇಳೆ ಎಲ್ಲರೊಂದಿಗೂ ಆತ್ಮೀಯವಾಗಿ ಮಾತಾಡಿಕೊಳ್ಳುತ್ತಿದ್ದರು. ರಾಮ ನವಮಿ ಬಂತು ಅಂದ್ರೆ, ಎಲ್ಲರಿಗೂ ಪಾನಕ ಕುಡಿಸುತ್ತಿದ್ದರು. ಅಲ್ಲದೆ ಸೌಂದರ್ಯದ ವಿಚಾರದಲ್ಲಂತೂ ತುಂಬಾನೇ ಕಾಳವಿ ವಹಿಸುತ್ತಿದ್ದರು. ಆಹಾರವನ್ನೂ ಮಿತವಾಗಿ ಬಳಸುತ್ತಿದ್ದರು. ಸೌಂದರ್ಯಾ ನಟನೆ ಕೂಡ ತುಂಬಾನೇ ಸಹಜವಾಗಿತ್ತು. ಕಣ್ಣಿನಿಂದಲೇ ಸಾವಿರ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು." ಎಂದು ಪ್ರೇಮಾ ಯ್ಯೂಟ್ಯೂಬ್ ಚಾನೆಲ್ ಒಂದಕ್ಕೆ ಹೇಳಿಕೊಂಡಿದ್ದಾರೆ.

"ಶವವಿತ್ತು.. ಮುಖದ ಗುರುತೇ ಇರಲಿಲ್ಲ"
2004ರಲ್ಲಿ ಸೌಂದರ್ಯಾ ಚುನಾವಣ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಸೌಂದರ್ಯಾ ಸಹೋದರ ಅಮರ್‌ನಾಥ್ ಅವರೊಂದಿಗೆ ಪ್ರಚಾರಕ್ಕೆ ಮುಂದಾಗಿದ್ದರು. ಬೆಂಗಳೂರಿನಿಂದ ಆಂಧ್ರಪ್ರದೇಶದ ಕರೀಂನಗರಕ್ಕೆ ಪ್ರಚಾರಕ್ಕೆ ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪತನಗೊಂಡಿತ್ತು. ಈ ಅಪಘಾತದಲ್ಲಿ ಸೌಂದರ್ಯಾ ಜೊತೆ ಸಹೋದರ ಅಮರ್‌ನಾಥ್ ಕೂಡ ಸಾವನ್ನಪ್ಪಿದ್ದರು. ಆ ದಿನವನ್ನು ನೆನೆದು ಪ್ರೇಮಾ ಭಾವುಕರಾಗಿದ್ದಾರೆ.
"ಆ ದಿನ ನಾನು ಸೌಂದರ್ಯಾ ಮನೆಗೆ ಹೋಗಿದ್ದೆ. ಅಲ್ಲಿ ಸೌಂದರ್ಯಾ ಅವರ ಶವವನ್ನು ಬಾಕ್ಸ್‌ನಲ್ಲಿ ಇಡಲಾಗಿತ್ತು. ಅದರಲ್ಲಿ ಆಕೆಯ ಶವವಿತ್ತು. ಆದರೆ, ಮುಖದ ಗುರುತೇ ಸಿಗಲಿಲ್ಲ. ಅದನ್ನು ನೋಡಿ ಬೆಚ್ಚಿಬಿದ್ದಿದ್ದೆ. ಆ ವೇಳೆ ಕಲಾವಿದರ ಜೀವನ ಇಷ್ಟೇನಾ? ಅಂತ ಅನಿಸಿತ್ತು" ಎಂದು ಪ್ರೇಮಾ ನಟಿ ಸೌಂದರ್ಯಾ ಅವರನ್ನು ನೆನೆದು ಭಾವುಕರಾಗಿದ್ದಾರೆ.
12 ವರ್ಷಗಳಲ್ಲಿ 100 ಸಿನಿಮಾ
ನಟಿ ಸೌಂದರ್ಯಾ ಕನ್ನಡದಿಂದಲೇ ಸಿನಿಮಾ ಜರ್ನಿ ಆರಂಭ ಮಾಡಿದ್ದರು. ಎಸ್ ಸಿದ್ದಲಿಂಗಯ್ಯ ನಿರ್ದೇಶಿಸಿದ 'ಬಾ ನನ್ನ ಪ್ರೀತಿಸು' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ 'ಗಂಧರ್ವ' ಹೀಗೆ ಸಿನಿಮಾ ಜರ್ನಿ ಮುಂದುವರೆದಿತ್ತು. ಕನ್ನಡ ತೆಲುಗು ಅಂತ ಸುಮಾರು 12 ವರ್ಷಗಳ ಅಂತರದಲ್ಲಿ ನಟಿ ಸೌಂದರ್ಯ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.
ಕನ್ನಡದಲ್ಲೂ ಸೌಂದರ್ಯ ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ 'ಸಿಪಾಯಿ' ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ವಿಷ್ಣುವರ್ಧನ್, ರಮೇಶ್ ಅರವಿಂದ್ ಹಾಗೂ ಪ್ರೇಮಾ ಜೊತೆ ನಟಿಸಿದ 'ಆಪ್ತಮಿತ್ರ' ಕೂಡ ಸೂಪರ್ ಹಿಟ್ ಆಗಿತ್ತು. ಇದೇ ವೇಳೆ ಕನ್ನಡದಲ್ಲೇ 'ದ್ವೀಪ' ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆ ಸಿನಿಮಾಗೆ ನ್ಯಾಷನಲ್ ಅವಾರ್ಡ್ ಸಿಕ್ಕಿತ್ತು.


Click it and Unblock the Notifications











