ಪವನ್ ಕಲ್ಯಾಣ್ ಸಿನಿಮಾ ನಿರ್ದೇಶನ; ಕುಬೇರ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಧನುಷ್ ಹೇಳಿದ್ದೇನು?
ಧನುಷ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಕುಬೇರ' ಪ್ರೀ-ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆದಿದೆ. ತೆಲುಗು ನಿರ್ದೇಶಕ ಶೇಖರ್ ಕುಮ್ಮುಲ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಅದ್ಧೂರಿ ಇವೆಂಟ್‌ನಲ್ಲಿ 'ಕುಬೇರ' ಸಿನಿಮಾದ ಇಡೀ ಚಿತ್ರತಂಡ ಭಾಗಿಯಾಗಿತ್ತು. ಈ ಇವೆಂಟ್‌ಗೆ ಪ್ರಮುಖ ಅತಿಥಿಯಾಗಿ ಎಸ್‌ಎಸ್ ರಾಜಮೌಳಿ ಆಗಮಿಸಿದ್ದರು.
ಕುಬೇರ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಟ್ರೈಲರ್ ಕೂಡ ರಿಲೀಸ್ ಆಗಿದೆ. ಬಿಗ್ ಸ್ಟಾರ್ ಕಾಸ್ಟ್ ಹೊಂದಿರುವ 'ಕುಬೇರ' ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾಗೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. 'ಕುಬೇರ' ಸಿನಿಮಾ ಇದೇ ಜೂನ್ 20 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ ಪ್ರೀ ರಿಲೀಸ್ ಇವೆಂಟ್ ಅನ್ನು ಇಟ್ಟುಕೊಂಡಿದ್ದು, ಈ ವೇಳೆ ಧನುಷ್ ಅಪ್ಪನನ್ನು ನೆನೆದು ಭಾವುಕರಾಗಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಕುಬೇರ ಟ್ರೈಲರ್ ರಿಲೀಸ್ ಸಮಾರಂಭದ ಪ್ರಮುಖ ಆಕರ್ಷಣೆ ನಿರ್ದೇಶಕ ಎಸ್.ಎಸ್. ರಾಜಮೌಳಿ. ಅತಿಥಿಯಾಗಿ ಆಗಮಿಸಿದ್ದ ಎಸ್‌ಎಸ್ ರಾಜಮೌಳಿ 'ಕುಬೇರ' ಸಿನಿಮಾ ನಿರ್ದೇಶಕ ಶೇಖರ್ ಕಮ್ಮುಲ ಅವರನ್ನು ಹಾಡಿ ಹೊಗಳಿದ್ದಾರೆ. ಅವರು ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುವ ರೀತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದರೆ, ಇದೇ ಸಮಾರಂಭದಲ್ಲಿ ಧನುಷ್ ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್‌ಗೆ ನಿರ್ದೇಶನ ಮಾಡುವುದಾಗಿ ಹೇಳಿದ್ದಾರೆ. ಇದು ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ.
ಅಪ್ಪನ ನೆನೆದು ಧನುಷ್ ಭಾವುಕ
ಹೈದರಾಬಾದ್‌ನಲ್ಲಿ ನಡೆದ 'ಕುಬೇರ' ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ಸಿನಿಮಾದ ಬಗ್ಗೆ ಮಾತಾಡುತ್ತಿದ್ದ ಧನುಷ್ ಭಾವುಕರಾದರು. ತಂದೆಯ ಹಾರ್ಡ್‌ವರ್ಕ್ ಬಗ್ಗೆ ವೇದಿಕೆ ಮೇಲೆ ಭಾವುಕರಾಗಿ ಮಾತಾಡಿದ್ದಾರೆ. ಒಂದೊಂದು ರೂಪಾಯಿಗೂ ರಕ್ತ ಹಾಗೂ ಬೆವರು ಸುರಿಸಿದ್ದಾರೆ. ಏನಾದರೂ ಸಾಧಿಸಿ ತೋರಿಸಲೇಬೇಕು ಅಂತ ತುಂಬಾನೇ ಕಷ್ಟಪಟ್ಟಿದ್ದಾರೆ. ಇಂದು ನಾನೇನಾದರೂ ಸಾಧನೆ ಮಾಡಿದ್ದರೆ, ಅದು ಅವರ ಹಾರ್ಡ್‌ವರ್ಕ್‌ನಿಂದ ಎಂದು ಧನುಷ್ ಭಾವುಕರಾಗಿ ವೇದಿಕೆ ಮೇಲೆ ಮಾತಾಡಿದ್ದಾರೆ.
ಪವನ್ ಕಲ್ಯಾಣ್‌ಗೆ ನಿರ್ದೇಶಕ
ಹೈದರಾಬಾದ್‌ನ ವೇದಿಕೆಯ ಮೇಲೆ ಧನುಷ್ ತಮ್ಮ 'ಕುಬೇರ' ಸಿನಿಮಾ ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ ಒಂದು ಸಿನಿಮಾವನ್ನು ನಿರ್ದೇಶನ ಮಾಡಬೇಕು ಎಂದು ಆಸೆಯನ್ನು ವ್ಯಕ್ತಪಡಿಸಿದ್ದಾರೆ. "ನನಗೆ ಪವನ್ ಕಲ್ಯಾಣ್ ಸರ್ ಅವರಿಗೆ ಒಂದು ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಆಸೆಯಿದೆ." ಎಂದು ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಹಾಗೂ ತೆಲುಗು ಸಿನಿ ಪ್ರಿಯರಿಗೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಧನುಷ್ ಆಸೆಗೆ ಪವನ್ ಕಲ್ಯಾಣ್ ಹೇಗೆ ಪ್ರತಿಕ್ರಿಯೆ ನೀಡುತ್ತಾರೋ ಎನ್ನುವ ಕುತೂಹಲದಲ್ಲಿದ್ದಾರೆ.

ಧನುಷ್ 2ನೇ ತೆಲುಗು ಸಿನಿಮಾ
'ಕುಬೇರ' ಧನುಷ್ ನಟಿಸುತ್ತಿರುವ ಎರಡನೇ ತೆಲುಗು ಸಿನಿಮಾ ಹಾಗೂ 51ನೇ ತಮಿಳು ಸಿನಿಮಾ. ಹೀಗಾಗಿ ಈ ಸಿನಿಮಾ ಬಗ್ಗೆ ಧನುಷ್ ಕೂಡ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನಿರ್ದೇಶಕ ಶೇಖರ್ ಕಮ್ಮುಲ 'ಕುಬೇರ' ಸಿನಿಮಾದ ಕಥೆಯನ್ನು ಧನುಷ್ ನಟಿಸಿದ 'ಸರ್' ಸಿನಿಮಾಗೂ ಮುನ್ನವೇ ಹೇಳಿದ್ದರು. ಆವೇಳೆ ಎಲ್ಲರೂ ನಂಬರ್‌ಗಳನ್ನು ಹುಡುಕಿಕೊಂಡು ಹೊರಟಿದ್ದರು. ಇವರು ಮಾತ್ರ ಸಿನಿಮಾದ ಕಥೆಯ ಕಡೆಗೆ ಗಮನ ಹರಿಸಿದ್ದರು.
ನಾಗಾರ್ಜುನ ಹೇಳಿದ್ದೇನು?
ಈ ಸಿನಿಮಾದಲ್ಲಿ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ನಾಗಾರ್ಜುನ ಕೂಡ ಧನುಷ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. " ನಿಮ್ಮೊಂದಿಗೆ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು. ನೀವು ಪಾತ್ರದೊಳಗೆ ಹೇಗೆ ಪ್ರವೇಶ ಮಾಡುತ್ತೀರಂದು ನಾನು ಕಣ್ಣಾರೆ ನೋಡಿದ್ದೇನೆ. ಅದು ಅದ್ಭುತ. ಆ ದೇವರು ನಿಮಗೆ ಇನ್ನಷ್ಟು ಯಶಸ್ಸು ಕೊಡಲಿ. ನಾನು ನಿಮ್ಮೊಂದಿಗೆ ಕೆಲಸ ಮಾಡಿದ್ದೇನೆ ಎನ್ನುವುದೇ ನನಗೆ ಸಂತೋಷ ಎಂದು ಹೇಳಿದ್ದಾರೆ.


Click it and Unblock the Notifications











