ಸಿಎಂ ಜಗನ್ ಭೇಟಿ ಮಾಡಲು ಬಾಲಕೃಷ್ಣಗೆ ಆಹ್ವಾನ ನೀಡಿದ ಚಿರಂಜೀವಿ: ತಿರಸ್ಕರಿಸಿದ ಟಾಲಿವುಡ್ 'ಲೆಜೆಂಡ್'
ಕಳೆದ ಕೆಲವು ದಿನಗಳಿಂದ ಆಂಧ್ರ ಪ್ರದೇಶದಲ್ಲಿ ಸಿನಿಮಾ ಟಿಕೆಟ್ ದರದ ವಿಚಾರಕ್ಕೆ ಸಂಬಂಧಿಸಿದಂತೆ ವಾದ-ವಿವಾದಗಳು ನಡೆಯುತ್ತಿವೆ. ಸಿನಿಮಾ ಟಿಕೆಟ್ ಬೆಲೆಯನ್ನು ಕಡಿತಗೊಳಿಸಿದ್ದಕ್ಕೆ ಟಾಲಿವುಡ್ ತಾರೆಯರು ಬೇಸರ ವ್ಯಕ್ತಪಡಿಸಿದ್ದರು. ಕೆಲವು ದಿನಗಳ ಹಿಂದೆ ಈ ವಿಚಾರವಾಗಿ ಚರ್ಚೆ ಮಾಡಲು ಮೆಗಾಸ್ಟಾರ್ ಚಿರಂಜೀವಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ಭೇಟಿ ಮಾಡಿದ್ದರು. ಆದರೆ, ಆ ಭೇಟಿಯಲ್ಲಿ ತಾರ್ಕಿಕ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಈ ಕಾರಣಕ್ಕೆ ಚಿರಂಜೀವಿ ಮತ್ತೆ ಟಾಲಿವುಡ್ ಸ್ಟಾರ್ ನಟರನ್ನೆಲ್ಲಾ ಒಗ್ಗೂಡಿಸಲು ಸಜ್ಜಾಗಿದ್ದಾರೆ. ಮಹೇಶ್ ಬಾಬು, ಪ್ರಭಾಸ್, ಎನ್‌ಟಿಆರ್ ಸೇರಿದಂತೆ ಬಿಗ್ ಸ್ಟಾರ್‌ಗಳಿಗೆ ಕೈ ಜೋಡಿಸುವಂತೆ ಕರೆ ನೀಡಿದ್ದಾರೆ. ಈ ಮಧ್ಯೆ ಟಾಲಿವುಡ್ ಲೆಜೆಂಡ್ ಬಾಲಕೃಷ್ಣಗೂ ಕರೆ ಮಾಡಿ ಆಹ್ವಾನ ನೀಡಿದ್ದರು. ಆದರೆ, ಮೆಗಾಸ್ಟಾರ್ ಚಿರಂಜೀವಿ ನೀಡಿದ ಆಹ್ವಾನವನ್ನು ಬಾಲಕೃಷ್ಣ ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಬಾಲಕೃಷ್ಣ 'ನೋ' ಎಂದಿದ್ದು ಯಾಕೆ ಅಂತ ತಿಳಿಯಲು ಮುಂದೆ ಓದಿ.

ಚಿರು ಆಹ್ವಾನ ಸ್ವೀಕರಿಸಲಿಲ್ಲ 'ಲೆಜೆಂಡ್'
ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಾಲಕೃಷ್ಣ ಒಂದೇ ವೇದಿಕೆ ಮೇಲೆ ಕಂಡಿದ್ದು ತೀರಾ ವಿರಳ. ಆದರೂ, ಈ ಬಾರಿ ಮೆಗಾಸ್ಟಾರ್ ಲೆಜೆಂಡ್ ಬಾಲಕೃಷ್ಣಗೆ ಕರೆ ಮಾಡಿದ್ದರು. ಸಿನಿಮಾ ಟಿಕೆಟ್ ದರ ಕಡಿತಗೊಳಿಸಿದ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಕೈ ಜೋಡಿಸಬೇಕು ಎಂದು ಕೇಳಿದ್ದರು. ಆದರೆ, ಚಿರಂಜೀವಿ ಕರೆಯನ್ನು ಸ್ವೀಕರಿಸಿದ ಬಾಲಕೃಷ್ಣ ಸಿಎಂ ಜಗನ್ ಭೇಟಿಗೆ ಬರಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ.

ಚಿರಂಜೀವಿಗೆ ಕರೆಗೆ 'ನೋ' ಬಾಲಯ್ಯ
ಚಿರಂಜೀವಿ ಕರೆಗೆ ಬಾಲಯ್ಯ ನೋ ಎಂದಿದ್ದಕ್ಕೆ ಒಂದು ಬಲವಾದ ಕಾರಣವಿದೆ. ಈ ಕಾರಣಕ್ಕಾಗಿಯೇ ಬಾಲಯ್ಯ ಮೆಗಾಸ್ಟಾರ್ ಆಹ್ವಾನವನ್ನು ಸ್ವೀಕರಿಸಲಿಲ್ಲ. ಪೋನ್ ಮೂಲಕ ನಯವಾಗಿ ಯಾಕೆ ಬರುವುದಿಲ್ಲ ಎಂಬುದನ್ನು ಮೆಗಾಸ್ಟಾರ್‌ಗೆ ತಿಳಿಸಿದ್ದಾರೆ. ಬಾಲಕೃಷ್ಣ ಇತ್ತೀಚೆಗೆ ಹಿಂದೂಪುರಕ್ಕೆ ರಾಜಕೀಯ ಪ್ರವಾಸ ಮಾಡಿದ್ದರು. ಅಲ್ಲಿಂದ ಹಿಂತಿರುಗಿದ ಬಳಿಕ ಐಸೋಲೇಷನ್‌ನಲ್ಲಿ ಇದ್ದಾರೆ. ಹೀಗಾಗಿ ಈ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ.

ಗುಡ್ ನ್ಯೂಸ್ ಜೊತೆ ಬರಲು ಮನವಿ
ಟಾಲಿವುಡ್‌ನಲ್ಲಿ ಬಾಲಕೃಷ್ಣ ಹಾಗೂ ಮೆಗಾಸ್ಟಾರ್ ಚಿರಂಜೀವಿ ಇಬ್ಬರೂ ಪ್ರತಿಸ್ಪರ್ಧಿಗಳು. ಆದರೆ, ಚಿತ್ರರಂಗಕ್ಕೆ ಸಮಸ್ಯೆ ಅಂತ ಬಂದಾಗ, ಇಬ್ಬರೂ ಎಲ್ಲವನ್ನೂ ಮರೆತು ಒಟ್ಟಿಗೆ ನಿಲ್ಲುತ್ತಾರೆ. ಈ ಬಾರಿ ಕೂಡ ಚಿರಂಜೀವಿ ಕರೆ ಸ್ವೀಕರಿಸಿ ಸಭೆಯನ್ನು ನೀವೇ ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲ ಮೀಟಿಂಗ್ ಬಳಿಕ ಗುಡ್ ನ್ಯೂಸ್ ಜೊತೆ ಮರಳುವಂತೆ ಚಿರಂಜೀವಿಗೆ ಬಾಲಕೃಷ್ಣ ಹೇಳಿದ್ದಾರೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ.

ಟಿಡಿಪಿ ಪಕ್ಷದ ಕಟ್ಟಾ ಬೆಂಬಲಿಗ
ಸಿನಿಮಾ ಟಿಕೆಟ್ ದರ ಕಡಿತಕ್ಕೆ ಸಂಬಂಧಿಸಿದಂತೆ ಬಾಲಕೃಷ್ಣ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ. 'ಅಖಂಡ' ಸಿನಿಮಾ ವೇಳೆ ನಿರ್ಮಾಪಕರು ಸಿಎಂ ಜಗನ್ ಜೊತೆ ಮಾತಾಡವಂತೆ ಬಾಲಕೃಷ್ಣ ಬಳಿ ಮನವಿ ಮಾಡಿಕೊಂಡಿದ್ದರಂತೆ. ಆದರೆ, ಬಾಲಕೃಷ್ಣ ಅವರ ಮಾತಿಗೆ 'ನೋ' ಎಂದಿದ್ದರಂತೆ. ಬಾಲಯ್ಯ ಪಕ್ಕಾ ಟಿಡಿಪಿ ಅನುಯಾಯಿ ಹೀಗಾಗಿ ಸಿಎಂ ಜಗನ್ ಜೊತೆ ಮಾತಾಡಲು ಸಾಧ್ಯವೇ ಇಲ್ಲ. ಈ ಕಾರಣಕ್ಕಾಗಿಯೇ ಬಾಲಕೃಷ್ಣ ಈ ಸಭೆಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.


Click it and Unblock the Notifications











