ತ್ರಿವಿಕ್ರಮ್ ಜೊತೆ ಅಯೋಧ್ಯೆಗೆ ಹೊರಟ ಮಹೇಶ್ ಬಾಬು: 28ನೇ ಸಿನಿಮಾ ಟೈಟಲ್ ಫಿಕ್ಸ್!
ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಕಲ್ಚರ್ ಶುರುವಾಗಿದೆ. ಅದರಲ್ಲೂ ಟಾಲಿವುಡ್‌ನಲ್ಲಿ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಮಹೇಶ್ ಬಾಬು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ತಮ್ಮ 28ನೇ ಸಿನಿಮಾವನ್ನೂ ತೆಲುಗಿನಲ್ಲಿ ಮಾತ್ರ ಶೂಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ಸಿನಿಮಾ ಶೂಟಿಂಗ್ ಶುರು ಮಾಡಿದೆ. ಚಿಕ್ಕದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಆದರೆ, 28ನೇ ಸಿನಿಮಾ ಟೈಟಲ್ ಏನು ಅನ್ನೋ ಸೀಕ್ರೆಟ್ ಅನ್ನು ಬಿಟ್ಟುಕೊಟ್ಟಿರಲಿಲ್ಲ. ಸದ್ಯ ಟಾಲಿವುಡ್‌ನಲ್ಲೀಗ ಹೊಸ ಸಿನಿಮಾದ ಟೈಟಲ್ ಬಗ್ಗೆ ಚರ್ಚೆಯಾಗುತ್ತಿದೆ.
ಇಬ್ಬರ ಟೇಸ್ಟ್‌ನ ಹೊಸ ಟೈಟಲ್
ಮಹೇಶ್ ಬಾಬು ಸಿನಿಮಾದ ಟೈಟಲ್‌ಗಳು ಕೆಲವೊಮ್ಮೆ ಒಂದೇ ಅನಿಸುತ್ತವೆ. ಆದರೆ, ಟೈಟಲ್‌ಗಳಲ್ಲಿ ಬಂದ ಸಿನಿಮಾಗಳೆಲ್ಲ ಸೂಪರ್ ಹಿಟ್ ಆಗಿವೆ. 'ರಾಜಕುಮಾರುಡು', 'ಒಕ್ಕಡು', 'ಅಥಡು', 'ದೂಕುಡು', 'ಆಗಡು', 'ಶ್ರೀಮಂತುಡು'. ಹೀಗೆ 'ಡು' ನಿಂದಲೇ ಕೊನೆಯಾಗುತ್ತವೆ.

ಇನ್ನೊಂದ್ಕಡೆ ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾದ ಟೈಟಲ್‌ಗಳು ಆ ಅಕ್ಷರದಿಂದ ಶುರುವಾಗುತ್ತವೆ. 'ಅಥಡು', 'ಅತ್ತಾರಿಂಟಿಕಿ ದಾರೇದಿ', ' ಅ ಆ', 'ಆಜ್ಞ್ಯಾತವಾಸಿ', 'ಅರವಿಂದ ಸಮೇತ', 'ಅಲಾ ವೈಕುಂಠಪುರಮುಲೋ' ಹೀಗೆ ಟೈಟಲ್ ಇಟ್ಟ ಸಿನಿಮಾಗಳೆಲ್ಲಾ ಹಿಟ್ ಆಗಿವೆ. ಈಗ ಇಬ್ಬರ ಟೈಟಲ್‌ಗಳ ಶೈಲಿಯನ್ನೂ ಸೇರಿಸಿ 'ಅಯೋಧ್ಯಲೋ ಅರ್ಜುನುಡು' ಅಂತ ಟೈಟಲ್ ಇಟ್ಟಿದ್ದಾರೆ. ಈ ಟೈಟಲ್ ಪ್ರೇಕ್ಷಕರ ತಲೆಗೆ ಹುಳಬಿಟ್ಟಿದೆ.
ಟೈಟಲ್‌ನಲ್ಲಿ 'ಅಯೋಧ್ಯ' ಯಾಕೆ?
ಮಹೇಶ್ ಬಾಬು ಸಿನಿಮಾ ಟೈಟಲ್ 'ಅಯೋಧ್ಯ' ಯಾಕೆ ಬಂತು ಅನ್ನೋದನ್ನು ತಲೆಗೆ ಹುಳಬಿಟ್ಟುಕೊಂಡಿದ್ದಾರೆ. 'ಅಯೋಧ್ಯ' ಹಾಗೂ 'ಅರ್ಜುನ' ಎರಡೂ ಹೆಸರುಗಳಿಗೆ ಏನು ಸಂಬಂಧ? ಸಿನಿಮಾದ ಕಥೆ ಅಯೋಧ್ಯದಲ್ಲಿ ಸೆಟ್ಟೇರುತ್ತಾ? ಇಲ್ಲಾ ಅಯೋಧ್ಯ ಕಥೆ ಏನಾದರೂ ಇದೆಯಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಮೂಡಿವೆ.
ಸದ್ಯಕ್ಕಂತೂ 'ಆಯೋಧ್ಯಲೋ ಅರ್ಜುನುಡು' ಟೈಟಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಇನ್ನೂ ಟೈಟಲ್ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಬಹುಶ: ಟೈಟಲ್ ಲಾಂಚ್ ಮಾಡುವಾಗಲೇ ಅಯೋಧ್ಯ ಹಾಗೂ ಅರ್ಜುನ್ ಇವೆರಡಕ್ಕೂ ಇರುವ ಸಂಬಂಧದ ಬಗ್ಗೆ ಮಾತಾಡಬಹುದು.

'ಆಯೋಧ್ಯ'ದಲ್ಲಿ ಪ್ರಭಾಸ್ 'ಆದಿಪುರುಷ್'
ಇನ್ನೊಂದು ಕಡೆ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಸಿನಿಮಾ ಕೂಡ ಸದ್ದು ಮಾಡುತ್ತಿದೆ. ಆಯೋಧ್ಯೆಯಲ್ಲಿ 'ಆದಿಪುರುಷ್' ಸಿನಿಮಾದ ಟೈಟಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೀಗಾಗಿ ಟಾಲಿವುಡ್ ಈಗ ಆಯೋಧ್ಯೆ ಸುತ್ತಮುತ್ತ ಬೇಜಾನ್ ಸುದ್ದಿಯಾಗುತ್ತಿದೆ.
ನವರಾತ್ರಿ ವೇಳೆ ಆದಿಪುರುಷ್ ಟೀಸರ್ ಆಯೋಧ್ಯೆಯಲ್ಲಿ ರಿಲೀಸ್ ಆಗುತ್ತಿದೆ. ಇತ್ತ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಒಂದ್ವೇಳೆ ಇದೇ ಟೈಟಲ್ ಫಿಕ್ಸ್ ಆಗಿದ್ದರೆ, ತ್ರಿವಿಕ್ರಮ್ ಸಿನಿಮಾದ ಕಥೆ ಬಗ್ಗೆ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಡಬಹುದು.


Click it and Unblock the Notifications











