ರೀ-ರಿಲೀಸ್ ಆಗಿದ್ದ ಮಹೇಶ್ ಬಾಬು ಸಿನಿಮಾ ಮಸ್ತ್ ರೆಸ್ಪಾನ್ಸ್: 'ಪೋಕಿರಿ' ಕಲೆಕ್ಷನ್ ಸೂಪರ್!
ಟಾಲಿವುಡ್ ನಟ ಮಹೇಶ್ ಬಾಬು ಆಗಸ್ಟ್ 09ರಂದು 47ನೇ ವರ್ಷಕ್ಕೆ ಕಾಲಿಟ್ಟಿದ್ದರು. ಸೂಪರ್‌ಸ್ಟಾರ್ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡಲು ಮಹೇಶ್ ಬಾಬು ಅಭಿನಯದ ಸೂಪರ್ ಹಿಟ್ ಸಿನಿಮಾ 'ಪೋಕಿರಿ'ಯನ್ನು ರೀ-ರಿಲೀಸ್ ಮಾಡಲಾಗಿತ್ತು.
2006ರಲ್ಲಿ ಬಿಡುಗಡೆಯಾಗಿದ್ದ ಈ ಟಾಲಿವುಡ್ ಸಿನಿಮಾ ಅಂದೂ ಕೂಡ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿತ್ತು. ಪ್ರೇಕ್ಷಕರು ರೊಮ್ಯಾಂಟಿಕ್ ಆಕ್ಷನ್ ಎಂಟರ್‌ಟೈನರ್‌ಗೆ ಮಸ್ತ್ ರೆಸ್ಪಾನ್ಸ್ ನೀಡಿದ್ದರು. ಈಗ ಮತ್ತೆ ಮಹೇಶ್ ಬಾಬು ಅಭಿಮಾನಿಗಳಿಗಾಗಿ ಇದೇ ಸಿನಿಮಾ ಮರುಬಿಡುಗಡೆ ಮಾಡಲಾಗಿತ್ತು. ದೇಶ-ವಿದೇಶ ಸ್ಪೆಷಲ್ ಶೋಗಳನ್ನು ಹಾಕಲಾಗಿತ್ತು. ಈ ಶೋಗಳಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ಟಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.
ಪುರಿ ಜಗನ್ನಾಥ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಟಾಲವುಡ್‌ನಲ್ಲಿ ಬಂದ ಬೆಸ್ಟ್ ಸಿನಿಮಾಗಳಲ್ಲಿ ಒಂದು. ಮಹೇಶ್ ಬಾಬು ಹಾಗೂ ಇಲಿಯಾನಾ ಜೋಡಿ ಕೂಡ ಅಂದು ಮೋಡಿ ಮಾಡಿತ್ತು. ಇದೇ ಸಿನಿಮಾ ಮಹೇಶ್ ಬಾಬು ಬರ್ತ್‌ಡೇಗೆ ವಿಶೇಷ ಪ್ರದರ್ಶನ ಕಂಡಿದ್ದು, ಬಾಕ್ಸಾಫೀಸ್‌ನಲ್ಲಿ ಕೋಟಿಗಳಲ್ಲಿ ಹಣ ಕಲೆಹಾಕಿದೆ ಎನ್ನಲಾಗಿದೆ.

ವಿಶ್ವದಾದ್ಯಂತ ಸ್ಪೆಷಲ್ ಶೋ
ಸೂಪರ್ ಸ್ಟಾರ್ ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ವಿಶ್ವದಾದ್ಯಂತ 'ಪೋಕಿರಿ' ವಿಶೇಷ ಪ್ರದರ್ಶನ ಕಂಡಿತ್ತು. ವರ್ಲ್ಡ್ ವೈಡ್ ಸುಮಾರು 200ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಮಹೇಶ್ ಬಾಬು ವಿಭಿನ್ನ ಅವತಾರದಲ್ಲಿ ಕಂಡಿದ್ದ ಈ ಸಿನಿಮಾಗೆ ಮತ್ತೆ ಪ್ರೇಕ್ಷಕರು ತಲೆದೂಗಿದ್ದಾರೆ. ಸುಮಾರು 16 ವರ್ಷಗಳ ಹಿಂದೆ ಮೋಡಿ ಮಾಡಿದ್ದ ಸಿನಿಮಾ ಅಮೆರಿಕ,ಯುಕೆ ಸೇರಿದಂತೆ ಹಲವೆಡೆಗಳಲ್ಲಿ ವಿಶೇಷ ಪ್ರದರ್ಶನ ಕಂಡು ಮೋಡಿ ಮಾಡಿದೆ.

ವರ್ಲ್ಡ್ ವೈಡ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ವಿಶ್ವದಾದ್ಯಂತ ಅಭಿಮಾನಿಗಳೇ ಸ್ಪೆಷಲ್ ಶೋವನ್ನು ಅರೇಂಜ್ ಮಾಡಿದ್ದರು. 200ಕ್ಕೂ ಹೆಚ್ಚು ಶೋಗಳಿಗೂ ಅಭಿಮಾನಿಗಳು ಮಸ್ತ್ ರೆಸ್ಪಾನ್ಸ್ ನೀಡಿದ್ದರು. ಇತ್ತೀಚೆಗೆ ಸಿಕ್ಕಿರೋ ಲೆಕ್ಕದ ಪ್ರಕಾರ, 'ಪೋಕಿರಿ' ಸಿನಿಮಾ ವಿಶ್ವದಾದ್ಯಂತ ಸುಮಾರು 1.48 ಕೋಟಿ ರೂ.ಯನ್ನು ಕಲೆ ಹಾಕಿದೆ. ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಹಾಕಿದೆ ಅನ್ನೋ ಡಿಟೈಲ್ಸ್ ಇಲ್ಲಿದೆ.
ಆಂಧ್ರ-ತೆಲಂಗಾಣದಲ್ಲಿ ಕಲೆಕ್ಷನ್ (ವಿಶ್ವದಾದ್ಯಂತ)
ನಿಜಾಂ- 45 ಲಕ್ಷ ರೂ.
ಸೀಡೆಡ್ 13 ಲಕ್ಷ ರೂ.
ಯುಎ 25 ಲಕ್ಷ ರೂ.
ಈಸ್ಟ್ 12 ಲಕ್ಷ ರೂ.
ವೆಸ್ಟ್ 8 ಲಕ್ಷ ರೂ.
ಗುಂಟೂರು 13 ಲಕ್ಷ ರೂ.
ಕೃಷ್ಣ 10 ಲಕ್ಷ ರೂ.
ಆರ್‌ಓಐ 04 ಲಕ್ಷ ರೂ.
ಓವರ್‌ಸೀಸ್ 14 ಲಕ್ಷ ರೂ.
ಒಟ್ಟು 1.48 ಕೋಟಿ ರೂ.

ಸಿನಿಮಾ ಸೋಲಿನ ಬಳಿಕ ರೆಸ್ಪಾನ್ಸ್
ಇತ್ತೀಚೆಗೆ ಮಹೇಶ್ ಬಾಬು ನಟಿಸಿದ 'ಸರ್ಕಾರು ವಾರಿ ಪಾಟ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಿರಲಿಲ್ಲ. ಈ ಬೆನ್ನಲ್ಲೇ 'ಪೋಕಿರಿ' ಸಿನಿಮಾ ರೀ-ರಿಲೀಸ್ ಮಾಡಲಾಗಿತ್ತು. 16 ವರ್ಷಗಳ ಹಳೆಯ ಸಿನಿಮಾ 200ಕ್ಕೂ ಅಧಿಕ ಶೋ ಕಂಡಿದ್ದಲ್ಲದೆ ಬಾಕ್ಸಾಫೀಸ್‌ನಲ್ಲಿ ಒಂದೂವರೆ ಕೋಟಿ ಕಲೆ ಹಾಕಿದ್ದು ಮೋಡಿ ಮಾಡಿದೆ. ಮಹೇಶ್ ಬಾಬು ಪುರಿ ಜಗನ್ನಾಥ್ ಕಾಂಬಿನೇಷನ್‌ಗೆ ಪ್ರೇಕ್ಷಕರು ಜೈಕಾರ ಹಾಕಿದ್ದು, ಇನ್ನೂ ಈ ಕಾಂಬಿನೇಷನ್‌ಗೆ ಕ್ರೇಜ್ ಇದೆ ಅನ್ನೋದನ್ನು ಸಾಬೀತು ಮಾಡಿವೆ.

ಮುಂದಿನ ಸಿನಿಮಾ ಮೇಲೆ ಕಣ್ಣು
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬುವಿನ 28ನೇ ಸಿನಿಮಾ ಸೆಟ್ಟೇರುವುದಕ್ಕೆ ತಯಾರಿ ನಡೆಸಿದೆ. ತ್ರಿವಿಕ್ರಮ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಪೂಜಾ ಹೆಗ್ಡೆ ಹೀರೊಯಿನ್ ಆಗಿ ಆಯ್ಕೆಯಾಗಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಲಿದೆ. ಮೂಲಗಳ ಪ್ರಕಾರ ಈ ಸಿನಿಮಾ ಮುಂದಿನ ವರ್ಷ ಜನವರಿ 6ರಂದು ಬಿಡುಗಡೆಯಾಗಲಿದೆ. ಮಹೇಶ್ ಬಾಬು ರಾಜಕೀಯ ಮುಖಂಡನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.


Click it and Unblock the Notifications











