ಮುಂದಿನ ಸಿನಿಮಾ ಸೂಪರ್ ಸ್ಟಾರ್ ಜತೆ: ಖಚಿತಪಡಿಸಿದ ನಿರ್ದೇಶಕ ರಾಜಮೌಳಿ
ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಆರ್ಆರ್ಆರ್ (ರೌದ್ರಂ ರಣಂ ರುಧಿರಂ) ಸೆಟ್ಟೇರಿ ಎರಡು ವರ್ಷಗಳಾಗಿವೆ. ಒಂದು ಹಂತದ ಶೂಟಿಂಗ್ ಮುಕ್ತಾಯಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಳಿಸಿ 2021ರ ಜನವರಿಯಲ್ಲಿ ತೆರೆಗೆ ತರುವುದು ಚಿತ್ರತಂಡದ ಉದ್ದೇಶ. ಆದರೆ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ.
ಈ ನಡುವೆ ಅದ್ಧೂರಿ ಮತ್ತು ರೋಚಕ ಸಿನಿಮಾಗಳಿಗೆ ಹೆಸರಾದ ನಿರ್ದೇಶಕ ಎಸ್ ಎಸ್ ರಾಜಮೌಳಿ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಹೊರಗೆಡವಿದ್ದಾರೆ. ಆರ್‌ಆರ್ಆರ್ ಬಿಡುಗಡೆಯಾಗುತ್ತಿದ್ದಂತೆಯೇ ರಾಜಮೌಳಿ ತಮ್ಮ ಹೊಸ ಚಿತ್ರವನ್ನು ಆರಂಭಿಸಲಿದ್ದಾರೆ. ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಪ್ರಿ ಪ್ರೊಡಕ್ಷನ್ ಕಾರ್ಯಗಳು ಈಗಾಗಲೇ ಆರಂಭವಾಗಿವೆ. ಅಂದಹಾಗೆ ಸಿನಿಮಾ ಪ್ರಿಯರಲ್ಲಿ ಹೆಚ್ಚು ರೋಮಾಂಚನ ಮತ್ತು ಕುತೂಹಲ ಮೂಡಿಸಿರುವುದು ರಾಜಮೌಳಿ ಅವರ ಚಿತ್ರದ ನಾಯಕನ ಆಯ್ಕೆ. ಮುಂದೆ ಓದಿ...

ರಾಜಮೌಳಿ ಚಿತ್ರದಲ್ಲಿ ಮಹೇಶ್ ಬಾಬು
ರಾಜಮೌಳಿ ಅವರ ಮುಂದಿನ ಚಿತ್ರದಲ್ಲಿ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ನಟಿಸುವುದು ಖಚಿತವಾಗಿದೆ. ದುರ್ಗಾ ಆರ್ಟ್ಸ್ ಬ್ಯಾನರ್‌ನಲ್ಲಿ ಕೆಎಲ್ ನಾರಾಯಣ ಸಿನಿಮಾ ನಿರ್ಮಿಸಲಿದ್ದು, ಇದರಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ ಎಂದು ರಾಜಮೌಳಿ ದೃಢಪಡಿಸಿದ್ದಾರೆ.

ಮಹೇಶ್ ಬಾಬು ಅಭಿಮಾನಿಗಳಲ್ಲಿ ಖುಷಿ
ನಿಗದಿಪಡಿಸಿದಂತೆ 2021ರ ಜನವರಿ 8ರಂದು ಆರ್ಆರ್ಆರ್ ಬಿಡುಗಡೆಯಾದರೆ ರಾಜಮೌಳಿ ನಿರ್ದೇಶನದ 14ನೇ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿಯೇ ಸೆಟ್ಟೇರಲಿದೆ. ಟ್ರೆಂಡ್ ಸೆಟ್ಟರ್ ಆಗಿರುವ ರಾಜಮೌಳಿ, ಭಾರತವೇ ಅಚ್ಚರಿಯಿಂದ ನೋಡುವಂತಹ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದವರು. ಅವರ ಮುಂದಿನ ಸಿನಿಮಾ ಬಗ್ಗೆ ಈಗಲೇ ಕುತೂಹಲ ಮೂಡಿದೆ. ಅದರಲ್ಲಿಯೂ ಮಹೇಶ್ ಬಾಬು ಅಭಿಮಾನಿಗಳಿಗೆ ಇದು ರೋಮಾಂಚಕ ಸುದ್ದಿ.

ಆರ್ಆರ್ಆರ್ ಹೈದರಾಬಾದ್‌ಗೆ ಶಿಫ್ಟ್
ಸದ್ಯಕ್ಕೆ ರಾಜಮೌಳಿ, ಆರ್ಆರ್ಆರ್ ಚಿತ್ರದ ಕಾರ್ಯದಲ್ಲಿ ಬಿಜಿಯಾಗಿದ್ದಾರೆ. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಟಿಸಿರುವ ಐತಿಹಾಸಿಕ ಚಿತ್ರದ ಚಿತ್ರೀಕರಣಕ್ಕೆ ಕೊರೊನಾ ವೈರಸ್ ಲಾಕ್‌ಡೌನ್ ಅಡ್ಡಿಯಾಗಿದೆ. ಪುಣೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡ, ಈಗ ಉಳಿದಿರುವ ಭಾಗವನ್ನು ಹೈದರಾಬಾದ್‌ನ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿದೆ.

ಮಹೇಶ್ ಬಾಬು ಕೈಯಲ್ಲಿ ಎರಡು ಸಿನಿಮಾ
ಇನ್ನೊಂದೆಡೆ ಮಹೇಶ್ ಬಾಬು 'ಶ್ರೀಮಂತುಡು' ಚಿತ್ರದ ಖ್ಯಾತಿಯ ನಿರ್ದೇಶಕ ಕೊರಟಲಾ ಶಿವ ಜತೆಗೆ ಮತ್ತೊಂದು ಮನರಂಜನಾ ಪ್ರಧಾನ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಜತೆಗೆ ಪರಶುರಾಮ್ ನಿರ್ದೇಶನದ ಇನ್ನೂ ಹೆಸರಿಡದ ಮತ್ತೊಂದು ಚಿತ್ರ ಲಾಕ್‌ಡೌನ್ ಮುಗಿದ ಬಳಿಕ ಚಿತ್ರೀಕರಣ ಆರಂಭಿಸಲಿದೆ.


Click it and Unblock the Notifications











