ಪುಷ್ಪ 02 ಜಾತ್ರೆಗೆ ಖರ್ಚಾಗಿದ್ದು ಎಷ್ಟು ಕೋಟಿ ? ಗಂಗಮ್ಮ ಜಾತ್ರೆಯ ವಿಶೇಷತೆಗಳೇನು..?
ಮೊನ್ನೆಯಷ್ಟೇ ಪುಷ್ಪ 2 ಚಿತ್ರದ ನಯಾ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಕೇವಲ ಅಲ್ಲು ಅರ್ಜುನ್ ಅಭಿಮಾನಿಗಳಷ್ಟೇ ಅಲ್ಲ ಸಾಮಾನ್ಯ ಸಿನಿಪ್ರಿಯರು ಕೂಡ ಪುಷ್ಪ 02ದ ಟೀಸರ್ ನೋಡಿ ಬೆರಗಾಗಿದ್ದಾರೆ. ಅಲ್ಲು ಅರ್ಜುನ್, ಸುಕುಮಾರ್ ಹಾಗೂ ಇಡೀ ತಂಡದ ಶ್ರಮವನ್ನ ಕೊಂಡಾಡುತ್ತಿದ್ದಾರೆ.ಆದರೆ.. ನಿಮಗೆ ಗೊತ್ತಾ.. ಈ ಹೊಗಳಿಕೆಗೆ ಚಿತ್ರತಂಡ ಒಂದಲ್ಲ..ಎರಡಲ್ಲ.. ಐವತ್ತು ಕೋಟಿಯನ್ನ ಖರ್ಚು ಮಾಡಿದೆ. ಹೀಗೊಂದು ಸುದ್ದಿ.. ಆಂಧ್ರದಿಂದ ತೇಲಿಕೊಂಡು ಬಂದಿದೆ.
ಹೌದು. ಗಂಗಮ್ಮ ಜಾತ್ರೆಯಲ್ಲಿ ಅಲ್ಲು ಅರ್ಜುನ್ ಸೀರೆ ಧರಿಸಿ, ಒಂದೆರಡು ದಿನ ಓಡಾಡಿಲ್ಲ. ಹೊಡೆದಾಡಿಲ್ಲ. ಬದಲಿಗೆ ಹೆಚ್ಚು ಕಡಿಮೆ 30 ದಿನಗಳ ಕಾಲ ಈ ದೃಶ್ಯಕ್ಕೆ ಅಲ್ಲು ಅರ್ಜುನ್ ತಮ್ಮ ತನು ಮನ ಅರ್ಪಿಸಿದ್ದಾರೆ. ಹೈದಬಾರಾದ್‌ನ ಗಂದಿಪೇಟ್‌ನಲ್ಲಿರುವ ಅಲ್ಲು ಸ್ಟುಡಿಯೋಸ್‌ನಲ್ಲಿ ಹಾಕಲಾದ ಈ ವೈಭವೋಪೇತ ಸೆಟ್ ನಲ್ಲಿ ಪ್ರತಿ ದಿನ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕಲಾವಿದರು ಕಂಡು ಬರುತ್ತಿದ್ದರು. ಜಾತ್ರೆಗೆ ಅದ್ದೂರಿತನದ ಸ್ಪರ್ಶ ನೀಡಲು, ಮುಂಬೈನಿಂದ ಮೋಕೊಬೋಟ್ ಕ್ಯಾಮೆರಾವನ್ನು ಸುಕುಮಾರ್ ತರಿಸಿಕೊಂಡಿದ್ದರು. ಇದೆಲ್ಲದಕ್ಕೂ ಖರ್ಚಾಗಿದ್ದು ಮೂವತ್ತು ಕೋಟಿ ಅನ್ನುವ ಮಾತು ಟಾಲಿವುಡ್ ನಲ್ಲಿ ಕೇಳಿ ಬರುತ್ತಿದೆ.

ಇನ್ನೂ ಕಲಾವಿದರ ವಿಶೇಷ ಮೇಕಪ್.. ಲೈಟಿಂಗ್.. ಜಾತ್ರೆಗೆ ಪ್ರತಿ ದಿನ ಬರುತ್ತಿದ್ದ ನೂರಾರು ಕಲಾವಿದರ ಸಂಭಾವನೆ, ವಿಶುವಲ್ ಎಫೆಕ್ಟ್ಸ್, ಪೋಸ್ಟ್ ಪ್ರೊಡಕ್ಷನ್ ವರ್ಕ್, ಸೌಂಡ್ ಡಿಸೈನ್ ಈ ಎಲ್ಲ ಕೆಲಸಕ್ಕೆ ತಗಲುವ ವೆಚ್ಚವನ್ನೂ ಸೇರಿಸಿದರೆ, ಕೇವಲ ಈ ಒಂದು ಜಾತ್ರೆ ದೃಶ್ಯಕ್ಕೆ ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ 50 ಕೋಟಿಯನ್ನ ಖರ್ಚು ಮಾಡಿದೆ.
ಕೇವಲ ಇದೊಂದೇ ದೃಶ್ಯಕ್ಕೆ 50 ಕೋಟಿಯನ್ನ ಖರ್ಚು ಮಾಡಿರುವ ಮೈತ್ರಿ ಮೂವೀ ಮೇಕರ್ಸ್ ಪುಷ್ಪ 2 ಚಿತ್ರಕ್ಕೆ 250 ಕೋಟಿಯನ್ನ ಸುರಿಯುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಕನಿಷ್ಟ ಪಕ್ಷ ಒಂದು ಸಾವಿರ ಕೋಟಿಯನ್ನಾದರೂ ಕೊಳ್ಳೆ ಹೊಡೆಯಬೇಕೆಂಬ ಗುರಿಯನ್ನೂ ಹೊಂದಿದೆ. ಸಹಜವಾಗಿ ಮೊದಲ ಭಾಗದಂತೆಯೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎರಡನೇ ಭಾಗವೂ ಬಿಡುಗಡೆಯಾಗಲಿದ್ದು, ಆಗಸ್ಟ್ 15ಕ್ಕೆ ಚಿತ್ರದ ಬಿಡುಗಡೆಗೆ ಮುಹೂರ್ತವನ್ನ ನಿಗಧಿ ಮಾಡಲಾಗಿದೆ.
ಪುಷ್ಪ 02ದಲ್ಲಿ ತಾರೆಯರ ದಂಡು..!
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರನ್ನ ಹೊರತು ಪಡಿಸಿದರೆ ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ. ಡಾಲಿ ಧನಂಜಯ, ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು, ರಾವ್ ರಮೇಶ್, ಅಜಯ್, ಮೈಮ್ ಗೋಪಿ, ಸುನಿಲ್, ಅನಸೂಯಾ ಭಾರದ್ವಾಜ್, ಶ್ರೀತೇಜ್, ಬ್ರಹ್ಮಾಜಿ, ಹೀಗೆ ಅನೇಕ ಪ್ರತಿಭಾವಂತರು ಪುಷ್ಪ 02 ಚಿತ್ರದಲ್ಲಿದ್ದಾರೆ. ಇನ್ನೂ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಒಟ್ನಲ್ಲಿ ಸದ್ಯಕ್ಕೆ ಪುಷ್ಪ 02 ಚಿತ್ರದ ಗಂಗಮ್ಮ ಜಾತ್ರೆಗೆ ಆದ ಖರ್ಚು-ವೆಚ್ಚಗಳ ಬಗ್ಗೆ ಟಾಲಿವುಡ್ ನಲ್ಲಿ ವ್ಯಾಪಕವಾದ ಚರ್ಚೆ ನಡೆಯುತ್ತಿದೆ. ಅದ್ದೂರಿಯಾಗಿ ಸಿದ್ಧವಾಗುತ್ತಿರುವ ಪುಷ್ಪ 02 ನೋಡಲು ಅಲ್ಲು ಅರ್ಜುನ್ ಅಭಿಮಾನಿ ಬಳಗ ಕಾತುರದಿಂದ ಕಾಯುತ್ತಿದೆ.


Click it and Unblock the Notifications












