"ಪತಿ ಸತ್ತ ಮೇಲೆ ಯಾರಿಗೆ ಡಿವೋರ್ಸ್ ಆದ್ರೂ ನನ್ನ ಜೊತೆ ಮದ್ವೆ ಮಾಡಿಸೋಕೆ ಬರ್ತಿದ್ರು"; 'ಪುಟ್ನಂಜ' ನಟಿ ಮೀನಾ
ಬಹುಭಾಷಾ ನಟಿ ಮೀನಾ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲಿಯೂ ಕೆಲಸ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. 48 ವರ್ಷದ ನಟಿ ಇಂದಿಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ನಂತರ ನಾಯಕಿಯಾಗಿ ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿ ಜನ ಮನಗೆದ್ದಿದ್ದರು.
ಮೀನಾ ಅತೀ ಕಡಿಮೆ ಸಮಯದಲ್ಲೇ ನಾಯಕಿಯಾಗಿ ಮಿಂಚಿದರು. ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗಲೇ ನಾಲ್ಕು ಪ್ರಮುಖ ಭಾಷೆಗಳಲ್ಲಿ ನಟಿಸುತ್ತಿದ್ದರು. ಕನ್ನಡದಲ್ಲೂ ರವಿಚಂದ್ರನ್ ಜೊತೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಪುಟ್ನಂಜ', 'ಚೆಲುವ', ಮೊಮ್ಮಗ'ದಲ್ಲಿ ನಟಿಸಿದ್ದರು. ಹಾಗೇ ವಿಷ್ಣುವರ್ಧನ್ ಜೊತೆ 'ಸಿಂಹಾದ್ರಿಯ ಸಿಂಹ', ಕಿಚ್ಚ ಸುದೀಪ್ 'ಸ್ವಾತಿಮುತ್ತು', 'ಮೈ ಆಟ್ರೋಗ್ರಾಫ್' ಜೊತೆ ನಟಿಸಿದ್ದಾರೆ. ಹೀಗಾಗಿ ಕನ್ನಡಿಗರೂ ಇವರು ಚಿರಪರಿಚಿತರು.

ವಿದ್ಯಾ ಸಾಗರ್ ಎಂಬುವವರ ಜೊತೆ 2009ರಲ್ಲಿ ವಿವಾಹವಾಗಿದ್ದರು. ಆದರೆ, 2022ರಲ್ಲಿ ವಿದ್ಯಾ ಸಾಗರ್ ಶ್ವಾಸಕೋಶದ ಸಮಸ್ಯೆಯಿಂದ ನಿಧನರಾದರು. ಇಲ್ಲಿಂದ ಮೀನಾ ಸಂಕಷ್ಟಕ್ಕೆ ಸಿಲುಕಿದ್ದರು. ಹಣದ ಸಮಸ್ಯೆ ಏನೂ ಇರಲಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಇವರ ಎರಡನೇ ಮದುವೆ ಬಗ್ಗೆ ಚರ್ಚೆಗಳು ಶುರುವಾಗಿದ್ದವು. ಆಗ ತಾನೇ ಪತಿಯನ್ನು ಕಳೆದುಕೊಂಡಿದ್ದ ನಟಿಗೆ ಇದೊಂದು ದೊಡ್ಡ ಸಮಸ್ಯೆಯಾಗಿತ್ತು. ಆ ಸಮಯದಲ್ಲಿ ಮೀನಾಗೆ ಇವೆಲ್ಲವನ್ನೂ ಹೇಗೆ ನಿಭಾಯಿಸಿದ್ದರು ಎನ್ನುವುದನ್ನು ಇತ್ತೀಚೆಗೆ ಒಂದು ಶೋನಲ್ಲಿ ಹೇಳಿಕೊಂಡಿದ್ದಾರೆ.
ಮೀನಾ ಇತ್ತೀಚೆಗೆ 'ಜಯಮ್ಮು ನಿಶ್ಚಯಮ್ಮುರಾ' ಎಂಬ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ತಮ್ಮ ವೃತ್ತಿ ಜೀವನದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಟ ಜಗಪತಿ ಬಾಬು ಜೊತೆ ತಮ್ಮ ವೃತ್ತಿಜೀವನದ ಕುರಿತು ಹಲವು ವಿಷಯಗಳನ್ನು ಮೆಲುಕು ಹಾಕಿದ್ದಾರೆ. ಹಾಗೇ ತೆಲುಗಿನ ಸೂಪರ್‌ಸ್ಟಾರ್ ಕೃಷ್ಣ ಹಾಗೂ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಇಬ್ಬರಿಗೂ ಮಗಳು ಹಾಗೂ ನಾಯಕಿಯಾಗಿ ನಟಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಸಂದರ್ಶನದಲ್ಲಿ ಮೀನಾ ವೃತ್ತಿ ಬದುಕಿನ ಉತ್ತುಂಗದಲ್ಲಿ ಇದ್ದಾಗ ಅನೇಕ ನಿರ್ಮಾಪಕರು ಬಂದು ತಾನು ನಷ್ಟದಲ್ಲಿದ್ದು, ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಸಿನಿಮಾ ಮಾಡಿಕೊಡಿ ಎಂದು ಬರುತ್ತಿದ್ದರಂತೆ. ಅಂತಹ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸಿದ್ದು, ಅವು ಸೂಪರ್ ಹಿಟ್ ಆಗಿವೆ ಎಂದಿದ್ದಾರೆ. ಹಾಗೇ ಕಷ್ಟ ಹೇಳಿಕೊಂಡು ಬಂದ ನಿರ್ಮಾಪಕರು ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಮರೆತು ಬಿಡುತ್ತಿದ್ದರು ಎಂದೂ ಹೇಳಿದ್ದಾರೆ.

ಇಲ್ಲಿ ಪ್ರಮುಖವಾಗಿ ಪತಿ ವಿದ್ಯಾಸಾಗರ್ ತೀರಿಕೊಂಡ ಬಳಿಕ ಅವರ ಸ್ಥಿತಿ ಹೇಗಿತ್ತು? ಅನ್ನೋದನ್ನು ಹೇಳಿಕೊಂಡಿದ್ದಾರೆ. "ನನ್ನ ಪತಿ ತೀರಿಕೊಂಡ ಒಂದು ವಾರದೊಳಗೆ ಎರಡನೇ ಮದುವೆಯಾಗಿದ್ದೇನೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿದರು. ಹಾಗೇ ಸುದ್ದಿ ಮಾಡಿದವರಿಗೆ ಕುಟುಂಬ ಇಲ್ಲವೇ? ಯಾಕೆ ಹೀಗೆ ಬರೆಯುತ್ತಾರೆಂದು ತುಂಬಾ ನೋವಾಯಿತು. ಬಳಿಕ ಯಾರೇ ವಿಚ್ಛೇದನ ಪಡೆದರೂ ನನ್ನ ಜೊತೆ ಮದುವೆ ಅಂತ ಸುದ್ದಿ ಮಾಡುವುದಕ್ಕೆ ಶುರು ಮಾಡಿದರು. ಇದನ್ನು ಅಸಹ್ಯ ತರಿಸುತ್ತಿತ್ತು" ಎಂದು ಮೀನಾ ನೋವಿನಿಂದ ಹೇಳಿದ್ದಾರೆ.
ಮೀನಾ ಈಗ ಮಲಯಾಳಂ, ತಮಿಳು ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಇವರ ಕೈಯಲ್ಲಿ ಎರಡು ಸಿನಿಮಾಗಳಿವೆ. ಅದರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ವಿವಾಹದ ಬಳಿಕ ಮೋಹನ್‌ಲಾಲ್ ಜೊತೆ ನಟಿಸಿದ 'ದೃಶ್ಯಂ' ಹೊಸ ಹೊಸ ಅವಕಾಶಗಳನ್ನು ತಂದುಕೊಟ್ಟಿತ್ತು. ಈ ವೇದಿಕೆ ಮೇಲೆ 'ದೃಶ್ಯಂ' ಸಿನಿಮಾ ಯಾಕೆ ಒಪ್ಪಿಕೊಂಡೆ ಅಂತಾನೂ ಹೇಳಿದ್ದಾರೆ. ಎರಡನೇ ಮದುವೆಯ ವದಂತಿಗಳನ್ನು ಬದಿಗಿಟ್ಟು ಮೀನಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











