10 ವರ್ಷದ ಬಳಿಕ ಟಾಲಿವುಡ್‌ಗೆ ಕಮ್‌ಬ್ಯಾಕ್: 'ಸ್ವ್ಯಾಗ್' ಎಂಟ್ರಿ ಕೊಟ್ಟ ಮೀರಾ ಜಾಸ್ಮಿನ್
ದಕ್ಷಿಣ ಭಾರತದ ಸಿನಿಮಾ ಪ್ರಿಯರಿಗೆ ನಟಿ ಮೀರಾ ಜಾಸ್ಮಿನ್ ಹೊಸ ಪರಿಚಯವೇನು ಅಲ್ಲ. ಮದುವೆ ಬಳಿಕ ದುಬೈಗೆ ಹಾರಿದ್ದ ನಟಿ ಭಾರತಕ್ಕೆ ಬಂದು ಹಲವು ವರ್ಷಗಳಾಗಿವೆ. ಈ ಬಹುಭಾಷಾ ನಟಿಯ ಸಾಂಸಾರಿಕ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಅಂತ ಈಗಾಗಲೇ ಹಲವು ವರದಿಗಳಾಗಿವೆ. ಆದರೆ, ಮೀರಾ ಜಾಸ್ಮಿನ್ ಓಪನ್ ಆಗಿ ವೈವಾಹಿಕ ಬದುಕಿನ ಬಗ್ಗೆ ಹೇಳಿಕೊಂಡಿದ್ದು ತೀರ ವಿರಳ.
ಅಪ್ಪು ಅಭಿಮಾನಿಗಳಿಗಂತೂ ಮೀರಾ ಜಾಸ್ಮಿನ್ ತುಂಬಾನೇ ಪರಿಚಿತ. ಯಾಕಂದ್ರೆ, ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ಮೌರ್ಯ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ಅಪ್ಪು ಜೊತೆನೇ 'ಅರಸು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೇ ಸಿನಿಮಾದಲ್ಲಿ ರಮ್ಯಾ ಕೂಡ ಪುನೀತ್‌ಗೆ ನಾಯಕಿಯಾಗಿದ್ದರು.

ಮಲಯಾಳಂ, ತಮಿಳು, ತೆಲುಗು, ಕನ್ನಡ ಅಂತ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದ ಮೀರಾ ಜಾಸ್ಮಿನ್ 2014ರಲ್ಲಿ ಸಿನಿಮಾದಿಂದ ದೂರ ಉಳಿಯಲು ನಿರ್ಧರಿಸಿದ್ದರು. ಅನಿಲ್ ಜಾನ್ ಎಂಬುವವರನ್ನು ಮದುವೆ ಆಗಿ ದುಬೈ ಸೇರಿದ್ದರು. ಅಲ್ಲಿಂದ ಕೆಲವು ವರ್ಷಗಳ ಕಾಲ ಮೀರಾ ಜಾಸ್ಮಿನ್ ಸಿನಿಮಾದಿಂದ ದೂರವೇ ಇದ್ದರು. ಮಲಯಾಳಂನಲ್ಲಿ ಆಗೊಂದು ಈಗೊಂದು ಸಿನಿಮಾ ಮಾಡಿದ್ದರಷ್ಟೇ. ಆದರೆ, ಇದೀಗ 10 ವರ್ಷಗಳ ಬಳಿಕ ಟಾಲಿವುಡ್ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿದ್ದಾರೆ.
ತೆಲುಗು ನಟ ಶ್ರೀವಿಷ್ಣು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ಪ್ರಾಜೆಕ್ಟ್ ಮೂಲಕ ಮತ್ತೆ ಟಾಲಿವುಡ್‌ನಲ್ಲಿ ಸದ್ದು ಮಾಡುವುದಕ್ಕೆ ಹೊರಟಿದ್ದಾರೆ. ಇತ್ತೀಚೆಗಷ್ಟೇ ಈ ನಟನ 'ಸಮಾಜವರಗಮನ' , 'ಭೀಮ್ ಬುಷ್' ಹಿಟ್ ಆಗಿದ್ದವು. ಶೀಘ್ರದಲ್ಲೇ 'ಸ್ವ್ಯಾಗ್' ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮೀರಾ ಜಾಸ್ಮಿನ್ ನಟಿಸುತ್ತಿದ್ದಾರೆ. ಹಸಿತ್ ಗೋಲಿ ಎಂಬುವವರು ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾ ಹೊಚ್ಚ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.

'ಸ್ವ್ಯಾಗ್' ಸಿನಿಮಾದಲ್ಲಿ ನಟಿ ಮೀರಾ ಜಾಸ್ಮಿನ್ ರಾಣಿಯಂತೆ ಕಾಣುತ್ತಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟರ್ ಹರಿದಾಡುತ್ತಿದ್ದು, ಬಹಳ ದಿನಗಳ ನಂತರ ಮತ್ತೊಮ್ಮೆ ಮೀರಾ ಟಾಲಿವುಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಸಿನಿಮಾದಲ್ಲಿ ಮಹಾರಾಣಿ ಉತ್ಫಲಾ ದೇವಿ ಪಾತ್ರದಲ್ಲಿ ಮೀರಾ ಜಾಸ್ಮಿನ್ ನಟಿಸುತ್ತಿದ್ದಾರೆ. ಹೀಗಾಗಿ ಈ ನಟಿಯ ಅಭಿನಯವನ್ನು ಮತ್ತೆ ಕಣ್ತುಂಬಿಕೊಳ್ಳುವುದಕ್ಕೆ ಎದುರು ನೋಡುತ್ತಿದ್ದಾರೆ.
ಬಹುಭಾಷಾ ನಟಿ ಮೀರಾ ಜಾಸ್ಮಿನ್ ಸಿನಿಮಾರಂಗಕ್ಕೆ ಬಂದಿದ್ದೇ ಆಕಸ್ಮಿಕ. ಆರ್ಥೋಡೆಕ್ಸ್ ಕ್ರಿಶ್ಚಿಯನ್ ಕುಟುಂಬದಲ್ಲಿ ನಟಿಸಿದ್ದ ಮೀರಾ ಜಾಸ್ಮಿನ್‌ಗೆ ಸಿನಿಮಾಗಳಲ್ಲಿ ನಟಿಸೋ ಅವಕಾಶವಿರಲಿಲ್ಲ. ಹೀಗೊಮ್ಮೆ ಮಲಯಾಳಂ ನಿರ್ದೇಶಕ ಲೋಹಿತ್‌ದಾಸ್ ನಿರ್ದೇಶಿಸುತ್ತಿದ್ದ ಸಿನಿಮಾದ ಚಿತ್ರೀಕರಣ ನೋಡುವುದಕ್ಕೆ ಹೋಗಿದ್ದರು. ಈ ವೇಳೆ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದರು. ಇದೇ ನಿರ್ದೇಶಕ ಮೀರಾಗೆ ತನ್ನದೇ ನಿರ್ದೇಶನದ 'ಸೂತ್ರಧಾರನ್' ಅನ್ನುವ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ನೀಡಿದ್ದರು. ಮೊದಲ ಸಿನಿಮಾದಲ್ಲಿ ಕೆಲ ಟ್ಯಾಬ್ಲಾಯಿಡ್ ಪತ್ರಿಕೆಗಳು ನೆಗಟಿವ್ ಆಗಿ ಬರೆದಿದ್ದವು.
ಹೀಗಾಗಿ ಮೀರಾ ಜಾಸ್ಮಿನ್ ಕೆಲವು ದಿನಗಳ ಕಾಲ ಸಿನಿಮಾದಿಂದ ದೂರ ಉಳಿಯುವುದಕ್ಕೆ ನಿರ್ಧರಿಸಿದ್ದರು. ಇದೇ ನೆಗೆಟಿವ್ ವರದಿಗಳು ತಮಿಳಿನಲ್ಲಿ ಅವಕಾಶಗಳು ಸಿಗುವಂತೆ ಮಾಡಿದ್ದವು. ತಮಿಳಿನಿಂದ, ತೆಲುಗುಗೆ, ತೆಲುಗು ಚಿತ್ರರಂಗದಿಂದ ಕನ್ನಡ ಸಿನಿಮಾರಂಗಕ್ಕೆ ಧುಮುಕಿದ್ದರು. ಒಂದು ಹಿಂದೊಂದು ಉತ್ತಮ ಸಿನಿಮಾದಲ್ಲಿ ನಟಿಸಿದರು. ಮೀರಾ ನಟಿಸಿದ 'ಪಾದಂ ಒನ್ನು: ಒರು ವಿಲಾಪಂ' ಅನ್ನುವ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. ಸದ್ಯ ತೆಲುಗು ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ.


Click it and Unblock the Notifications











