ಪ್ರಧಾನಿ ನರೇಂದ್ರ ಮೋದಿ ಜೊತೆ ಸಂಕ್ರಾಂತಿ ಆಚರಿಸಿದ ಮೆಗಾಸ್ಟಾರ್ ಚಿರಂಜೀವಿ
ದೇಶಾದ್ಯಂತ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ದಕ್ಷಿಣ ಭಾರತ ಅಷ್ಟೇ ಅಲ್ಲ ಉತ್ತರ ಭಾರತದಲ್ಲೂ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ತುಸು ಜೋರು. ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಜೋರಾಗಿ ಆಚರಣೆ ಮಾಡುತ್ತಾರೆ.
ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಕೂಡ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಮೋದಿಗೆ ಮೆಗಾಸ್ಟಾರ್ ಚಿರಂಜೀವಿ, ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧೂ ಕೂಡ ಜೊತೆಯಾಗಿದ್ದಾರೆ. ಅಂದ್ಹಾಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರ ದೆಹಲಿ ನಿವಾಸದಲ್ಲಿ ಪ್ರಧಾನಿ ಮೋದಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.

ಕೇಂದ್ರ ಸಚಿವ ಕಿಶನ್ ರೆಡ್ಡಿ ತೆಲಂಗಾಣದ ಬಿಜೆಪಿ ಅಧ್ಯಕ್ಷ ಕೂಡ ಹೌದು. ಹೀಗಾಗಿ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಅವರಿಗೂ ಆಹ್ವಾನ ನೀಡಲಾಗಿತ್ತು. ಮೋದಿ ಜೊತೆ ಜೊತೆಯಲ್ಲಿಯೇ ಚಿರಂಜೀವಿ ಹಾಗೂ ಸಿಂಧು ಕೂಡ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.
ನವದೆಹಲಿ ಸಂಕ್ರಾಂತಿ ಹಬ್ಬಕ್ಕೆ ಕಳೆ ಕಟ್ಟಿದೆ. 2025ರ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಸಂಕ್ರಾಂತಿ ಹಬ್ಬವನ್ನು ದೇಶದ ಹಲವಡೆ ಅವರದ್ದೇ ರೀತಿಯಲ್ಲಿ ಆಚರಣೆಯನ್ನು ಮಾಡಲಾಗುತ್ತೆ. ದೆಹಲಿಯ ಕಿಶನ್ ರೆಡ್ಡಿ ನಿವಾಸದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಕಳೆ ಬಂದಿತ್ತು. ಮನೆಯನ್ನು ಸಂಪೂರ್ಣವಾಗಿ ಸಿಂಗಾರ ಮಾಡಲಾಗಿತ್ತು. ವಿದ್ಯುತ್ ದೀಪದಿಂದ ಮಿನುಗುತ್ತಿದ್ದವು. ಇನ್ನು ಪ್ರಧಾನಿ ಮೋದಿಯನ್ನು ತಮಟೆಗಳನ್ನು ಭಾರಿಸುವುದರ ಮೂಲಕ ಸ್ವಾಗತ ಮಾಡಲಾಗಿದೆ.
ಪ್ರಧಾನಿ ಮೋದಿ ಸಂಕ್ರಾಂತಿಯ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸಿದ್ದರು. ಹಸುಗಳಿಗೆ ಹಣ್ಣುಗಳನ್ನು ಕೊಟ್ಟು, ದೀಪವನ್ನು ಬೆಳಗಿದರು. ಬಳಿಕ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗಾಯಕಿ ಸುನೀತ ಅವರ ಗಾಯನವಿತ್ತು. ಜೊತೆಗೆ ನೃತ್ಯ ಪ್ರದರ್ಶನ ಕೂಡ ಇತ್ತು. ಈ ವೇಳೆ ಪ್ರಧಾನಿ ಮೋದಿಯ ಜೊತೆಯಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಕೂಡ ಕಾಣಿಸಿಕೊಂಡರು.
ಒಂದು ಕಡೆ ಹಬ್ಬದ ಸಂಭ್ರಮ ಆಗಿದ್ದರೆ, ಇನ್ನೊಂದು ಕಡೆ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಮೋದಿ ಹಾಗೂ ಚಿರಂಜೀವಿ ಸಂಕ್ರಾಂತಿ ಸಮಾರಂಭದಲ್ಲಿ ಭೇಟಿಯಾಗಿದ್ದು ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಹಾಕಲಾಗುತ್ತಿದೆ. ಮೆಗಾಸ್ಟಾರ್ ಅನ್ನು ಮೋದಿ ಮತ್ತೆ ರಾಜಕೀಯಕ್ಕೆ ಕರೆದುಕೊಂಡು ಬರುತ್ತಾರಾ? ಅನ್ನೋ ಚರ್ಚೆ ಶುರುವಾಗಿದೆ. ಪವನ್ ಕಲ್ಯಾಣ್ ರಾಜಕೀಯದಲ್ಲಿ ಯಶಸ್ಸು ಕಂಡಂತೆ ಮೆಗಾಸ್ಟಾರ್ ಅನ್ನು ಮುಂದೆ ತಂದು ತೆಲಂಗಾಣದಲ್ಲಿ ಬಿಜೆಪಿಯನ್ನು ಬಲಗೊಳಿಸಲು ಮೋದಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಅನ್ನೋದು ಸದ್ಯದ ಚರ್ಚೆ.
ಇನ್ನೊಂದು ಕಡೆ ಚಿರಂಜೀವಿ ಕೇವಲ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಕಿಶನ್ ರೆಡ್ಡಿ ತೆಲಂಗಾಣದ ಬಿಜೆಪಿ ಮುಖಂಡ ಕೂಡ ಆಗಿದ್ದಾರೆ. ಹೀಗಾಗಿ ಮೆಗಾಸ್ಟಾರ್ ಚಿರಂಜೀವಿ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಈ ಕಾರಣಕ್ಕೆ ಪ್ರೀತಿಯ ಆಹ್ವಾನದ ಮೇಲೆ ದೆಹಲಿಗೆ ಆಗಮಿಸಿದ್ದಾರೆ ಅಂತ ಇನ್ನೊಂದು ಮೂಲಗಳು ಹೇಳುತ್ತಿವೆ.


Click it and Unblock the Notifications











