ಬೀದಿಯಲ್ಲಿ ನಿಂತು ಕಿತ್ತಾಡಿಕೊಂಡಿದ್ದ ಅಪ್ಪ-ಮಗನನ್ನು ಒಂದು ಮಾಡಿತೇ 'ಮಿರಾಯ್' ಸಕ್ಸಸ್?
ಟಾಲಿವುಡ್ ಮತ್ತೊಂದು ದುಬಾರಿ ಸಿನಿಮಾ 'ಮಿರಾಯ್' ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. 'ಹನುಮಾನ್' ಸಿನಿಮಾ ಹೀರೋ ಮತ್ತೊಂದು ಸಕ್ಸಸ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದೆರಡು ದಿನಗಳಲ್ಲಿ ದೇಶಾದ್ಯಂತ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಮೊದಲೆರಡು ದಿನಗಳಿಂದ ಸುಮಾರು ₹26 ಕೋಟಿಗೂ ಅಧಿಕ ಗಳಿಕೆ ಕಂಡಿದ್ದು, ಸ್ಟಾರ್‌ಗಳ ಸಿನಿಮಾಗಳಿಗೆ ಸೆಡ್ಡು ಹೊಡೆಯುತ್ತಿದೆ.
'ಹನುಮಾನ್' ಹೀರೋ ತೇಜ ಸಜ್ಜಾ ಹಾಗೂ ಮಂಚು ಮನೋಜ್ ಪ್ರೇಕ್ಷಕರ ಮನಗೆದ್ದಿದ್ದಾರೆ. ತೇಜ ಸಜ್ಜಾ ಈ ಸಿನಿಮಾ ಸೂಪರ್ ಹೀರೋ ಆಗಿದ್ದರೆ, ಮಂಚು ಮನೋಜ್ ಸೂಪರ್ ವಿಲನ್. ತೆರೆಮೇಲೆ ಇಬ್ಬರ ನಡುವಿನ ಕಾದಾಟ ತೆರೆಮೇಲೆ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದೆ. ಅದರಲ್ಲೂ ಸತತ ಸೋಲುಗಳಿಂದ ಕಂಗೆಟ್ಟಿದ್ದ ಟಾಲಿವುಡ್ ಲೆಜೆಂಡ್ ಮೋಹನ್ ಬಾಬು ಪುತ್ರ ಮಂಚು ಮನೋಜ್‌ಗೆ ದೊಡ್ಡ ಸಕ್ಸಸ್ ಸಿಕ್ಕಂತಾಗಿದೆ.

ಮಂಚು ಮನೋಜ್ ಕಳೆದ ಕೆಲವು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಶತಪ್ರಯತ್ನ ಮಾಡಿದ್ದರು. ಆದರೆ, ಮಂಚು ಮನೋಜ್‌ಗೆ ಆರಂಭದಲ್ಲಿ ಕೊಂಚ ಮಟ್ಟಿಗೆ ಯಶಸ್ಸು ಸಿಕ್ಕಿದ್ದರೂ, ನಂತರ ದಿನಗಳಲ್ಲಿ ಸೋಲು ಅವರನ್ನು ಬೆಂಬಿಡದೆ ಹಿಂಬಾಲಿಸುತ್ತಿತ್ತು. ಇದರ ಜೊತೆ ತಂದೆ ಮೋಹನ್ ಬಾಬು ಹಾಗೂ ಅಣ್ಣ ವಿಷ್ಣು ಮಂಚು ಜೊತೆ ಆಸ್ತಿಗಾಗಿ ಕಿತ್ತಾಡಿಕೊಂಡಿದ್ದರು. ಈ ಬೀದಿ ರಂಪಾಟ ಅವರನ್ನು ಇನ್ನಷ್ಟು ಕುಗ್ಗಿಸಿತ್ತು. ತಂದೆ-ಮಗ ಬೀದಿಯಲ್ಲಿ ನಿಂತು ಕಿತ್ತಾಡಿಕೊಂಡಿದ್ದು, ತೆಲುಗು ಚಿತ್ರರಂಗದಲ್ಲಿ ತಲೆ ತಗ್ಗಿಸುವಂತಾಗಿತ್ತು. ಕೊನೆಗೂ 'ಮಿರಾಯ್' ಸಿನಿಮಾ ತಂದೆ-ಮಗನನ್ನು ಒಂದು ಮಾಡಿದೆ.
ತೆಲುಗಿನ ಕಲೆಕ್ಷನ್ ಕಿಂಗ್, ಹಿರಿಯ ನಟ ಮೋಹನ್ ಬಾಬು ಹೆಜ್ಜೆಯನ್ನು ಮಂಚು ಮನೋಜ್ ಅನುಸರಿಸುತ್ತಿದ್ದರು. ಆದರೆ, ಕೌಟುಂಬಿಕ ಕಲಹ, ತಂದೆ ಹಾಗೂ ಮಗನ ನಡುವಿನ ಭಿನ್ನಾಭಿಪ್ರಾಯಗಳು ಇಬ್ಬರನ್ನೂ ನಾನೊಂದು ತೀರ.. ನೀನೊಂದು ತೀರಾ ಅನ್ನೋ ಹಾಗೆ ಮಾಡಿತ್ತು. ತೆಲುಗು ಚಿತ್ರರಂಗದ ಲೆಜೆಂಡರಿ ಕುಟುಂಬ ಬೀದಿಯಲ್ಲಿ ನಿಂತು ಕಿತ್ತಾಡುವುದನ್ನು ಕಂಡು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ತಂದೆ-ಮಗ ಇಬ್ಬರೂ ಒಂದಾಗಲಿ. ಈ ಕಿತ್ತಾಟಗಳು ಅಂತ್ಯ ಆಗಲಿ ಅಂತ ಬಯಸುತ್ತಿದ್ದರು. ಕೊನೆಗೂ ಅವರ ಆಸೆ ಈಡೇರಿದೆ.

ಇತ್ತೀಚೆಗೆ 'ಮಿರಾಯ್' ಸಕ್ಸಸ್ ಮೀಟ್ ಮಾಡಲಾಗಿತ್ತು. ಈ ವೇಳೆ ಖುದ್ದಾಗಿ ಮಂಚು ಮನೋಜ್ ತಮ್ಮ ಅಭಿನಯವನ್ನು ನೋಡಿ ಏನಂದರು? ಅನ್ನೋ ಸಂಗತಿಯನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡು ಭಾವುಕರಾಗಿದ್ದಾರೆ. ತೇಜ ಸಜ್ಜಾ ಮುಂದೆ ಮಂಚು ಮನೋಜ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಇವರ ಪಾತ್ರವನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ಪವರ್‌ಫುಲ್ ಪರ್ಫಾಮೆನ್ಸ್‌ಗೆ ಸಿನಿಪ್ರಿಯರ ಮಂತ್ರಮುಗ್ಧರಾಗಿದ್ದಾರೆ. ಈಗ ತಂದೆ ಕೂಡ ಮುನಿಸು ಮರೆತು ಮಗನಿಗೆ ಆಶೀರ್ವಾದ ಮಾಡಿದ್ದಾರೆ. ತಂದೆ ಈ ಸಿನಿಮಾ ನೋಡಿ ಹೇಗೆ ಪ್ರತಿಕ್ರಿಯಿಸಿದರು? ಅನ್ನೋದನ್ನು ಹೇಳಿಕೊಂಡಿದ್ದಾರೆ.
'ಮಿರಾಯ್' ಸಿನಿಮಾ ಯಶಸ್ಸಿನ ಬಳಿಕ ಅಮ್ಮನ ಆಶೀರ್ವಾದವನ್ನು ಪಡೆದೆ. ಅದೇ ವೇಳೆ ತಂದೆಯೇ ಆಶೀರ್ವಾದವೂ ಸಿಕ್ಕಿತು. ಈ ಯಶಸ್ಸು ಸಿಗುವುದಕ್ಕೆ ನೂರಕ್ಕೆ ನೂರು ಅವರ ಆಶೀರ್ವಾದವೇ ಕಾರಣ. ಅದರಿಂದಲೇ ನನಗೆ ಮತ್ತೆ ಯಶಸ್ಸಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನಾನು ನಟಿಸಿದ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗಲಿವೆ. 'ಡೇವಿಡ್ ರೆಡ್ಡಿ' ಹಾಗೂ 'ರಕ್ಷಕ್' ಎಂಬ ಎರಡು ಪ್ರಾಜೆಕ್ಟ್‌ಗಳು ರೆಡಿಯಾಗುತ್ತಿದ್ದು, ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದ್ದೇನೆ" ಎಂದು ಮಾಧ್ಯಮಗಳಿಗೆ ಮಂಚು ಮನೋಜ್ ಹೇಳಿಕೊಂಡಿದ್ದಾರೆ.
ಮಂಚು ಮನೋಜ್ ಅಣ್ಣ ಮಂಚು ವಿಷ್ಣು ಜೊತೆನೂ ಕಿತ್ತಾಡಿಕೊಂಡಿದ್ದರು. ಅಣ್ಣ ಕೂಡ ಮುನಿಸನ್ನು ಮರೆತು 'ಮಿರಾಯ್' ಸಿನಿಮಾತಂಡಕ್ಕೆ ಹಾಗೂ ತಮ್ಮ ಮಂಚು ಮನೋಜ್ ಅನ್ನು ಹೊಗಳಿದ್ದಾರೆ. ಹಾಗೇ ಸಹೋದರಿ ಮಂಚು ಲಕ್ಷ್ಮಿ ಕೂಡ 'ಮಿರಾಯ್' ಸಿನಿಮಾತಂಡವನ್ನು ಪ್ರಶಂಸೆ ಮಾಡಿದ್ದಾರೆ. "ಮಹಾವೀರ ಲಾಮಾ ಪಾತ್ರದಲ್ಲಿ ನಟಿಸಿದ ನನ್ನ ತಮ್ಮನನ್ನು ಎದುರಿಸಲು ಆ ರಾಮನೇ ಬಂದದ್ದು ನನಗೆ ತುಂಬಾ ಇಷ್ಟವಾಯಿತು" ಎಂದು ಅವರು ಹೇಳಿದ್ದಾರೆ. ಒಟ್ಟಾರೆ, ಮೋಹನ್ ಬಾಬು ಕುಟುಂಬ ಮತ್ತೆ ಒಂದಾಗಬೇಕೆಂದು ಅಭಿಮಾನಿಗಳು ಬಯಸಿದ್ದು, ಈಡೇರಿದಂತಾಗಿದೆ.


Click it and Unblock the Notifications











