"ಜೂ.ಎನ್‌ಟಿಆರ್ ಮುಂದೆ ಸಿಎಂ ಆಗೇ ಆಗ್ತಾರೆ" ತೆಲುಗು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಎಂಎಲ್‌ಸಿ
ತಮಿಳುನಾಡಿನಲ್ಲಿ ದಳಪತಿ ವಿಜಯ್ ಸಂಚಲನ ಸೃಷ್ಟಿಸಿದ್ದಾರೆ. ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಂತೆ ಯಶಸ್ಸು ಅವರನ್ನು ಹುಡುಕಿಕೊಂಡು ಬಂದಿದೆ. ತಮಿಳಿಗರು ದಳಪತಿ ವಿಜಯ್ ಪಕ್ಷ ಟಿವಿಕೆಗೆ ಹೆಚ್ಚು ಸ್ಥಾನಗಳನ್ನು ಕೊಟ್ಟು ಗೆಲ್ಲಿಸಿದ್ದಾರೆ. ಇಂದು ತಮಿಳುನಾಡಿನ ಸಿಎಂ ಆಗಿ ವಿಜಯ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ದಕ್ಷಿಣ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ದಳಪತಿ ವಿಜಯರನ್ನೇ ಹುಡುಕುವುದಕ್ಕೆ ಶುರು ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಉಪೇಂದ್ರ ಸದ್ದು ಮಾಡುತ್ತಿದ್ದಾರೆ. ಉಪ್ಪಿ ಪ್ರಜಾಕೀಯ ಪಕ್ಕಷ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕದಲ್ಲಿ ಕೆಲವರು ಪ್ರಜಾಕೀಯ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು ಉಪೇಂದ್ರ ಮುಂದಿನ ಸಿಎಂ ಆಗ್ಬೇಕು ಅಂತ ಆಸೆ ಪಡುತ್ತಿದ್ದಾರೆ. ಆದರೆ, ಉಪೇಂದ್ರ ತಾನು ವಿಜಯ್ ಅವರ ಹಾದಿಯಲ್ಲಿ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೊಂದು ಕಡೆ ತೆಲುಗು ರಾಜ್ಯದಲ್ಲೂ ಇದೇ ತರಹದ ಕೂಗು ಕೇಳಿ ಬರುತ್ತಿದೆ. ಜೂನಿಯರ್ ಎನ್‌ಟಿಆರ್ ಹೊಸ ಪಕ್ಷ ಕಟ್ಬೇಕು. ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ಖಂಡಿತಾ ಸಿಎಂ ಆಗುತ್ತಾರೆ ಎಂದು ವೈಎಸ್‌ಆರ್‌ಸಿಪಿ ಎಂಎಲ್‌ಸಿ ದುವ್ವಾಡ ಶ್ರೀನಿವಾಸ್ ಮತ್ತು ನಾಯಕಿ ದಿವ್ವೆಲ ಮಾಧುರಿ ಹೇಳಿಕೊಟ್ಟು ಸಂಚಲನ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಜೂ.ಎನ್‌ಟಿಆರ್ ಮುಂದಿನ ಸಿಎಂ ಆಗಬಹುದೇ? ಈ ಹೇಳಿಕೆ ಲೆಕ್ಕಾಚಾರವೇನು? ತಿಳಿಯುವುದಕ್ಕೆ ಮುಂದೆ ಓದಿ.
ವೈಎಸ್‌ಆರ್‌ಸಿಪಿ ಎಂಎಲ್‌ಸಿ ದುವ್ವಾಡ ಶ್ರೀನಿವಾಸ್ ಮತ್ತು ನಾಯಕಿ ದಿವ್ವೆಲ ಮಾಧುರಿ ಇಬ್ಬರೂ ಕೊಟ್ಟಿರುವ ಹೇಳಿಕೆಯೊಂದು ಅಚ್ಚರಿ ಮೂಡಿಸಿದೆ. ತೆಲುಗು ರಾಜ್ಯಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಜೂನಿಯರ್ ಎನ್‌ಟಿಆರ್ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಇವರಿಬ್ಬರು ಕೊಟ್ಟ ಹೇಳಿಕೆ ಬಗ್ಗೆ ಚರ್ಚೆಯಾಗುತ್ತಿದೆ. ಎನ್‌ಟಿಆರ್ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಪಕ್ಷ ಕಟ್ಟಿದರೆ, ತಾವು ಅವರೊಂದಿಗೆ ಸೇರಿಕೊಳ್ಳುತ್ತೇವೆ ಎಂದಿದ್ದಾರೆ.
ಇಷ್ಟೇ ಅಲ್ಲ ಒಂದು ವೇಳೆ ಜೂನಿಯರ್ ಎನ್‌ಟಿಆರ್ ರಾಜಕೀಯ ಪ್ರವೇಶ ಮಾಡಿದರೆ, ಮುಖ್ಯಮಂತ್ರಿ ಆಗುವುದು ಖಚಿತ ಎಂದು ಹೇಳಿದ್ದಾರೆ. ವೈಎಸ್‌ಆರ್‌ಸಿಪಿ ಸದಸ್ಯರಾಗಿರುವ ದುವ್ವಾಡ ಶ್ರೀನಿವಾಸ್ ಮತ್ತು ನಾಯಕಿ ದಿವ್ವೆಲ ಮಾಧುರಿ ಇಬ್ಬರೂ ಜಗನ್ ಮೋಹನ್ ರೆಡ್ಡಿಯವರ ಕಟ್ಟಾ ಅಭಿಮಾನಿಗಳು. ಹೀಗಾಗಿ ಈಗ ಎನ್‌ಟಿಆರ್ ಬಗ್ಗೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ನಡೆದ 'ಫಸ್ಟ್ ಟೈಂ' ಎಂಬ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮದ ವೇಳೆ ದುವ್ವಾಡ ಶ್ರೀನಿವಾಸ್ ಅವರು ಜೂನಿಯರ್ ಎನ್‌ಟಿಆರ್ ಅವರ ಅಭಿಮಾನಿ ಎಂದು ದಿವ್ವೆಲ ಮಾಧುರಿ ಹೇಳಿಕೆ ನೀಡಿದ್ದಾರೆ. "ಶ್ರೀನಿವಾಸ್‌ಗೆ ಜೂನಿಯರ್ ಎನ್‌ಟಿಆರ್ ಎಂದರೆ ತುಂಬಾನೇ ಇಷ್ಟ. ಅವರಿಗೆ ಜೂ.ಎನ್‌ಟಿಆರ್ ಅಚ್ಚು ಮೆಚ್ಚಿನ ನಾಯಕ" ಎಂದು ಹೇಳಿದ್ದು ಅಚ್ಚರಿ ಮೂಡಿಸಿದೆ.
ಇದೇ ವೇಳೆ ದಿವ್ವೆಲ ಮಾಧುರಿ, ತಮಿಳುನಾಡಿನಲ್ಲಿ ವಿಜಯ್ ರಾಜಕೀಯಕ್ಕೆ ಬಂದಂತೆ ತೆಲುಗು ರಾಜ್ಯಗಳಲ್ಲಿಯೂ ಜೂನಿಯರ್ ಎನ್‌ಟಿಆರ್ ರಾಜಕೀಯ ಪ್ರವೇಶ ಮಾಡಬೇಕು ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಜೂನಿಯರ್ ಎನ್‌ಟಿಆರ್ ಅವರು ಖಂಡಿತಾ ರಾಜಕೀಯ ಮಾಡಲಿದ್ದಾರೆಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. "ಜೂನಿಯರ್ ಎನ್‌ಟಿಆರ್ ಪಕ್ಷ ಕಟ್ಟಿದರೆ ಖಂಡಿತಾ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಒಂದು ವೇಳೆ ಅವರು ಪಕ್ಷ ಕಟ್ಟಿದರೆ, ನಾವು ಅವರ ಪಕ್ಷಕ್ಕೆ ಸೇರುತ್ತೇನೆ. ಶ್ರೀನಿವಾಸ್ ಕೂಡ ಬರುತ್ತಾರೆ" ಎಂದು ದಿವ್ವೆಲ ಮಾಧುರಿ ಹೇಳಿದ್ದಾರೆ.
"ನಮಗೆ ಎನ್‌ಟಿಆರ್‌ನಂತಹ ನಾಯಕರು ಬೇಕು. ಯುವಕರು ರಾಜಕೀಯಕ್ಕೆ ಬರಬೇಕು. ಸದಾ ಅದೇ ಹಳೆ ಮುಖಗಳನ್ನು ನೋಡ ಬೇಕೆ? ಯುವಕರು ಬಂದರೆ ಹೊಸ ಹೊಸ ಅದ್ಭುತಗಳನ್ನು ಸೃಷ್ಟಿಸಬಹುದು" ಎಂದು ದಿವ್ವೆಲ ಮಾಧುರಿ ಹೇಳಿದ್ದು, ಸಂಚಲನ ಸೃಷ್ಟಿಸಿದೆ.
ದುವ್ವಾಡ ಶ್ರೀನಿವಾಸ್ ಕೂಡ ಎನ್‌ಟಿಆರ್ ರಾಜಕೀಯದಲ್ಲಿ ಮಿಂಚುವ ಸಾಮರ್ಥ್ಯವಿದೆ. ತಮ್ಮ ರಾಜ್ಯದಲ್ಲಿಯೂ 'ತೆಲುಗುದೇಶಂ' ಪಕ್ಷ ಬಿಕ್ಕಟ್ಟಿನಲ್ಲಿದ್ದಾಗ ಜೂನಿಯರ್ ಎನ್‌ಟಿಆರ್ ಶ್ರಮಿಸಿದ್ದಾರೆ ಎಂದು ಹೇಳಿದ್ದಾರೆ."ಜೂನಿಯರ್ ಎನ್‌ಟಿಆರ್ ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿಲ್ಲ. ಒಂದು ವೇಳೆ ಅವರು ರಾಜಕೀಯಕ್ಕೆ ಬಂದರೆ, ರಾಜಕಾರಣದಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ. ಕ್ರಾಂತಿಯೇ ಆಗುತ್ತದೆ" ಎಂದು ಶ್ರೀನಿವಾಸ್ ಸ್ಪಷ್ಟಪಡಿಸಿದರು.


Click it and Unblock the Notifications