RRR ಟ್ರೈಲರ್‌ಗೆ ಮುಹೂರ್ತ ಫಿಕ್ಸ್: ರಾಜಮೌಳಿ ಮೆಗಾ ಸಿನಿಮಾ ಆರ್ಭಟ ಶುರು
ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ RRR ವಿಶ್ವದಾದ್ಯಂತ ಗ್ರ್ಯಾಂಡ ರಿಲೀಸ್‌ಗೆ ಸಜ್ಜಾಗುತ್ತಿದೆ. ಈಗಾಗಲೇ ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡುತ್ತಿರುವ ರಾಜಮೌಳಿ ಸ್ಪೀಡ್ ನೋಡಿದರೆ, ಸಿನಿಮಾ ಪ್ರಚಾರಕ್ಕೆ ಬೇಜಾನ್ ಪ್ಲ್ಯಾನ್ ಮಾಡಿರುವುದು ಗೊತ್ತಾಗುತ್ತೆ. ಸದ್ಯ ಎಸ್.ಎಸ್.ರಾಜಮೌಳಿ ಅಡ್ಡಾದಿಂದ ಧಮಾಕೇದಾರ್ ಸುದ್ದಿಯೊಂದು ಹೊರ ಬಿದ್ದಿದೆ.
RRR ಟೀಸರ್ ಹಾಗೂ ಹಾಡು ಈಗಾಗಲೇ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲದ ಕೋಟೆಯನ್ನೇ ಕಟ್ಟಿದೆ. ಕೇವಲ ಹಾಡು ಹಾಗೂ ತುಣುಕುಗಳಿಂದ ಸಿನಿಪ್ರಿಯಗಳಲ್ಲಿ ಕುತೂಹಲ ಕೆರಳಿಸಿದ್ದ ರಾಜಮೌಳಿ RRR ಟ್ರೈಲರ್ ಅನ್ನು ಅಭಿಮಾನಿಗಳಿಗೆ ನೀಡಲು ಸಜ್ಜಾಗಿದ್ದಾರೆ.
RRR ಟ್ರೈಲರ್‌ಗೆ ಕೂಡಿ ಬಂತು ಮುಹೂರ್ತ
RRR ಟ್ರೈಲರ್‌ಗಾಗಿ ಕಾದೂ ಕಾದು ಸುಸ್ತಾಗಿದ್ದ ಸಿನಿಪ್ರಿಯರಿಗೆ ಖುಷಿ ವಿಷಯವೊಂದಿದೆ. ಜೂ. ಎನ್‌ಟಿಆರ್, ರಾಮ್‌ಚರಣ್ ಅಭಿನಯದ RRR ಚಿತ್ರದ ಟ್ರೈಲರ್‌ಗೆ ರಾಜಮೌಳಿ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಸಿನಿಮಾದ ಟ್ರೈಲರ್ ಇದೇ ಡಿಸೆಂಬರ್ 3 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಐದು ಭಾಷೆಯಲ್ಲಿ ನಿರ್ಮಾಣಗೊಂಡಿರುವ RRR ಸಿನಿಮಾದ ಟ್ರೈಲರ್ ನೋಡಲು ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿದೆ.

ದೊಡ್ಡ ತಾರಾಬಳಗವೇ RRR ಸಿನಿಮಾದಲ್ಲಿದೆ
ಜಕ್ಕಣ್ಣನ ಸಿನಿಮಾ ಅಂದ್ಮೇಲೆ ಆ ನಿರೀಕ್ಷೆಗಳಿಗೇನು ಕಮ್ಮಿ ಇರುವುದಿಲ್ಲ. ಇದೀಗ ಅಂತಹದ್ದೇ ನಿರೀಕ್ಷೆ RRR ಸಿನಿಮಾ ಮೇಲೂ ಇದೆ. ಜೂ. ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಬಾಲಿವುಡ್ ನಟ ಅಜಯ್ ದೇವಗನ್, ನಟಿ ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎಂ ಎಂ ಕೀರವಾಣಿ ಸಂಗೀತ ದೇಶ ಭಕ್ತಿಯನ್ನು ಬಡಿದೆಬ್ಬಿಸಲಿದೆ. ಇನ್ನು ಸೆಂಥಿಲ್ ಕ್ಯಾಮೆರಾ ವರ್ಕ್ RRR ಸಿನಿಮಾದ ಮತ್ತೊಂದು ಹೈಲೈಟ್.

RRR ಸಿನಿಮಾ ಐದು ಭಾಷೆಯಲ್ಲಿ ರಿಲೀಸ್
ರಾಜಮೌಳಿಯ ಕನಸು ಕಂಡಂತೆ ಟ್ರೈಲರ್ ಅದ್ಧೂರಿಯಾಗಿ ಮೂಡಿ ಬಂದಿದೆ ಎನ್ನಲಾಗಿದೆ. ವೈಭವೋಪೇತವಾಗಿ ಮೂಡಿಬಂದಿರುವ ಟೀಸರ್ ಹಾಗೂ ಹಾಡುಗಳು ಈಗಾಗಲೇ ಕುತೂಹಲ ಕೆರಳಿಸಿದೆ. ಹೀಗೆ ಇರುವಾಗ ಇನ್ನು ಟ್ರೈಲರ್ ಯಾವ ಮಟ್ಟಿಗೆ ಇರುತ್ತೆ ಅನ್ನುವ ಕುತೂಹಲವಿದೆ. ಸದ್ಯ ಡಿಸೆಂಬರ್ 3 ರಂದು ಈ ಎಲ್ಲಾ ಕುತೂಹಲಕ್ಕೂ ಉತ್ತರ ಸಿಗಲಿದೆ. RRR ಚಿತ್ರದ ಟ್ರೈಲರ್ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಾಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
RRR ಸಿನಿಮಾ ಕನ್ನಡದಲ್ಲಿಯೂ ರಿಲೀಸ್ ಆಗುತ್ತಿದ್ದು, ಸಿನಿಮಾದ ವಿತರಣೆ ಹಕ್ಕನ್ನು ಕೆವಿಎನ್ ಪ್ರೊಡಕ್ಷನ್ ಹೌಸ್ ಪಡೆದುಕೊಂಡಿದೆ. ರಾಜ್ಯಾದ್ಯಂತ RRR ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ರಿಲೀಸ್ ಮಾಡಲಿದೆ.


Click it and Unblock the Notifications











