ಚಿರಂಜೀವಿ ಹಾಗೂ ಬಾಲಕೃಷ್ಣ ಸಿನಿಮಾಗಳ ಮೇಲೆ ಕಣ್ಣಿಟ್ಟಿದ್ದೇಕೆ ಟಾಲಿವುಡ್?
ಟಾಲಿವುಡ್‌ನಲ್ಲಿ ಇಬ್ಬರು ಸೂಪರ್‌ಸ್ಟಾರ್‌ಗಳು ಹಲವು ವರ್ಷಗಳಿಂದ ಪೈಪೋಟಿಗೆ ಬಿದ್ದಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಹಾಗೂ ಲೆಜೆಂಡ್ ಬಾಲಕೃಷ್ಣ ನಡುವೆ ಸಿನಿಮಾ ವಿಚಾರದಲ್ಲಿ ಕಾಂಪಿಟೇಷನ್ ಇದ್ದೇ ಇದೆ. ಒಮ್ಮೆ ಚಿರಂಜೀವಿ ಸಿನಿಮಾ ಗೆದ್ದರೆ, ಇನ್ನೊಮ್ಮೆ ಬಾಲಕೃಷ್ಣ ಸಿನಿಮಾ ಗೆಲ್ಲುತ್ತೆ. ಹೀಗೆ ಮೂರು-ನಾಲ್ಕು ದಶಕಗಳಿಂದ ಈ ಪೈಪೋಟಿಯನ್ನು ಟಾಲಿವುಡ್ ಮಂದಿ ನೋಡುತ್ತಲೇ ಬಂದಿದ್ದಾರೆ.
ಈಗ ಮತ್ತೆ ಇಂತಹದ್ದೊಂದು ವಾತಾವರಣ ಸೃಷ್ಟಿಯಾಗಿದೆ. ಚಿರಂಜೀವಿ ಒಪ್ಪಿಕೊಳ್ಳುತ್ತಿರುವ ಸಿನಿಮಾಗಳು ಹಾಗೂ ಬಾಲಕೃಷ್ಣ ಆಯ್ಕೆ ಮಾಡಿಕೊಳ್ಳುತ್ತಿರುವ ಸಿನಿಮಾಗಳು ಬೇರೆ ದಾರಿ ಹಿಡಿದಿವೆ. ಇಬ್ಬರು ದಿಗ್ಗಜರು ಹಿಡಿದಿರುವ ಹಾದಿಯಲ್ಲಿ ಯಾರು ಗೆಲ್ಲುತ್ತಾರೆ ಅನ್ನುವುದೇ ಈಗ ಕುತೂಹಲ. ಅದಕ್ಕೆ ಟಾಲಿವುಡ್ ಮಂದಿ ಚಿರಂಜೀವಿ ಹಾಗೂ ಬಾಲಕೃಷ್ಣ ಗ್ರೀನ್ ಸಿಗ್ನಲ್ ಕೊಡುವ ಸಿನಿಮಾಗಳ ಮೇಲೆ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗಳ ಪಟ್ಟಿ
'ಆಚಾರ್ಯ' ಸಿನಿಮಾ ಬಳಿಕ ಮೆಗಾಸ್ಟಾರ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಚಿರಂಜೀವಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ರಿಮೇಕ್ ಸಿನಿಮಾ 'ಗಾಢ್‌ಫಾದರ್'ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಮೋಹನ್ ರಾಜ ನಿರ್ದೇಶನ ಮಾಡುತ್ತಿದ್ದಾರೆ. ಇದರ ಹಿಂದೆನೇ ಕೆ ಎಸ್ ಬಾಬಿ ನಿರ್ದೇಶನ 'ವಾಲ್ಟೈರ್ ವೀರಯ್ಯ' ಹಾಗೂ ಮೆಹರ್ ರಮೇಶ್ ನಿರ್ದೇಶನದ 'ಭೋಲಾ ಶಂಕರ್' ಸಿನಿಮಾ ಕ್ಯೂನಲ್ಲಿವೆ. ಈ ಎಲ್ಲಾ ನಿರ್ದೇಶಕರು ಇತ್ತೀಚೆಗೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿಲ್ಲ. ಆದರೂ, ಮೆಗಾಸ್ಟಾರ್ ಇವರಿಗೆ ಒಪ್ಪಿಗೆ ಸೂಚಿಸಿದ್ದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಬಾಲಕೃಷ್ಣ ಬಳಿ ಇರುವ ಸಿನಿಮಾಗಳ ಪಟ್ಟಿ
ಬಾಲಕೃಷ್ಣ ಇಡುತ್ತಿರುವ ಹೆಜ್ಜೆ ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ. ಬಾಲಕೃಷ್ಣ ಗ್ರೀನ್ ಸಿಗ್ನಲ್ ಕೊಟ್ಟಿರುವ ನಿರ್ದೇಶಕರೆಲ್ಲರೂ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 'ಕ್ರ್ಯಾಕ್' ಅಂತಹ ಹಿಟ್ ಸಿನಿಮಾ ಕೊಟ್ಟ ಗೋವಿಚಂದ್ ಮಲಿನೇನಿ ಈಗಾಗಲೇ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಮೇ 27ಕ್ಕೆ ರಿಲೀಸ್ ಆಗಿರುವ 'ಎಫ್ 3' ನಿರ್ದೇಶಕ ಅನಿಲ್ ರವಿಪುಡಿ ಸಿನಿಮಾಗೂ ಒಕೆ ಅಂದಿದ್ದಾರೆ. ಹಾಗೇ 'ಅಖಂಡ'ದಂತಹ ಸೂಪರ್ ಹಿಟ್ ಕೊಟ್ಟ ಬೋಯಾಪಟಿ ಶ್ರೀನು ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ.

ಚಿರಂಜೀವಿಗೆ ಆಚಾರ್ಯ ಸೋಲಿನ ರುಚಿ
ಮೆಗಾಸ್ಟಾರ್ ಚಿರಂಜೀವಿ ಎಕ್ಸ್‌ಪೆರಿಮೆಂಟ್ ಸಿನಿಮಾಗಳ ಕಡೆ ಹೆಚ್ಚು ಗಮನಹರಿಸಿದ್ದಾರೆ. 'ಆಚಾರ್ಯ' ಕೂಡ ಮೆಗಸ್ಟಾರ್ ವೃತ್ತಿ ಬದುಕಿನಲ್ಲಿ ಹೊಸ ಪ್ರಯೋಗ ಆಗಿತ್ತು. ಆದರೆ, ಮೆಗಾಸ್ಟಾರ್ ಅಭಿಮಾನಿಗಳು ಈ ಸಿನಿಮಾವನ್ನು ಒಪ್ಪಿಲ್ಲ. 'ಆಚಾರ್ಯ' ಸೋಲಿನ ಬಳಿಕ ಹಾಗೂ ಚಿರು ಒಪ್ಪಿರುವ ಸಿನಿಮಾಗಳನ್ನು ನೋಡಿ ಮೆಗಾ ಪ್ಯಾನ್ಸ್ ಕೊಂಚ ಆತಂಕದಲ್ಲಿದ್ದಾರೆ. ಆದರೆ, ಕೊರಟಾಲ ಶಿವ ಅಂತಹ ಸಕ್ಸಸ್‌ಫುಲ್ ನಿರ್ದೇಶಕ ಫ್ಲಾಪ್ ಕೊಟ್ಟಿದ್ದೂ ಅಭಿಮಾನಿಗಳ ಗಮನದಲ್ಲಿದೆ.

ಲೆಜೆಂಡ್ ಬಾಲಯ್ಯಗೆ 'ಅಖಂಡ' ಸಕ್ಸಸ್
ಬೋಯಾಪಾಟಿ ಶ್ರೀನಿ ಹಾಗೂ ಬಾಲಕೃಷ್ಣ ಇಬ್ಬರೂ ಸುಲಿನ ಸಿಕ್ಕಿಕೊಂಡಿದ್ದರು. ಇಬ್ಬರ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಅಖಂಡ' ಬ್ಲಾಕ್ ಬಸ್ಟರ್ ಹಿಟ್ ಆಯ್ತು. 'ಅಖಂಡ' ಬಳಿಕ ಬಾಲಕೃಷ್ಣ ಒಪ್ಪಿಕೊಂಡ ಸಿನಿಮಾಗಳು ಕೂಡ ಕಂಪ್ಲೀಟ್ ಮಾಸ್ ಎಂದೇ ಹೇಳಲಾಗುತ್ತಿದೆ. ಈ ಕಾರಣಕ್ಕೆ ಟಾಲಿವುಡ್ ಮಂದಿ ಇಬ್ಬರ ನಡೆಯನ್ನು ಹಲ್ಲು ಕಚ್ಚಿಕೊಂಡು ನೋಡುತ್ತಿದ್ದಾರೆ.


Click it and Unblock the Notifications











