ಪ್ರಸಿದ್ಧ ಕ್ರೀಡಾಪಟುವಿನ ಬಯೋಪಿಕ್ ಸಿನಿಮಾ ತಿರಸ್ಕರಿಸಿದರೇ ನಿತ್ಯಾ ಮೆನನ್?
ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಮೊಟ್ಟ ಮೊದಲು ಪದಕ ಜಯಿಸಿದ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿರುವ ವೇಯ್ಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಅವರ 45 ನೇ ಹುಟ್ಟುಹಬ್ಬದಂದು ಅವರ ಜೀವನಚರಿತ್ರೆ ಆಧಾರಿತ ಸಿನಿಮಾ ಘೋಷಣೆ ಮಾಡಲಾಗಿದೆ.
Recommended Video
ಜೂನ್ 1ರಂದು ಬರಹಗಾರ-ನಿರ್ಮಾಪಕ ಕೋನ ವೆಂಕಟ್ ಮತ್ತು ಎಂವಿವಿ ಸತ್ಯನಾರಾಯಣ ಈ ಚಿತ್ರ ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದಾರೆ. ಸಂಜನಾ ರೆಡ್ಡಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅಂದಹಾಗೆ ಇದು ತೆಲುಗಿನಲ್ಲಿ ನಿರ್ಮಾಣವಾದರೂ, ಪ್ಯಾನ್ ಇಂಡಿಯಾ ಸಿನಿಮಾವಾಗಿರಲಿದೆ.

ಕರ್ಣಂ ಮಲ್ಲೇಶ್ವರಿ ಅವರ ಪಾತ್ರ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ಯಾರು ನಟಿಸಲಿದ್ದಾರೆ, ತಂತ್ರಜ್ಞರು ಯಾರು ಇರಲಿದ್ದಾರೆ ಎಂಬ ಮಾಹಿತಿಯನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಮೂಲಗಳು ಹೇಳಿವೆ.
ಚಿತ್ರದ ಘೋಷಣೆಯ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ವೇಯ್ಟ್ ಲಿಫ್ಟ್ ಮಾಡಲು ಸಿದ್ಧವಾಗುತ್ತಿರುವ ಕೈಗಳ ಸಾಂಕೇತಿಕ ಫೋಟೊವನ್ನು ಅದರಲ್ಲಿ ಬಳಸಿಕೊಳ್ಳಲಾಗಿದೆ. 'ದೇಶವನ್ನು ಮೇಲೆ ಎತ್ತಿದ ಮಹಿಳೆಯ ಪಯಣ' ಎಂಬ ಉಪ ಶೀರ್ಷಿಕೆ ಅದರಲ್ಲಿದೆ.
ಕರ್ಣಂ ಮಲ್ಲೇಶ್ವರಿ ಅವರ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ನಿರ್ಮಾಪಕರು ನಿತ್ಯಾ ಮೆನನ್ ಅವರಿದ್ದ ಪೋಸ್ಟರ್ ಬಿಡುಗಡೆ ಮಾಡಲು ಬಯಸಿದ್ದರು. ಆದರೆ ನಿತ್ಯಾ ಈ ಚಿತ್ರವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಕರ್ಣಂ ಮಲ್ಲೇಶ್ವರಿ ಪಾತ್ರಕ್ಕೆ ತಾಪ್ಸಿ ಪನ್ನು ಹಾಗೂ ರಾಕುಲ್ ಪ್ರೀತ್ ಸಿಂಗ್ ಅವರ ಹೆಸರೂ ಕೇಳಿಬರುತ್ತಿದೆ. ಆಂಧ್ರಪ್ರದೇಶದ ಅಮಡಲವಲಸದವರಾದ ಕರ್ಣಂ ಮಲ್ಲೇಶ್ವರಿ, 2000ದಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದು ಭಾರತದ ಮಹಿಳಾ ಕ್ರೀಡಾಪಟು ಗೆದ್ದ ಮೊದಲ ಒಲಿಂಪಿಕ್ಸ್ ಪದಕವಾಗಿದೆ.


Click it and Unblock the Notifications











