ಟಾಸ್ಲಾ ಮಾಲೀಕ ಎಲೋನ್ ಮಸ್ಕ್‌ಗೆ ಸಂದೇಶ: 'ಕಲ್ಕಿ 2898 ಎಡಿ'ಯ 'ಬುಜ್ಜಿ' ಓಡಿಸಲು ಆಹ್ವಾನ!
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ನಟನೆಯ ಮತ್ತೊಂದು ಸಿನಿಮಾ 'ಕಲ್ಕಿ 2898 ಎಡಿ' ಬಿಡುಗಡೆ ಸಜ್ಜಾಗಿದೆ. ಸದ್ಯದ ಮಟ್ಟಿಗೆ ಇದು ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾ. ಹೀಗಾಗಿ ಈ ಸಿನಿಮಾ ಆರಂಭ ಆದಲ್ಲಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನೇನು ಸಿನಿಮಾ ರಿಲೀಸ್‌ಗೆ ಹತ್ತಿರವಿದೆ ಅನ್ನುವಾಗಲೇ ಪ್ರಚಾರ ಅದ್ಧೂರಿಯಾಗಿ ಆರಂಭ ಆಗಿದೆ.
ಪ್ರಭಾಸ್ ನಟನೆಯ 'ಕಲ್ಕಿ 2898ಎಡಿ' ಸಿನಿಮಾವನ್ನು ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸಿನಿಮಾಗೆ ನಾಗ ಅಶ್ವಿನ್ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮೂಲಕ, ಕ್ಯಾರೆಕ್ಟರ್‌ಗಳ ಮೂಲಕ ಚಿತ್ರತಂಡ ಗಮನ ಸೆಳೆಯುತ್ತಿದೆ. ಈ ಸಿನಿಮಾ ಬಗ್ಗೆ ದೇಶಾದ್ಯಂತ ಸಿನಿಪ್ರಿಯರು ಕುತೂಹಲದಿಂದ ನೋಡುತ್ತಿದ್ದಾರೆ.

'ಕಲ್ಕಿ' ಸಿನಿಮಾದ ಪ್ರಚಾರವನ್ನು ಜೋರಾಗಿಯೇ ಆರಂಭ ಆಗಿದೆ. ಈ ಸಿನಿಮಾದ ಪ್ರಮುಖ ಪಾತ್ರ 'ಬುಜ್ಜಿ'ಯಿಂದ ಪ್ರಚಾರವನ್ನು ಭರ್ಜರಿಯಾಗಿ ಆರಂಭಿಸುತ್ತಿದೆ. ಅಂದ್ಹಾಗೆ ಬುಜ್ಜಿ ಈ ಸಿನಿಮಾದಲ್ಲಿ ಪ್ರಭಾಸ್ ಬಳಸಿರುವ ವಾಹನದ ಹೆಸರು. ಸಿನಿಮಾದಲ್ಲಿ ಬರುವ ಈ ವಾಹನ ಈಗ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಸುತ್ತಾಡುತ್ತಿದೆ.
ಸಿನಿಮಾಗಾಗಿ ವಿನ್ಯಾಸಗೊಳಿಸಿದ ಬುಜ್ಜಿ ವಾಹನ ಹಲವರ ಗಮನ ಸೆಳೆದಿದೆ. ತೆಲುಗು ನಟ ನಾಗ ಚೈತನ್ಯ ಈ ವಾಹನವನ್ನು ಈಗಾಗಲೇ ಓಡಿಸಿ ಎಂಜಾಯ್ ಮಾಡಿದ್ದಾರೆ. ಹಾಗೇ ಭಾರತದ ಮೊದಲ ಫಾರ್ಮುಲಾ ಓನ್ ರೇಸರ್ ನಾರಾಯಣ ಕಾರ್ತಿಕೇಯನ್ ಕೂಡ 'ಬುಜ್ಜಿ'ಯೊಂದಿಗೆ ಸವಾರಿ ಮಾಡಿದ್ದರು. ಈ ಸುದ್ದಿ ವೈರಲ್ ಆಗುತ್ತಿರುವಾಗಲೇ, ನಿರ್ದೇಶಕ ನಾಗ ಅಶ್ವಿನ್ ವಿಶ್ವದ ಶ್ರೀಮಂತ ಉದ್ಯಮಿ ಹಾಗೂ ಟೆಸ್ಲಾ ಕಾರಿನ ಮಾಲೀಕ ಎಲೋನ್ ಮಸ್ಕ್‌ಗೆ 'ಕಲ್ಕಿ'ಗಾಗಿ ವಿನ್ಯಾಸಗೊಳಿಸಿದ ವಾಹನದಲ್ಲಿ ಸವಾರಿ ಮಾಡುವಂತೆ ಆಹ್ವಾನ ನೀಡಿದ್ದಾರೆ.
ನಾಗ ಅಶ್ವಿನ್ ಎಕ್ಸ್ ಖಾತೆಯ ಮೂಲಕ ಬುಜ್ಜಿಯೊಂದಿಗೆ ಸವಾರಿ ಮಾಡುವಂತೆ ಕೇಳಿಕೊಂಡಿದ್ದಾರೆ. "ಡಿಯರ್ ಎಲೋನ್ ಮಸ್ಕ್ ಸರ್.. ನಾವು ನಿರ್ಮಿಸಿರುವ ಬುಜ್ಜಿಯನ್ನು ನೋಡುವುದಕ್ಕೆ ಹಾಗೂ ಅದರೊಂದಿಗೆ ಸವಾರಿ ಮಾಡುವುದಕ್ಕೆ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ಇದು 6 ಟನ್ ಇರುವ ದೈತ್ಯ. ಮೇಡ್ ಇನ್ ಇಂಡಿಯಾ. ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನ ಆಗಿದ್ದು, ಇಂಜಿನಿಯರಿಂಗ್‌ನ ಸಾಧನೆ." ಎಂದು ನಾಗ ಅಶ್ವಿನ್ ಉದ್ಯಮಿ ಎಲೋನ್ ಮಸ್ಕ್‌ಗೆ ಆಹ್ವಾನ ನೀಡಿದ್ದಾರೆ.

ಅಂದ್ಹಾಗೆ, ಈ ವಾಹನದಲ್ಲಿ ಮೂರು ಟೈಯರ್‌ಗಳಿವೆ. 6 ಟನ್ ತೂಕವಿರುವ ಎಲೆಟ್ರಿಕ್ ಬುಜ್ಜಿ ವಾಹನ 94ಕಿಲೋ ವ್ಯಾಟ್ ಪವರ್ ಉತ್ಪಾದಿಸುತ್ತದೆ. 47 ಕಿಲೋಮೀಟರ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 6075mm ಉದ್ದ ಹಾಗೂ 3380mm ಅಗಲವಿದೆ. 2186mm ಎತ್ತರವಿದೆ. ಈ ವಾಹನವನ್ನು ನಿರ್ಮಾಣ ಮಾಡುವಲ್ಲಿ ಮಹೀಂದ್ರ ಕಂಪನಿಯ ಸಂಶೋಧನೆ ವಿಭಾಗದಲ್ಲಿರುವ ಇಂಜಿನಿಯರ್‌ಗಳು ನೆರವಾಗಿದ್ದಾರೆ. ಈ ವಿಷಯವನ್ನು ಖುದ್ದಾಗಿ ಆನಂದ್ ಮಹೀಂದ್ರ ಅವರೇ ಖಚಿತ ಪಡಿಸಿದ್ದರು.
ಇನ್ನು 'ಕಲ್ಕಿ 2898 ಎಡಿ' ಸಿನಿಮಾದಲ್ಲಿ ಭೈರವನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಇವರೊಂದಿಗೆ 'ಬುಜ್ಜಿ' ಕೂಡ ಪ್ರಮುಖ ಪಾತ್ರವಹಿಸಿದೆ. ಇನ್ನು ಜೂನ್ 27, 2024ರಂದು 'ಕಲ್ಕಿ 2898 AD'ರಿಲೀಸ್ ಆಗುತ್ತಿದೆ. ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ದಿಶಾ ಪಠಾಣಿ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ನಟಿಸಿದ್ದಾರೆ. ನಾಗ ಅಶ್ವಿಲ್ ಅವರೇ ವೈ ಜಯಂತಿ ಮೂವೀಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.


Click it and Unblock the Notifications











