ಮೊದಲು ತಮ್ಮನ ಸಿನಿಮಾ.. ಈಗ ಅಣ್ಣನ ಸಿನಿಮಾಗೆ ಸೋಲು: ವಾರಾಂತ್ಯದಲ್ಲೂ ಎದ್ದೇಳಲಿಲ್ಲ 'ಕಸ್ಟಡಿ'
ಟಾಲಿವುಡ್ ನಟ ನಾಗಚೈತನ್ಯ ಹೊಸ ಸಿನಿಮಾ ಕಳೆದ ವಾರ ರಿಲೀಸ್ ಆಗಿತ್ತು. ವೆಂಕಟ್ ಪ್ರಭು ನಿರ್ದೇಶಿಸಿದ 'ಕಸ್ಟಡಿ' ಸಿನಿಮಾ ಕಳೆದ ಶುಕ್ರವಾರಷ್ಟೇ ರಿಲೀಸ್ ಆಗಿತ್ತು. ಹಲವು ನಿರೀಕ್ಷೆಗಳ ನಡುವೆ ರಿಲೀಸ್ ಆಗಿದ್ದ ಸಿನಿಮಾ ಹೀನಾಯವಾಗಿ ಸೋತಿದೆ.
ಮೇ 12ರಂದು ಅಕ್ಕಿನೇನಿ ನಾಗಚೈತನ್ಯ ಸಿನಿಮಾ 'ಕಸ್ಟಡಿ' ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ವಿಫಲವಾಗಿದೆ. ರಿಲೀಸ್ ಆದ ಮೊದಲ ಮೂರು ದಿನ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಈ ಸಿನಿಮಾ ವಿಫಲವಾಗಿದೆ.

ಕೆಲವು ದಿನಗಳ ಹಿಂದಷ್ಟೇ ಅಖಿಲ್ ಅಕ್ಕಿನೇನಿಯ ಪ್ಯಾನ್ ಇಂಡಿಯಾ ಸಿನಿಮಾ 'ಏಜೆಂಟ್' ಕೂಡ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈಗ ಅಣ್ಣನ ಸಿನಿಮಾ ಕೂಡ ಬಾಕ್ಸಾಫೀಸ್ ಫ್ಲಾಪ್ ಅಂತ ಸಾಬೀತಾಗಿದೆ. ಮೊದಲ ಮೂರು ದಿನಗಳಲ್ಲಿ ನಾಗಚೈತನ್ಯ ಸಿನಿಮಾ ಗಳಿಸಿದ್ದೆಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಕಸ್ಟಡಿ' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
'ಕಸ್ಟಡಿ' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ನಿರಾಸೆ ಮೂಡಿಸಿರೋದಂತೂ ನಿಜ. ಮೊದಲ ಮೂರು ದಿನಗಳಲ್ಲಿ ನಾಗ ಚೈತನ್ಯ ನಟಿಸಿದ 'ಕಸ್ಟಡಿ' ಭಾರತಾದ್ಯಂತ ಸುಮಾರು ಕೇವಲ 6.6 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ನಾಗಚೈತನ್ಯ ಅಂತಹ ಹೀರೊಗಳ ಸಿನಿಮಾದ ಕಲೆಕ್ಷನ್ ಇನ್ನೂ ಹೆಚ್ಚಿರಬೇಕಿತ್ತು. ಮೇ 13 (ಶನಿವಾರ), ಮೇ 14 (ಭಾನುವಾರ) ಕೇವಲ ಮೂರು ಕೋಟಿ ರೂ. ಅಷ್ಟೇ ಕಲೆಕ್ಷನ್ ಆಗಿದೆ. ಭಾನುವಾರವೂ ಬರೀ 1.75 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಬಾಕ್ಸಾಫೀಸ್‌ನಲ್ಲಿ ನಿರಾಸೆ
ನಾಗಚೈತನ್ಯ 'ಕಸ್ಟಡಿ' ಸಿನಿಮಾಗಾಗಿ ಭರ್ಜರಿ ಪ್ರಚಾರ ಮಾಡಿದ್ದರು. ಹೆಚ್ಚು ಸಂದರ್ಶನಗಳನ್ನು ನೀಡಿದ್ದರು. ಇನ್ನೊಂದು ಕಡೆ ತಮಿಳಿನ ಸ್ಟಾರ್ ನಿರ್ದೇಶಕ ವೆಂಕಟ್ ಪ್ರಭು ಆಕ್ಷನ್ ಕಟ್ ಹೇಳಿದರೂ, ಬಿಗ್ ಹಿಟ್ ಕೊಡುವುದಕ್ಕೆ ಆಗಲಿಲ್ಲ.
ಅಕ್ಕಿನೇನಿ ನಾಗಚೈತನ್ಯ ಜೊತೆ ಕೃತಿ ಶೆಟ್ಟಿ, ಅರವಿಂದ್ ಸ್ವಾಮಿ, ಶರತ್ ಕುಮಾರ್ ಹಾಗೂ ಪ್ರಿಯಾಮಣಿ ಅಂತ ಜನಪ್ರಿಯ ಕಲಾವಿದರು ಕೆಲಸ ಮಾಡಿದ್ದಾರೆ. ಇವರೊಂದಿಗೆ ಇಳಯರಾಜ ಹಾಗೂ ಯುವನ್ ಶಂಕರ್ ರಾಜಾ ಸಂಗೀತವಿದೆ. ಹೀಗಿದ್ದರೂ, ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಬಾಕ್ಸಾಫೀಸ್‌ನಲ್ಲೂ ಮೋಡಿ ಮಾಡುವಲ್ಲಿ ವಿಫಲವಾಗಿದೆ.
'ಕಸ್ಟಡಿ' ಬ್ಯುಸಿನೆಸ್ ಹೇಗಿದೆ?
ನಾಗಚೈತನ್ಯ 'ಕಸ್ಟಡಿ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಸೀಮಿತವಾಗಿತ್ತು. ಮೊದಲ ದಿನವೇ ಮಾರ್ನಿಂಗ್ ಶೋಗಳಿಗೆ ಹೋಲಿಸಿದರೆ ಮ್ಯಾಟಿನಿಗಳು ಶೋಗಳಿಗೆ ಶೇ. 50 ಕ್ಕಿಂತ ಅಧಿಕ ಮಂದಿ ಕಡಿಮೆಯಾಗಿತ್ತು. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಲು ವಿಫಲವಾಗಿದೆ. ನಿಜಾಮ್‌ನಲ್ಲಿ 'ಕಸ್ಟಡಿ' ಸಿನಿಮಾ 7.50 ಕೋಟಿ ರೂ., ಸೀಡೆಡ್ 2.20 ಕೋಟಿ ರೂ.ಗೆ ಸೇಲ್ ಆಗಿತ್ತು.
ತೆಲುಗು ರಾಜ್ಯಗಳಲ್ಲಿ 8.50 ಕೋಟಿ ರೂ. ವ್ಯವಹಾರ ಮಾಡಿತ್ತು. ಕರ್ನಾಟಕ ಹೊರತುಪಡಿಸಿ ಉಳಿದ ಕಡೆ 1.20 ಕೋಟಿ ರೂ., ರೆಸ್ಟ್ ಆಫ್ ಕರ್ನಾಟಕ 2.40 ಕೋಟಿ ರೂ., ತಮಿಳು ಅವತರಣಿಕೆಗೆ 2.20 ಕೋಟಿ ರೂ.ಗೆ ಸೇಲ್ ಆಗಿತ್ತು. ವಿಶ್ವವಾದ್ಯಂತ 24.00 ಕೋಟಿ ರೂ. ಬ್ಯುಸಿನೆಸ್ ಮಾಡಿತ್ತು.


Click it and Unblock the Notifications











