Akhanda 2: ಬಾಲಯ್ಯ ಸಿನಿಮಾ 'ಅಖಂಡ 2' ಮುಂದೂಡಿಕೆ ಏಕೆ? ಮಹೇಶ್ ಬಾಬುವಿನ 2 ಸಿನಿಮಾ ಕಾರಣ?
ಎಲ್ಲಾ ಸರಿಯಾಗಿ ಇದ್ದಿದ್ದರೆ ಈಗಾಗಲೇ ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2' ಸಿನಿಮಾ ರಿಲೀಸ್ ಆಗಬೇಕಿತ್ತು. ಈ ಸಿನಿಮಾ ನೋಡುವುದಕ್ಕೆ ಬಾಲಯ್ಯ ಅಭಿಮಾನಿಗಳು ಮುಗಿಬಿದ್ದಿದರು. ನಿನ್ನೆಯ (ಡಿಸೆಂಬರ್ 4) ಪೇಯ್ಡ್ ಪ್ರೀಮಿಯರ್‌ಗೆ ನೋಡುವುದಕ್ಕೆ ಟಿಕೆಟ್‌ಗಳನ್ನು ಖರೀದಿ ಮಾಡಿದ್ದರು. ಇನ್ನೇನು ಸಿನಿಮಾವನ್ನು ಕಣ್ತುಂಬಿಕೊಂಡೇ ಬಿಡುತ್ತೇವೆ ಎಂದುಕೊಂಡಿದ್ದರಿಗೆ ನಿರಾಸೆಯಾಗಿದೆ.
'ಅಖಂಡ 2' ಸಿನಿಮಾವನ್ನು 14 ರೀಲ್ಸ್ ನಿರ್ಮಾಣ ಮಾಡಿತ್ತು. 'ಅಖಂಡ' ಯಶಸ್ಸಿನ ಬೆನ್ನಲ್ಲೇ 14 ರೀಲ್ಸ್ ಪಾರ್ಟ್ 2 ನಿರ್ಮಾಣ ಮಾಡುವುದಕ್ಕೆ ಮುಂದಾಗಿತ್ತು. ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ದಿಢೀರನೇ ಕ್ರೇಜ್ ಹೆಚ್ಚಾಗಿತ್ತು. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಓಪನಿಂಗ್ ಸಿಗುವ ಸಾಧ್ಯತೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಅಷ್ಟರಲ್ಲೇ ಮತ್ತೊಂದು ನಿರ್ಮಾಣ ಸಂಸ್ಥೆ ಇರೋಸ್ (Eros) ಕೋರ್ಟ್ ಮೆಟ್ಟಿಲೇರಿದೆ.

ಬಾಲಯ್ಯನ 'ಅಖಂಡ 2' ರಿಲೀಸ್‌ಗೆ ಇನ್ನೇನು ಕೆಲವೇ ಗಂಟೆಗಳು ಇರುವಾಗಲೇ ಇರೋಸ್ ಕೋರ್ಟ್ ಮೆಟ್ಟಿಲೇರಿತ್ತು. ಪ್ಲಾನ್ ಮಾಡಿಕೊಂಡಂತೆ ವಿಶ್ವದಾದ್ಯಂತ ಸಿನಿಮಾ ಈಗಾಗಲೇ ರಿಲೀಸ್ ಆಗಿಬಿಡಬೇಕಿತ್ತು. ಆದರೆ, ನಿರ್ಮಾಣ ಸಂಸ್ಥೆ 14 ರೀಲ್ಸ್ ಪ್ಲಸ್ ತನ್ನ ಎಕ್ಸ್ ಖಾತೆಯಲ್ಲಿ ಸಿನಿಮಾ ರಿಲೀಸ್ ಅನ್ನು ಪೋಸ್ಟ್‌ಪೋನ್ ಮಾಡಲಾಗಿದೆ ಎಂದು ಹೇಳಿತ್ತು. ಇದರ ಹಿಂದೆ ಎರಡು ಸಂಸ್ಥೆಗಳ ನಡುವಿನ ವ್ಯವಹಾರಿಕ ಸಮಸ್ಯೆಗಳೇ ಕಾರಣ ಎನ್ನಲಾಗಿದೆ. ಅಷ್ಟಕ್ಕೂ ಏನಿದು ವಿವಾದ? ತಿಳಿಯುವುದಕ್ಕೆ ಮುಂದೆ ಓದಿ.
'ಅಖಂಡ 2' ರಿಲೀಸ್‌ಗೆ ವಿಘ್ನ
ಬಾಲಕೃಷ್ಣ ಹಾಗೂ ಬೊಯಪಾಟಿ ಶ್ರೀನು ಕಾಂಬಿನೇಷನ್ ಸಿನಿಮಾ ಟ್ರೈಲರ್‌ನಿಂದಲೇ ಸದ್ದು ಮಾಡಿತ್ತು. ಆದರೆ, ವಿಘ್ನ ಎದುರಾಗಿದೆ. ಸಿನಿಮಾದ ಪ್ರಚಾರ, ಕ್ರೇಜ್ ಎಲ್ಲವೂ ನೀರಿನಲ್ಲಿ ತೊಳೆದು ಹೋಗುವಂತೆ ಆಗಿದೆ. ಈಗಾಗಲೇ ನಿರ್ಧಾರವಾದಂತೆ 'ಅಖಂಡ 2' ಬಿಡುಗಡೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ 14 ರೀಲ್ಸ್ ನಿರ್ಮಾಣ ಮಾಡಿದ್ದ ಮಹೇಶ್ ಬಾಬು ನಟನೆಯ ಆ ಎರಡು ಸಿನಿಮಾಗಳೇ ಕಾರಣ ಎನ್ನಲಾಗಿದೆ.
ಮಹೇಶ್ ಬಾಬು ಸಿನಿಮಾಗಳು ಹೇಗೆ ಕಾರಣ?
14 ರೀಲ್ಸ್ ಸಂಸ್ಥೆ ಈ ಹಿಂದೆ ಮಹೇಶ್ ಬಾಬು ನಟಿಸಿದ 'ನಂ 1 ನೇನೊಕ್ಕಡೇನೆ' ಹಾಗೂ 'ಆಗಡು' ಎಂಬ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿತ್ತು. ಈ ಸಿನಿಮಾಗಳಿಗೆ ಇರೋಸ್ ಇಂಟರ್‌ನ್ಯಾಷನಲ್ ಹಣಕಾಸಿನ ನೆರವು ನೀಡಿತ್ತು. ಆದರೆ, ಎರಡೂ ಸಿನಿಮಾಗಳು ಸೋತಿದ್ದರಿಂದ ಹಣವನ್ನು ಹಿಂತಿರುಗಿಸಲಿಲ್ಲ. ಹೀಗಾಗಿ ಅಸಲಿಗೆ ಬಡ್ಡಿ ಮೇಲೆ ಬಡ್ಡಿ ಬೆಳೆದಿತ್ತು. ಇರೋಸ್‌ನಿಂದ ₹27.8 ಕೋಟಿ ನೆರವು ಪಡೆದಿದ್ದ 14 ರೀಲ್ಸ್ 2019ರಿಂದ ಶೇ.14ರಷ್ಟು ಬಡ್ಡಿಯನ್ನೂ ಕಟ್ಟಿರಲಿಲ್ಲ. ಹೀಗಾಗಿ ₹27.8 ಕೋಟಿ + ₹24.79 ಕೋಟಿ ಸೇರಿ ₹52.59 ಕೋಟಿ ನೀಡಬೇಕೆಂದು ಕೋರ್ಟ್ ಮೆಟ್ಟಿಲೇರಿದೆ ಎಂದು ಡೈಲಿ ಕಲ್ಚರ್ ವರದಿ ಮಾಡಿದೆ.

ತಮಿಳುನಾಡಿನಲ್ಲಿ ಕೇಸ್ ದಾಖಲು
'ಅಖಂಡ 2' ಬಿಡುಗಡೆಗೆ ಇನ್ನೇನು ಕೆಲವೇ ಗಂಟೆಗಳು ಇವೆ ಅನ್ನುವಾಗಲೇ ಬಾಲಕೃಷ್ಣ ಸಿನಿಮಾ ಬಿಡುಗಡೆಯನ್ನು ತಡೆಯುವಂತೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು.
ಇರೋಸ್ ಇಂಟರ್‌ನ್ಯಾಷನಲ್ ಮೀಡಿಯಾ ಲಿಮಿಟೆಡ್ ಮನವಿಯನ್ನು ಪರಿಗಣಿಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾದ ಎಸ್‌ಎಂ ಸುಬ್ರಮಣಿಯಂ ಹಾಗೂ ಸಿ ಕುಮಾರಪ್ಪನ್ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಿದ್ದರು. ಹೀಗಾಗಿ 'ಅಖಂಡ 2'ಗೆ ಸಂಕಷ್ಟ ಎದುರಾಗಿದೆ.
'ಅಖಂಡ 2' ರಿಲೀಸ್ ಯಾವಾಗ?
ಬಾಲಯ್ಯ ನಟನೆಯ 'ಅಖಂಡ 2' ಈ ವಾರ ರಿಲೀಸ್ ಆಗೋದು ಅನುಮಾನ. ನಿನ್ನೆಯೇ ತಡೆಯಾಜ್ಞೆ ತೆರವು ಆಗಿದ್ದರೆ, ಇಂದು (ಡಿಸೆಂಬರ್ 5) ಬೆಳಗ್ಗೆಯಿಂದಲೇ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ಆದರೆ, ಇನ್ನೂ ಕೇಸ್ ನಡೆಯುತ್ತಿರುವುದರಿಂದ ನಿರ್ಮಾಣ ಸಂಸ್ಥೆ ಮುಂದಿನ ದಿನಗಳಲ್ಲಿ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಿದೆ. ಸದ್ಯಕ್ಕೆ ಯಾವಾಗ ರಿಲೀಸ್ ಅನ್ನೋ ಬಗ್ಗೆ ಸುಳಿವು ಇಲ್ಲ.


Click it and Unblock the Notifications











