'ಕಾರ್ತಿಕೇಯ' ಖ್ಯಾತಿಯ ನಿಖಿಲ್ ಸಿದ್ದಾರ್ಥ್ ಹೊಸ ಸಿನಿಮಾ 'ಸ್ವಯಂಭು'; ಬಾಬಾ ಧೀವರ ಸಖತ್ ಟ್ರೆಂಡಿಂಗ್
2022ರಲ್ಲಿ ತೆರೆಕಂಡಿದ್ದ 'ಕಾರ್ತಿಕೇಯ 2' ಪ್ಯಾನ್ ಇಂಡಿಯಾ ರಿಲೀಸ್ ಆಗಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತ್ತು. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಈ ಬ್ಲಾಕ್‌ಬಸ್ಟರ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ತೆಲುಗು ನಟ ನಿಖಿಲ್ ಸಿದ್ಧಾರ್ಥ್. ದೇಶಾದ್ಯಂತ ಸದ್ದು ಮಾಡಿದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದರು..
'ಕಾರ್ತಿಕೇಯ 2' ಪ್ಯಾನ್ ಇಂಡಿಯಾ ಸಕ್ಸಸ್ ಆಗಿದ್ದಷ್ಟೇ. ಆನಂತರ ಬಂದ ಸಿನಿಮಾಗಳು ಬಾಕ್ಸಾಫೀಸ್ ಸದ್ದು ಮಾಡಲಿಲ್ಲ. '18 ಪೇಜಸ್' ಅವರೇಜ್ ಹಿಟ್ ಅಂತ ಸಾಬೀತಾಯ್ತು. ಈ ಸಿನಿಮಾ ಬಳಿಕ ತೆರೆಕಂಡಿದ್ದೇ 'ಸೈ'. ಈ ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಹೀನಾಯವಾಗಿ ಸೋತಿತ್ತು. 2024ರಲ್ಲಿ ತೆರೆಕಂಡ ಮತ್ತೊಂದು ಸಿನಿಮಾ 'ಅಪ್ಪುಡೋ ಇಪ್ಪುಡೋ ಎಪ್ಪುಡೋ'ಗೂ ನೆಗೆಟಿವ್ ರಿವ್ಯೂಗಳೇ ಸಿಕ್ಕಿತ್ತು. ಈ ಸಿನಿಮಾ ರುಕ್ಮಿಣಿ ವಸಂತ್ ನಾಯಕಿಯಾಗಿದ್ದರು.

ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡ ಬಳಿಕ ಮತ್ತೊಂದು ಪವರ್‌ಫುಲ್ ಸಿನಿಮಾ ಮೂಲಕ ಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅದುವೇ 'ಸ್ವಯಂಭು'. ಈ ಸಿನಿಮಾದಲ್ಲಿ ನಿಖಿಲ್ ಸಿದ್ಧಾರ್ಥ್ ಪವರ್‌ಫುಲ್ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆಂದು ಭಾಸವಾಗುತ್ತಿದೆ. ಇದು ನಿಖಿಲ್ ಸಿದ್ಧಾರ್ಥ್ ವೃತ್ತಿ ಬದುಕಿನಲ್ಲೇ ನಿರೀಕ್ಷೆಯನ್ನು ಹುಟ್ಟಾಕಿರುವ ಸಿನಿಮಾ. ಹಾಗಿದ್ದರೆ, ಈ ಸಿನಿಮಾದ ಹೈಲೈಟ್ ಏನು? ಸಿನಿಮಾದ "ಬಾಬಾ ಧೀವರ.." ಹಾಡು ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
ನಿಖಿಲ್ ಸಿದ್ಧಾರ್ಥ್ ತೆಲುಗಿನ ಪ್ರತಿಭಾನ್ವಿತ ನಟ ಅನ್ನೋದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಅವರು ನಟಿಸಿದ 'ಕಾರ್ತಿಕೇಯ 2' ಅದನ್ನು ಸಾಬೀತು ಮಾಡಿದೆ. ಈಗ ಇದೇ ಜಾನರ್‌ನ ಮತ್ತೊಂದು ಬಹುನಿರೀಕ್ಷಿತ ಐತಿಹಾಸಿಕ 'ಸ್ವಯಂಭು' ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಸದ್ಯ ಸಿನಿಮಾದ "ಬಾಬಾ ಧೀವರ.." ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ನಿಖಿಲ್ ಸಿದ್ಧಾರ್ಥ್ ದೈಹಿಕವಾಗಿ ಫಿಟ್ ಆಗಿ ಕಂಡಿದ್ದಾರೆ. ಹಾಗೇ ಹಾಡಿಗೂ ಕೂಡ ಅಷ್ಟೇ ಪವರ್‌ಫುಲ್ ಆಗಿದೆ.
'ಸ್ವಯಂಭು' ಸಿನಿಮಾ ಬಹುಭಾಷೆಯಲ್ಲಿ ರಿಲೀಸ್ ಆಗಲಿದೆ. ಅದರಲ್ಲಿ ಕನ್ನಡ ವರ್ಷನ್ ಕೂಡ ಒಂದು. ಕನ್ನಡ ವರ್ಷನ್‌ಗೆ ರವಿ ಬಸ್ರೂರ್ ಸಂಗೀತ ಜೊತೆಗೆ ಸಂಗೀತವನ್ನು ನೀಡಿದ್ದಾರೆ. ಅದರಲ್ಲೂ ಕನ್ನಡ ವರ್ಷನ್‌ಗೆ ರವಿ ಬಸ್ರೂರ್ ಅವರೇ ಸಾಹಿತ್ಯ ರಚಿಸಿದ್ದಾರೆ. ಈ ಸಿನಿಮಾದ ಹಾಡಿಗೆ ಸಂತೋಷ್ ವೆಂಕಿ ಟ್ಯೂನ್ ಹಾಕಿದ್ದಾರೆ. "ಬಾಬಾ ಧೀವರ.." ಎಂದು ಆರಂಭ ಆಗುವ ಈ ಹಾಡನ್ನು ಅದ್ಧೂರಿ ಸೆಟ್‌ನಲ್ಲಿ ಶೂಟಿಂಗ್ ಮಾಡಲಾಗಿದೆ.
"ಬಾಬಾ ಧೀವರ.." ಹಾಡಿಗೆ ನಿಖಿಲ್ ಸಿದ್ದಾರ್ಥ್ ಜೊತೆ ನಟಿ ನಭಾ ನಟೇಶ್ ಅದ್ದೂರಿ ಸೆಟ್‌ನಲ್ಲಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಅಂದ್ಹಾಗೆ ಈ ಸಿನಿಮಾದಲ್ಲಿ ನಿಖಿಲ್ ಸಿದ್ಧಾರ್ಥ್ ಜೊತೆ ಸಂಯುಕ್ತಾ, ನಭಾ ನಟೇಶ್ ಮತ್ತು ನವಾಬ್ ಶಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪಿಕ್ಸೆಲ್ ಸ್ಟುಡಿಯೋ ಮೂಲಕ ಭುವನ್ ಹಾಗೂ ಶ್ರೀಕರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಟ್ಯಾಗೋರೆ ಮಧು ಪ್ರೆಸೆಂಟ್ ಮಾಡುತ್ತಿದ್ದು, ಅದ್ಧೂರಿಯಾಗಿ ಮೂಡಿ ಬಂದಿದೆ ಎನ್ನಲಾಗಿದೆ.
ಇನ್ನು 'ಸ್ವಯಂಭು' ಎಂದರೆ ಸ್ವಯಂ ಹುಟ್ಟು ಎಂದರ್ಥ. ಸಹಸ್ರಮಾನಗಳ ಹಿಂದಿನ ಕಥೆ ಒಳಗೊಂಡಿರುವ 'ಸ್ವಯಂಭು' ಸಿನಿಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್ ಸಿನಿಮಾ ಅನ್ನೋದು ವಿಶೇಷ. ಈ ಸಿನಿಮಾಗೆ ಈಗಾಗಲೇ ಬೇಡಿಕೆ ಹೆಚ್ಚಾಗಿದ್ದು, ಬಿಡುಗಡೆಗೂ ಮುನ್ನವೇ ನೆಟ್‌ಫ್ಲಿಕ್ಸ್ ಓಟಿಟಿ ಡೀಲ್ ಮಾಡಿಕೊಂಡಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.


Click it and Unblock the Notifications