ಎನ್‌ಟಿಆರ್ ಕುಟುಂಬಕ್ಕೆ ನಿಲ್ಲುತ್ತಿಲ್ಲ ಅಪಘಾತದ ಆಘಾತ!
ಎನ್‌ಟಿಆರ್ ಕುಟುಂಬದ ತಾರಕ್ ರತ್ನ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊತ್ತಿನಲ್ಲಿಯೇ ಅದೇ ಕುಟುಂಬಕ್ಕೆ ಸೇರಿದ ಸದಸ್ಯರೊಬ್ಬರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಆಂಧ್ರ-ತೆಲಂಗಾಣಗಳ ರಾಜಕೀಯ ಹಾಗೂ ಸಿನಿಮಾ ಎರಡರ ಮೇಲೂ ಪ್ರಬಲ ಹಿಡಿತ ಹೊಂದಿರುವ ಎನ್‌ಟಿಆರ್ ಕುಟುಂಬಕ್ಕೆ ಅಪಘಾತಗಳು ಒಂದರ ಹಿಂದೊಂದು ಎದುರಾಗುತ್ತಲೇ ಇವೆ.
ಈ ಕುಟುಂಬದ ಸದಸ್ಯರು ಪ್ರಯಾಣ ಮಾಡುವಾಗ ಏನಾದರೂ ಸಮಸ್ಯೆಗೆ ಸಿಲುಕುವುದು, ಅಪಘಾತಕ್ಕೆ ಗುರಿಯಾಗುವುದು ಮೊದಲಿನಿಂದಲೂ ನಡೆದು ಬಂದಿದೆ. ಈ ಸಮಸ್ಯೆ ಎನ್‌ಟಿಆರ್ ಕುಟುಂಬವನ್ನು ಬೆನ್ನು ಬಿಡದೆ ಕಾಡುತ್ತಿದೆ.
ಮೊದಲಿಗೆ ಜೂ ಎನ್‌ಟಿಆರ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಪ್ರಾಣಾಪಾಯದಿಂದ ಪಾರಾದರು. ಆ ಬಳಿಕ ಜೂ ಎನ್‌ಟಿಆರ್ ಅವರ ತಂದೆ ಹರಿಕೃಷ್ಣ ಕಾರು ಅಪಘಾತದಲ್ಲಿಯೇ ನಿಧನ ಹೊಂದಿದರು. ಇದೀಗ ನಟ ಬಾಲಕೃಷ್ಣರ ಸಹೋದರ, ಜೂ ಎನ್‌ಟಿಆರ್‌ಗೆ ಚಿಕ್ಕಪ್ಪನಾಗಿರುವ ನಂದಮೂರಿ ರಾಮಕೃಷ್ಣರ ಕಾರು ಅಪಘಾತಕ್ಕೆ ಗುರಿಯಾಗಿದೆ.

ರಾಮಕೃಷ್ಣ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಜಖಂ ಆಗಿದೆ. ಬೆಳಗಿನ ಜಾವ ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನ 10ನೇ ರಸ್ತೆಯಲ್ಲಿ ಸ್ವತಃ ರಾಮಕೃಷ್ಣ ಅವರು ಕಾರು ಚಲಾಯಿಸಿಕೊಂಡು ಬರುಬೇಕಾದರೆ ಈ ಅವಘಡ ಸಂಭವಿಸಿದೆ. ಕಾರಿಗೆ ದೊಡ್ಡದಾಗಿ ಪೆಟ್ಟಾಗಿದ್ದು, ಕಾರಿನ ಮುಂಭಾಗ ಬಹುತೇಕ ಜಖಂ ಆಗಿದೆ. ಆದರೆ ಒಳಗಿದ್ದ ರಾಮಕೃಷ್ಣ ಅವರಿಗೆ ಗಾಯಗಳಷ್ಟೆ ಆಗಿವೆ ಎನ್ನಲಾಗುತ್ತಿದೆ.
ಸೀನಿಯರ್ ಎನ್‌ಟಿಆರ್ ಕಾಲದಿಂದಲೂ ರಸ್ತೆ ಅಪಘಾತಗಳು ಎನ್‌ಟಿಆರ್ ಕುಟುಂಬಕ್ಕೆ ಸಾಮಾನ್ಯ ಎಂಬಂತಾಗಿವೆ. ಎನ್‌ಟಿಆರ್ ಅವರು ಸಿಎಂ ಆಗುವ ಮುನ್ನ ಅವಿಭಜಿತ ಆಂಧ್ರ ಪ್ರದೇಶದಲ್ಲಿ ಯಾತ್ರೆ ಮಾಡುವಾಗ ಕೆಲವು ಸಮಸ್ಯೆಗಳು ಅವರಿಗೆ ಎದುರಾಗಿದ್ದವು. ಅವರು ಸಂಚರಿಸುತ್ತಿದ್ದ ವಾಹನದ ಮೇಲೆ ಬಾಂಬ್ ಸಹ ಎಸೆಯಲಾಯಿತು. ಅವರು ಅಪಾಯದಿಂದ ಪಾರಾದರಾದರೂ ಕೆಲವರಿಗೆ ಗಾಯಗಳಾದವು, ಕೆಲವರು ನಿಧನ ಹೊಂದಿದರು.
ನಟ ನಂದಮೂರಿ ಬಾಲಕೃಷ್ಣ ಅವರು ತಮ್ಮ ಕಾಲೇಜು ಸಮಯದಲ್ಲಿಯೇ ಅಪಘಾತಕ್ಕೆ ಗುರಿಯಾಗಿದ್ದರು. ಅವರೂ ಸಹ ಉಳಿಯುವುದು ಕಷ್ಟ ಎಂಬ ಪರಿಸ್ಥಿತಿ ತಲುಪಿದ್ದರು. ಆದರೆ ಹೇಗೋ ಪಾರಾದರು. ಈಗ ನಟ, ರಾಜಕಾರಣಿ ತಾರಕ್ ರತ್ನ ಕೆಲವು ದಿನಗಳ ಹಿಂದೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದಾರೆ. ಅವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Click it and Unblock the Notifications











