47ನೇ ವಯಸ್ಸಿನಲ್ಲಿ 'ಬಾಹುಬಲಿ' ನಟನಿಗೆ ಮದುವೆ; 'ಕೊನೆಗೂ ಮದುವೆಯಾದೆ' ಎಂದು ನಿಟ್ಟುಸಿರು ಬಿಟ್ಟ ಸುಬ್ಬರಾಜು
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ 'ಬಾಹುಬಲಿ 2' ಸಿನಿಮಾ ನೋಡಿರುತ್ತೀರ. ಈ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇವರಿಬ್ಬರ ಮಧ್ಯೆ ಕುಮಾರ ವರ್ಮ ಅನ್ನುವ ಪಾತ್ರ ಪ್ರೇಕ್ಷಕರಿಗೆ ಮುಖದಲ್ಲಿ ನಗು ತರಿಸಿತ್ತು. ಇನ್ನೊಂದು ಭಾವುಕರನ್ನಾಗಿಸಿತ್ತು. ಆ ಪಾತ್ರದಲ್ಲಿ ನಟಿಸಿದ ನಟನ ಹೆಸರೇ ಸುಬ್ಬರಾಜು.
ಸುಬ್ಬರಾಜು ತೆಲುಗು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಖಳನಾಯಕನಾಗಿ ಹೆಚ್ಚಾಗಿ ಗುರುತಿಸಿಕೊಂಡಿದ್ದ ಈ ನಟ ಕಾಮಿಡಿ ಸೇರಿದಂತೆ ಹಲವು ಶೇಡ್‌ನ ಪಾತ್ರದಲ್ಲಿ ನಟಿಸಿದ್ದಾರೆ. ಆ ನಟ ತನ್ನ 47ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ದಿಲ್ಲದೆ, ತನ್ನ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಆ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸುಬ್ಬರಾಜು ತೆಲುಗು ಚಿತ್ರರಂಗದ ಜನಪ್ರಿಯರ ನಟ. ತೆಲುಗು ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳ ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿ ಜನಪ್ರಿಯರಾಗಿದ್ದಾರೆ. ತೆಲುಗು ಹಾಗೂ ಬೇರೆ ಭಾಷೆಯಲ್ಲಿ ಸಿನಿಮಾಗಳಲ್ಲಿಯೇ ಹೆಚ್ಚು ಬ್ಯುಸಿಯಾಗಿರುತ್ತಿದ್ದ ನಟ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಗಿದ್ದರೆ, ಬಾಹುಬಲಿ ನಟ ಮದುವೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
'ಬಾಹುಬಲಿ' ನಟ ಸುಬ್ಬರಾಜು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ವಿವಾಹದ ಬಳಿಕ ಪತ್ನಿಯೊಂದಿಗೆ ನಿಂತು ತೆಗೆಸಿಕೊಂಡು ಫೋಟೊವನ್ನು ತಮ್ಮ ಅಭಿಮಾನಿಗಳಿಗಾಗಿ ಶೇರ್ ಮಾಡಿಕೊಂಡಿದ್ದಾರೆ. ಕೂಲಿಂಗ್ ಗ್ಲಾಸ್ ಧರಿಸಿ ಮಧುಮಗನ ಗೆಟಪ್‌ನಲ್ಲಿ ಧೋತಿ ಹಾಗೂ ಝರಿ ಝರಿ ಮಿಂಚುವ ಕುರ್ತಾ ಧರಿಸಿ ಮಿಂಚಿದ್ದಾರೆ. ಅವರ ಪತ್ನಿ ಕೂಡ ಕೇಸರಿ ಬಣ್ಣದ ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ.
ನಟ ಸುಬ್ಬರಾಜು ವಿವಾಹದ ವಿಷಯವನ್ನು ತಿಳಿದು ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಬಾಹುಬಲಿ ನಟನಿಗೆ ಶುಭ ಕೋರುತ್ತಿದ್ದಾರೆ. ತೆಲುಗಿನ ಹಾಸ್ಯ ನಟ ವೆನ್ನೆಲಾ ಕಿಶೋರ್ "ಅಭಿನಂದನೆಗಳು ಗುರುಜೀ" ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೇ ನಿರ್ದೇಶಕ ಹರೀಶ್ ಶಂಕರ್ " ಅಭಿನಂದನೆಗಳು ಸುಬ್ಬರಾಜು.. ಹ್ಯಾಪಿ ಮ್ಯಾರೀಡ್ ಲೈಫ್" ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ಪ್ರಿಯಾಮಣಿ ಈ ಜೋಡಿಗೆ "ಅಭಿನಂದನೆಗಳು" ಎಂದು ಹೇಳಿದ್ದಾರೆ.
ನಟ ಸುಬ್ಬರಾಜು ಕೂಡ ಮದುವೆ ಫೋಟೊಗಳನ್ನು ಹಂಚಿಕೊಂಡು "ಕೊನೆಗೂ ಮದುವೆಯಾದೆ" ಎಂದು ಬರೆದು ಕೊಂಡಿದ್ದಾರೆ. ಈ ಕಾಮೆಂಟ್‌ಗೆ ನೆಟ್ಟಿಗರು ಕೂಡ ತಮಾಷೆಯಾಗಿಯೇ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸುಬ್ಬರಾಜು ಸಿನಿಮಾ ಕೇವಲ ತೆಲುಗು ಅಷ್ಟೇ ಅಲ್ಲ. ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಕನ್ನಡ ಸೂಪರ್‌ಸ್ಟಾರ್‌ಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತೆಲುಗಿನಲ್ಲಿ ಪ್ರಭಾಸ್ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, 'ಮಿರ್ಚಿ', 'ಬಿಲ್ಲಾ', 'ಬಾಹುಬಲಿ 2' ಸಿನಿಮಾಗಳು ಹೆಚ್ಚು ಜನಪ್ರಿಯವಾಗಿವೆ. ಹಾಗೇ ಮಹೇಶ್ ಬಾಬು ನಟಿಸಿದ 'ಪೋಕಿರಿ', ಅಲ್ಲು ಅರ್ಜುನ್ 'ಆರ್ಯ', ವಿಜಯ್ ದೇವರಕೊಂಡ 'ಗೀತ ಗೋವಿಂದಂ' ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ದರ್ಶನ್ ಜೊತೆ 'ಗಜ', 'ಸತ್ಯ ಇನ್ ಲವ್', 'ನಮ್ಮಣ್ಣ' ಹಾಗೂ 'ಸಂಚಾರಿ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











