'ದಿ ರಾಜಾಸಾಬ್' ಸಿನಿಮಾದಲ್ಲಿ ಪ್ರಭಾಸ್ ಜಬರ್‌ದಸ್ತ್ ಡಾನ್ಸ್; "ರೆಬೆಲ್ ಸಾಬ್.." ಫ್ಯಾನ್ಸ್ ಥ್ರಿಲ್
ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಹೊಸ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇಲ್ಲಿವರೆಗೂ ಮಾಸ್ ಅವತಾರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಪ್ರಭಾಸ್ ಈ ಬಾರಿ ವರಸೆ ಬದಲಾಗಿದೆ. ಹಾರರ್-ಕಾಮಿಡಿ ಮೂಲಕ ಪ್ರೇಕ್ಷಕರಿಗೆ ಕಿಕ್ ಕೊಡುವುದಕ್ಕೆ ನಿರ್ಧರಿಸಿದ್ದಾರೆ. ಆ ಸಿನಿಮಾವೇ 'ದಿ ರಾಜಾಸಾಬ್'. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆದ ಬಳಿಕ ಅತೀ ಕಡಿಮೆ ಸಮಯದಲ್ಲಿ ಮುಗಿಸಿರೋ ಸಿನಿಮಾ. ಹೀಗಾಗಿ ಪ್ರೇಕ್ಷಕರಿಗೆ ಹಾಗೂ ಸಿನಿಮಾ ಮಂದಿಗೆ 'ದಿ ರಾಜಾಸಾಬ್' ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.
ಈಗಾಗಲೇ ಟಾಲಿವುಡ್ ರೆಬೆಲ್ ಸ್ಟಾರ್ 'ದಿ ರಾಜಾಸಾಬ್' ಟ್ರೈಲರ್ ಮೂಲಕ ಕೌತುಕ ಸೃಷ್ಟಿಸಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ದುಪ್ಪಟ್ಟು ನಿರೀಕ್ಷೆಗಳಿವೆ. ಪ್ಯಾನ್ ಇಂಡಿಯಾ ಸಬ್ಜೆಕ್ಟ್ ಅಂತ ಅನಿಸದೇ ಹೋದರೂ, ಪ್ರಭಾಸ್ ಇರುವುದರಿಂದ ಈ ಸಿನಿಮಾಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬೇಡಿಕೆ ಬಂದಿದೆ. ಈಗಾಗಲೇ ಭಾರತದಾದ್ಯಂತ 'ದಿ ರಾಜಾಸಾಬ್'ಗೆ ಬೇಡಿಕೆ ಹೆಚ್ಚಾಗಿರುವ ಬಗ್ಗೆ ವರದಿಯಾಗಿದೆ.

'ದಿ ರಾಜಾಸಾಬ್' ಟ್ರೈಲರ್ ನೋಡಿದರೆ, ಇದೊಂದು ಪಕ್ಕಾ ಎಂಟರ್‌ಟೈನರ್ ಸಿನಿಮಾ ಎನ್ನುವ ಸುಳಿವು ಕೊಟ್ಟಿದೆ. ಈ ಗ್ಯಾಪ್‌ನಲ್ಲೇ ಚಿತ್ರತಂಡ "ರೆಬಲ್ ಸಾಬ್.." ಅನ್ನೋ ಹಾಡೊಂದನ್ನು ರಿಲೀಸ್ ಮಾಡಿದೆ. ಈಗಾಗಲೇ ಈ ಸಾಂಗ್ ಕೂಡ ಟ್ರೆಂಡಿಂಗ್‌ನಲ್ಲಿದೆ. ಹಾಗಿದ್ದರೆ, ಈ ಹಾಡಿನ ವಿಶೇಷತೆ ಏನು? ಹಾಡಿರೋದು ಯಾರು? ತಿಳಿಯುವುದಕ್ಕೆ ಮುಂದೆ ಓದಿ.
ಟಾಲಿವುಡ್ ವರದಿ ಪ್ರಕಾರ, 'ದಿ ರಾಜಾಸಾಬ್' ಸಿನಿಮಾ ತೆಲುಗು ಅಷ್ಟೇ ಅಲ್ಲ. ಹಿಂದಿ ಬೆಲ್ಟ್‌ನಲ್ಲಿಯೂ ದೊಡ್ಡ ಮಟ್ಟದಲ್ಲಿ ಡಿಮ್ಯಾಂಡ್ ಸೃಷ್ಟಿಯಾಗಿದೆ ಎನ್ನಲಾಗಿದೆ. ಇದೇ ಸಮಯದಲ್ಲಿ ರಿಲೀಸ್ ಆಗಿರುವ ಹಾಡು ಪ್ರಭಾಸ್ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ. ಯಾಕಂದ್ರೆ, ಈ ಹಾಡಿನಲ್ಲಿ ಪ್ರಭಾಸ್ ಯಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 10 ವರ್ಷಗಳ ಹಿಂದಿನ ಪ್ರಭಾಸ್ ನೋಡುವುದಕ್ಕೆ ಸಿಗುತ್ತಿದ್ದಾರೆ.
"ರೆಬಲ್ ಸಾಬ್.." ಅನ್ನೋ ಹಾಡನ್ನು ಕನ್ನಡದ ಸೆನ್ಸೆಷನಲ್ ಸಿಂಗರ್ ಸಂಜಿತ್ ಹೆಗ್ಡೆ ಹಾಡಿದ್ದರೆ, ಥಮನ್ ಎಸ್. ಟ್ಯೂನ್ ಹಾಕಿದ್ದಾರೆ. ಪಕ್ಕಾ ಟಪ್ಪಾಂಗುಚ್ಚಿ ಶೈಲಿಯಲ್ಲಿರುವ "ರೆಬಲ್ ಸಾಬ್.." ಹಾಡಿನಲ್ಲಿ ಪ್ರಭಾಸ್ ಸ್ಟೈಲ್ ಬದಲಾಗಿದೆ. ರಂಗು ರಂಗಿನ ಶರ್ಟ್ ಧರಿಸಿ, ಈ ಹಾಡಿಗೆ ಮಸ್ತ್ ಆಗಿ ಡಾನ್ಸ್ ಮಾಡಿದ್ದಾರೆ. ಈ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದ್ದು, ಡಾರ್ಲಿಂಗ್ ಫ್ಯಾನ್ಸ್ ಸಂಭ್ರಮ ಪಟ್ಟಿದ್ದಾರೆ.

ಇಲ್ಲಿವರೆಗೂ ಸಿನಿಮಾ ತಂಡ ಒಂದೇ ಒಂದು ಹಾಡನ್ನು ರಿಲೀಸ್ ಮಾಡಿರಲಿಲ್ಲ. ಈಗ ಮೊದಲ ಲಿರಿಕಲ್ ಸಾಂಗ್ ಜೊತೆ ಪ್ರಭಾಸ್ ಹೆಜ್ಜೆ ಹಾಕಿರೋ ಸಖತ್ ಸ್ಟೆಪ್ಸ್ ಅನ್ನು ರಿವೀಲ್ ಮಾಡಿದ್ದಾರೆ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ರಿಲೀಸ್ ಆಗಿರುವುದರಿಂದ "ರೆಬೆಲ್ ಸಾಬ್.." ಅನ್ನೋ ಸಾಂಗ್ ಕನ್ನಡದಲ್ಲಿಯೂ ರಿಲೀಸ್ ಆಗಿದೆ. ಆ ಹಾಡನ್ನೂ ಸಂಜಿತ್ ಹೆಗ್ಡೆಯೇ ಹಾಡಿರೋದು ವಿಶೇಷ.
ಇನ್ನು ಪ್ರಭಾಸ್ ಜೊತೆ ಪ್ರಮುಖ ಪಾತ್ರಗಳಲ್ಲಿ ಬಾಲಿವುಡ್ ನಟ ಸಂಜತ್ ದತ್ ಖಳನಾಯಕನಾಗಿ ಕಾಣಿಸಿಕೊಂಡರೆ, ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್, ರಿದ್ಧಿ ಕುಮಾರ್ ಮತ್ತು ಝರೀನಾ ವಹಾಬ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾರುತಿ ಕಥೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಕಾರ್ತಿಕ್ ಪಳನಿ ಛಾಯಾಗ್ರಹಣ, ಕೊಟಗಿರಿ ವೆಂಕಟೇಶ್ವರ್ ರಾವ್ ಎಡಿಟಿಂಗ್ ಚಿತ್ರಕ್ಕಿದೆ.
'ದಿ ರಾಜಾಸಾಬ್' ಸಿನಿಮಾ ಭಾರತದ ಬಿಗ್ ಬಜೆಟ್ ಹಾರರ್ ಫ್ಯಾಂಟಸಿ ಎಂದು ಹೇಳಾಗುತ್ತಿದೆ. ಸಿನಿಮಾ ಮೇಕಿಂಗ್ ಜೊತೆಗೆ ದೊಡ್ಡ ಮಟ್ಟದ ಸ್ಟಾರ್‌ಕಾಸ್ಟ್ ಮೂಲಕ ಚಿತ್ರರಂಗವನ್ನು ಬೆರಗಾಗಿಸಿದೆ. ಈ ಸಿನಿಮಾದಲ್ಲಿ ಭಾರತದಲ್ಲಿ ಇದೂವರೆಗೂ ಕಾಣದ ಅತಿದೊಡ್ಡ ಹಾರರ್ ಸೆಟ್ ಹಾಕಲಾಗಿದೆಯಂತೆ. 'ಕಲ್ಕಿ 2898 ಎಡಿ' ನಂತರ ಪ್ರಭಾಸ್ ಸಿನಿಮಾ ರಿಲೀಸ್ ಆಗುತ್ತಿದ್ದು, ಮೈನವಿರೇಳಿಸುವ ಆಕ್ಷನ್ ಮಿಶ್ರಣ, ಕಾಮಿಡಿಯನ್ನು ನಿರೀಕ್ಷೆ ಮಾಡಬಹುದು. ಈ ಸಿನಿಮಾ 2026ರ ಜನವರಿ 9ರಂದು ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಲಿದ್ದು, ತೆಲುಗು ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಲಿದೆ.


Click it and Unblock the Notifications











