ಮೆಗಾ ಹೀರೊ ಸಿನಿಮಾದಲ್ಲಿ ಬಳ್ಳಾರಿ ಗಣಿಧಣಿ? ನೆನಪಿದೆಯೇ ಜನಾರ್ಧನ್ ರೆಡ್ಡಿ-ಸುಗ್ಗಳಮ್ಮ ದೇವಿಯ ಕಥೆ?
ಮೆಗಾ ಕುಟುಂಬದ ಹೀರೊ ವೈಷ್ಣವ್ ತೇಜ್ ಮೊದಲ ಸಿನಿಮಾದಲ್ಲೇ ಸೆಂಚುರಿ ಬಾರಿಸಿದ್ದರು. 'ಉಪ್ಪೆನಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಲೂಟಿ ಮಾಡಿತ್ತು. ಇದೇ ಹೀರೊ ನಟಿಸಿದ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದುವೇ 'ಆದಿಕೇಶವ'.
ಇತ್ತೀಚೆಗೆ 'ಆದಿಕೇಶವ' ಸಿನಿಮಾದ ತುಣುಕುಗಳನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಗ್ಲಿಂಪ್ಸ್‌ಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಇದೇ ವೇಳೆ ತುಣುಕು ದೊಡ್ಡ ಮಟ್ಟಕ್ಕೆ ಚರ್ಚೆಯನ್ನು ಹುಟ್ಟು ಹಾಕಿದೆ.

'ಆದಿಕೇಶವ' ಸಿನಿಮಾದ ಗ್ಲಿಂಪ್ಸ್‌ನಲ್ಲಿರೋ ಡೈಲಾಗ್‌ಗಳು ಚರ್ಚೆಗೆ ಎಡೆಮಾಡಿಕೊಟ್ಟಿವೆ. ಇದರಲ್ಲಿ ಬರೋ ಕೆಲವು ಡೈಲಾಗ್‌ಗಳು ಗಾಲಿ ಜನಾರ್ಧನ ರೆಡ್ಡಿ ಹಾಗೂ ಸುಗ್ಗಳಮ್ಮ ದೇವಿಯನ್ನು ಕಥೆಯನ್ನು ನೆನಪಿಸುತ್ತಿವೆ. ಅಸಲಿಗೆ 'ಆದಿಕೇಶವ' ಸಿನಿಮಾದ ಆ ಡೈಲಾಗ್ ಏನು? ಅಂತಹದ್ದೇನಿದೆ? ಗಾಲಿ ಜನಾರ್ಧನ ರೆಡ್ಡಿ ಹೆಸರು ಯಾಕೆ ಕೇಳಿ ಬರುತ್ತಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಆದಿಕೇಶವ' ಸಿನಿಮಾ ಡೈಲಾಗ್ ಏನು?
"ನೀನು ಈಗಾಗಲೇ ತುಂಬಾನೇ ಅಗೆದು ಬಿಟ್ಟಿದ್ದೀಯಾ?.. ನಮ್ಮ ದೇವಸ್ಥಾನವನ್ನು ಮುಟ್ಟಬೇಡ.. ಶಿವನಿಗೆ ಕೋಪ ಬಂದರೆ, ಇಡೀ ಊರೇ ನಾಶವಾಗಿಬಿಡುತ್ತೆ." ಇದು 'ಆದಿಕೇಶವ' ಸಿನಿಮಾದಲ್ಲಿ ಬರುವ ಆರಂಭದ ಡೈಲಾಗ್. ಇದೇ ಡೈಲಾಗ್ ಈಗ ಗಾಲಿ ಜನಾರ್ಧನ ರೆಡ್ಡಿ ಗಣಿಗಾರಿಕೆಯ ವೈಭವದ ದಿನಗಳನ್ನು ನೆನಪಿಸುತ್ತಿದೆ.

'ಆದಿಕೇಶವ' ಸಿನಿಮಾ ಗ್ಲಿಂಪ್ಸ್ ನೋಡಿದರೆ, ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದೆನಿಸುತ್ತಿದೆ. ಆದರೆ, ಚಿತ್ರತಂಡ ಈ ಬಗ್ಗೆ ಇದೀವರೆಗೂ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಟಾಲಿವುಡ್‌ನಲ್ಲಿ ಮಾತ್ರ ಇದು ಗಾಲಿ ಜನಾರ್ಧನಾ ರೆಡ್ಡಿಯ ಸುತ್ತಮುತ್ತ ಸಾಗುವ ಕಥೆ ಎಂದು ಹೇಳುತ್ತಿದೆ.
ಮೆಗಾ ಹೀರೊ ದೇವಸ್ಥಾನದ ರಕ್ಷಕ
ಮೆಗಾ ಕುಟುಂಬದ ಯಂಗ್ ಹೀರೊ ಪಂಜ ವೈಷ್ಣವ್ ತೇಜ್ 'ಆದಿಕೇಶವ' ಸಿನಿಮಾದ ಹೀರೊ. ಈ ಸಿನಿಮಾದಲ್ಲಿ ವೈಷ್ಣವ್ ಹೆಸರು ರುದ್ರ ಕಾಳೇಶ್ವರ ರೆಡ್ಡಿ. ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಲ್ಲಿರುವ ದೇವಸ್ಥಾನದ ರಕ್ಷಕನಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
'ಆದಿಕೇಶವ' ಗ್ಲಿಂಪ್ಸ್ ಏನು ಹೇಳುತ್ತಿದೆ ಅಂದರೆ, ಊರಲ್ಲೊಂದು ದೇವಸ್ಥಾನ. ಆ ದೇವಸ್ಥಾನದ ಸುತ್ತಮುತ್ತ ಗಣಿಗಾರಿಕೆ ನಡೆದಿರೋ ದೃಶ್ಯವನ್ನು ತೋರಿಸಲಾಗಿದೆ. ಈಗ ಕೆಲವರು ಆ ದೇವಸ್ಥಾನವನ್ನೂ ಕೆಡವಲು ಬಂದಿದ್ದಾರೆ. ಅದನ್ನು ರಕ್ಷಿಸಲು ಹೀರೊ ನಿಂತಿದ್ದಾನೆ. ಇದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ, ಈ ಕಥೆಯ ಹಿಂದೆ ಗಾಲಿ ಜನಾರ್ದನ ರೆಡ್ಡಿ ಹಾಗೂ ಸುಗ್ಗಳಮ್ಮ ದೇವಸ್ಥಾನದ ಘಟನೆಗಳಿವೆ ಎನ್ನಲಾಗುತ್ತಿದೆ.
ಏನದು ಜನಾರ್ಧನ್ ರೆಡ್ಡಿ-ಸುಗ್ಗಳಮ್ಮ ದೇವಿಯ ಕಥೆ?
'ಆದಿಕೇಶವ' ಗ್ಲಿಂಪ್ಸ್ ರಿಲೀಸ್ ಆಗುತ್ತಿದ್ದಂತೆ ಮತ್ತೆ ಗಾಲಿ ಜನಾರ್ಧನ ರೆಡ್ಡಿ ಹೆಸರು ಹೇಳಿ ಬರುತ್ತಿದೆ. ಒಂದು ಕಾಲದಲ್ಲಿ ಜನಾರ್ಧನ ರೆಡ್ಡಿಯವರನ್ನು ಮೈನಿಂಗ್ ಕಿಂಗ್ ಎಂದೇ ಕರೆಯುತ್ತಿದ್ದರು. ಇಷ್ಟೇ ಅಲ್ಲ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜಕೀಯದ ಕೇಂದ್ರ ಬಿಂದುವಾಗಿದ್ದರು. ಈ ವೇಳೆ ಆಂಧ್ರ-ಕರ್ನಾಟಕ ಗಡಿ ಭಾಗದಲ್ಲಿರುವ ಸುಗ್ಗಳಮ್ಮ ದೇವಸ್ಥಾನವನ್ನು ಕೆಡವುತ್ತಾರೆ. ಇಲ್ಲಿಂದಲೇ ಜನಾರ್ಧನ ರೆಡ್ಡಿಯ ಅವನತಿ ಶುರುವಾಯಿತು ಎಂದು ಅಲ್ಲಿನ ಜನರು ಇಂದಿಗೂ ಹೇಳುವುದು ಉಂಟು.
ಸೆಪ್ಟೆಂಬರ್ 3, 2006ರಂದು ಈ ದೇವಸ್ಥಾನವನ್ನು ಕೆಡವಲಾಗಿತ್ತು. ಆದರೆ, ಕೆಡವುದಕ್ಕೂ ಮುನ್ನ 18 ಸನ್ಯಾಸಿಗಳು ಹಾಗೂ ಮಾಂತ್ರಿಕರನ್ನು ಕೇರಳ ಹಾಗೂ ತಮಿಳುನಾಡಿನಿಂದ ಕರೆಸಿ, ಪೂಜೆ ಮಾಡಿ, ದೇವಿಯನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಯ್ತು ಎಂದು ಡಿಎನ್‌ಎ ವರದಿ ಮಾಡಿತ್ತು. ಇದು ಜನಾರ್ಧನ ರೆಡ್ಡಿಯನ್ನು ಸಂಕಷ್ಟಕ್ಕೂ ಸಿಲುಕಿತ್ತು. ಈಗ 'ಆದಿಕೇಶವ' ಇದರ ಆಧಾರದ ಮೇಲೆ ನಿರ್ಮಾಣ ಮಾಡಲಾಗಿದೆ ಎನ್ನಲಾಗುತ್ತಿದೆ.


Click it and Unblock the Notifications











