OG Critic Review: 40 ನಿಮಿಷ ಕ್ಲೈಮ್ಯಾಕ್ಸ್, ಪವನ್ ಕಮ್‌ಬ್ಯಾಕ್, ಇಮ್ರಾನ್ ಹಶ್ಮಿ ಚಿಂದಿ; ವಿವಾದಾತ್ಮಕ ವಿಮರ್ಶಕ ಹೇಳಿದ್ದೇನು?
RRR ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಡಿವಿವಿ ದಾನಯ್ಯ 'ಓಜಿ' (OG)ಗೆ ಕೈ ಹಾಕಿದ್ದರು. ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಇದೇ ಮೊದಲ ಬಾರಿಗೆ ಬಾಲಿವುಡ್‌ನ ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿ ತೆಲುಗು ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾವೀಗ ರಿಲೀಸ್‌ಗೆ ರೆಡಿಯಾಗಿದೆ. ಟಾಲಿವುಡ್‌ನಲ್ಲಿ ಈ ಸಿನಿಮಾ ನೋಡುವುದಕ್ಕೆ ಕ್ರೇಜ್ ದುಪ್ಪಟ್ಟಾಗಿದೆ.
'ಓಜಿ' (OG) ಸಿನಿಮಾ ಬಿಡುಗಡೆಗೂ ಮುನ್ನವೇ ತೆಲುಗು ರಾಜ್ಯಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆಕ್ಷನ್ ಕಮ್ ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯ ಈ ಸಿನಿಮಾ ಈಗಾಗಲೇ ಸೌಂಡು ಮಾಡುತ್ತಿದೆ. ಕೇವಲ ತೆಲುಗು ರಾಜ್ಯಗಳಲ್ಲಿ ಅಷ್ಟೇ ಅಲ್ಲ, ಕರ್ನಾಟಕದಲ್ಲಿಯೂ ಈ ಸಿನಿಮಾ ನೋಡುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಇದೇ ಸೆಪ್ಟೆಂಬರ್ 25 ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

ವಿದೇಶದಲ್ಲಿಯೂ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಅಲ್ಲಿಯೂ ಸಿನಿಮಾಗೆ ಸೆನ್ಸಾರ್ ಮಾಡಿಸಬೇಕು. ಇತ್ತೀಚೆಗೆ ದುಬೈನಲ್ಲಿ ಸಿನಿಮಾದ ಸೆನ್ಸಾರ್ ಆಗಿದೆ ಎನ್ನಲಾಗಿದೆ. ಭಾರತದ ಸಿನಿಮಾಗಳನ್ನು ವಿಮರ್ಶೆ ಮಾಡುವ ವಿವಾದಾತ್ಮಕ ವಿಮರ್ಶಕ 'ಓಜಿ' (OG) ಸಿನಿಮಾವನ್ನು ಸೆನ್ಸಾರ್ ಮಾಡುವ ವೇಳೆ ವೀಕ್ಷಿಸಿದ್ದಾಗಿ ಹೇಳಿಕೊಂಡಿದ್ದು, ಸಿನಿಮಾದ ಚುಟುಕು ವಿಮರ್ಶೆಯನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ಸೆಲೆಬ್ರೆಟಿಗಳನ್ನು ಕಾಡುವ ವಿವಾದಾತ್ಮಕ ವಿಮರ್ಶಕ ಉಮೈರ್ ಸಂಧು ಆಗಾಗ ಬಿಗ್ ಬಜೆಟ್ ಸಿನಿಮಾಗಳನ್ನು ವಿಮರ್ಶೆ ಮಾಡುತ್ತಾರೆ. ಸಿನಿಮಾ ಬಿಡುಗಡೆಗೆ ನಾಲ್ಕೈದು ದಿನ ಮುಂಚೆ ಸಿನಿಮಾ ಬಗ್ಗೆ ನಾಲ್ಕೈದು ಸಾಲುಗಳಲ್ಲಿ ಬರೆದು ಪೋಸ್ಟ್ ಮಾಡುತ್ತಾರೆ. ಇದು ಕೆಲವೊಮ್ಮೆ ವಿವಾದಕ್ಕೆ ತಿರುಗಿದ್ದರೆ, ಇನ್ನು ಕಲೆವೊಮ್ಮೆ ಸಿನಿಮಾ ಪಾಸಿಟಿವ್ ಆಗಿದೆ. ಕೆಲವೊಮ್ಮೆ ಉಮೈರ್ ಸಂಧು ಹೇಳಿದ್ದು ನಿಜವಾಗಿರುವ ಪ್ರಕರಣಗಳು ಕೂಡ ಇವೆ. 'ಓಜಿ' (OG) ಬಗ್ಗೆ ಏನು ಹೇಳಿದ್ದಾರೆ ಅಂತ ನೋಡುವುದಾದರೇ,
ಉಮೈರ್ ಸಂಧು ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ 'ಓಜಿ' (OG) ಚುಟಕು ವಿಮರ್ಶೆ ಮಾಡಿದ್ದಾರೆ. "ಓಜಿ ಸಿನಿಮಾ ಪವನ್ ಕಲ್ಯಾಣ್ ಅವರ ಬಿಗ್ ಕಮ್‌ಬ್ಯಾಕ್ ಸಿನಿಮಾ ಆಗಲಿದೆ. ಈ ಸಿನಿಮಾದ 20 ನಿಮಿಷಗಳ ಕ್ಲೈಮ್ಯಾಕ್ಸ್ ಚಿಂದಿಯಾಗಿದೆ. ಕ್ಲೈಮ್ಯಾಕ್ಸ್ ದೃಶ್ಯಗಳೇ ಈ ಸಿನಿಮಾದ ಜೀವಾಳ. ಈ ಸಿನಿಮಾ ನನಗೆ ತುಂಬಾನೆ ಖುಷಿ ಕೊಟ್ಟಿದೆ" ಎಂದು ಉಮೈರ್ ಸಂಧು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

'OG' ಸಿನಿಮಾ ಮೂಲಕ ಇಮ್ರಾನ್ ಹಶ್ಮಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು, ಇವರ ನಟನೆ ಕೂಡ ಅದ್ಬುತ ಎಂದಿದ್ದಾರೆ. "ಇಮ್ರಾನ್ ಹಶ್ಮಿ ಪಾತ್ರ ಖಡಕ್ ಆಗಿದೆ. ಅವರ ಸಂಭಾಷಣೆ ಕೂಡ ಅದ್ಭುತವಾಗಿವೆ. ಈ ಸಿನಿಮಾದ ಸ್ಕ್ರೀನ್‌ಪ್ಲೇ ಕೂಡ ಚೆನ್ನಾಗಿದ್ದು, ಇದೊಂದು ಪೈಸಾ ವಸೂಲ್ ಸಿನಿಮಾ." ಎಂದು ಹೇಳಿದ್ದು, ಐದು ಅಂಕಗಳಿಗೆ 3.5 ರೇಟಿಂಗ್ ಅನ್ನು ಉಮೈರ್ ಸಂಧು ನೀಡಿದ್ದಾರೆ.
ಅಂದ್ಹಾಗೆ ಓಜಿ ಸಿನಿಮಾವನ್ನು ₹250 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪವನ್ ಕಲ್ಯಾಣ್, ಇಮ್ರಾನ್ ಹಶ್ಮಿ ಜೊತೆಗೆ ಪ್ರಿಯಾಂಕಾ ಅರುಳ್ ಮೋಹನ್, ಮಲಯಾಳಂ ನಟ ಅರ್ಜುನ್ ದಾಸ್, ಹಿರಿಯ ನಟರಾದ ಪ್ರಕಾಶ್ ರಾಜ್, ಶುಭಲೇಖ ಸುಧಾಕರ್, ಶ್ರೀಯಾ ರೆಡ್ಡಿ, ಹರೀಶ್ ಉತ್ತಮ್, ಅಭಿಮನ್ಯು ಸಿಂಗ್, ಅಜಯ್ ಘೋಷ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮನ್ ಮ್ಯೂಸಿಕ್ ಈ ಸಿನಿಮಾದ ಮತ್ತೊಂದು ಹೈಲೈಟ್. ಇನ್ನೇನು ನಾಲ್ಕು ದಿನಗಳಲ್ಲಿ 'ಓಜಿ' ಅಸಲಿ ವಿಮರ್ಶೆ ಹೊರಬರಲಿದೆ.


Click it and Unblock the Notifications











