ಜಗನ್‌ಗೆ ಟಾಂಗ್ ಕೊಡಲು ಹಳೆ ವೈರಿಯನ್ನು ಹೊಗಳಿದ ಪವನ್ ಕಲ್ಯಾಣ್!
ರಾಜಕಾರಣಿ, ನಟ ಪವನ್ ಕಲ್ಯಾಣ್ ಹಾಗೂ ಆಂಧ್ರ ಸಿಎಂ ಜಗನ್ ನಡುವಿನ ರಾಜಕೀಯ ವೈರತ್ವ ದಿನೇ ದಿನೇ ಹೆಚ್ಚಾಗುತ್ತಲೇ ಸಾಗುತ್ತಿದೆ.
ಕಳೆದ ವರ್ಷ ಪವನ್ ಕಲ್ಯಾಣ್‌ರ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆದಾಗ ಜಗನ್ ನೇತೃತ್ವದ ಆಂಧ್ರ ಸರ್ಕಾರವು ಫ್ಯಾನ್ಸ್ ಶೋ, ಬೆನಿಫಿಟ್ ಶೋಗಳನ್ನು ರದ್ದು ಮಾಡಿತು. ಬಳಿಕ ಚಿತ್ರಮಂದಿರಗಳ ಮೇಲೆ ಹಲವು ನಿಯಮಗಳನ್ನು ಹೇರಿ ಸಿನಿಮಾಕ್ಕೆ ಅಡ್ಡಗಾಲು ಹಾಕಿತು.
ಜಗನ್ ಸರ್ಕಾರವು ಚಿತ್ರಮಂದಿರಗಳ ಮೇಲೆ ಹೇರಿದ ನಿರ್ಣಯವನ್ನು ಕಟುವಾಗಿ ಟೀಕಿಸಿದ್ದ ಪವನ್ ಕಲ್ಯಾಣ್, ಜಗನ್ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಏಕವಚನದಲ್ಲಿ ಮಾತನಾಡಿದ್ದು ಜಗನ್ ಬೆಂಬಲಿಗರನ್ನು ಕೆರಳಿಸಿತ್ತು. ಆಗಿನಿಂದಲೂ ಜಗನ್ ಹಾಗೂ ಪವನ್ ನಡುವಿನ ಪರಸ್ಪರ ಮುನಿಸು ಸಾಗುತ್ತಲೇ ಇದೆ.
'ಭೀಮ್ಲಾ ನಾಯಕ್' ಟ್ರೇಲರ್ ನೋಡಿ ಸುದೀಪ್ ಅಭಿಮಾನಿಗಳು ಖುಷಿ: ಕಾರಣ?
ಇದೀಗ ಪವನ್ ಕಲ್ಯಾಣ್‌ರ 'ಭೀಮ್ಲಾ ನಾಯಕ್' ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪವನ್ ಕಲ್ಯಾಣ್ ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ಹೊಗಳಿದರು. ಆದರೆ ತಮ್ಮ ಭಾಷಣದಲ್ಲಿ ಎಲ್ಲೂ ಜಗನ್ ಕುರಿತು ಪ್ರಸ್ತಾಪ ಮಾಡಲಿಲ್ಲ. ಆ ಮೂಲಕ ಪರೋಕ್ಷವಾಗಿ ಸಿನಿಮಾರಂಗದ ಪ್ರಗತಿಗೆ ಸಿಎಂ ಕೆಸಿಆರ್ ಮಾತ್ರವೇ ಸಹಾಯ ಮಾಡುತ್ತಿದ್ದಾರೆ ಎಂದರು.

ತೆಲಂಗಾಣ ಸಿಎಂ ಕೆಸಿಆರ್ ಅನ್ನು ಟೀಕಿಸಿದ್ದ ಪವನ್
ಆದರೆ ಕೆಸಿಆರ್ ವಿರುದ್ಧ ಹಿಂದೊಮ್ಮೆ ಪವನ್ ಕಲ್ಯಾಣ್ ನಾಲಗೆ ಹರಿಬಿಟ್ಟಿದ್ದರು ಅದಕ್ಕೆ ಪ್ರತಿಯಾಗಿ ಕೆಸಿಆರ್ ಸಹ ಪವನ್ ಕಲ್ಯಾಣ್ ಅನ್ನು ಏಕವಚನದಲ್ಲಿ ಬೈದಿದ್ದರು. 2014ರಲ್ಲಿ ವಾರಂಗಲ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪವನ್ ಕಲ್ಯಾಣ್, ನನ್ನನ್ನು ಬೈಯ್ದರೆ ಪರವಾಗಿಲ್ಲ ಆದರೆ ದೇಶದ ಪ್ರಧಾನ ಮಂತ್ರಿ ಆಗುತ್ತಿರುವವನ್ನು ಬೈದರೆ ನಿನ್ನ ಹೊಡೆಯುತ್ತೇನೆ (ತಾಟ ತೀಸ್ತ) ಎಂದಿದ್ದರು.

ಚಿಟಿಕೆ ಹೊಡೆದರೆ ನೂರು ಹೋಳಾಗುತ್ತಾನೆ ಎಂದಿದ್ದ ಕೆಸಿಆರ್
ಪವನ್ ಕಲ್ಯಣ್‌ರ ಬಹಿರಂಗ ಬೆದರಿಕೆಗೆ ಪ್ರತಿಯಾಗಿ ಮಾತನಾಡಿದ್ದ ಕೆಸಿಆರ್, ''ಅವನು ಸಿನಿಮಾ ನಟನಾ, ನನಗಂತೂ ಗೊತ್ತಿಲ್ಲ. ತೆಲಂಗಾಣದಲ್ಲಿ ನಿಂತುಕೊಂಡು ನನಗೇ ಹೊಡೆಯುತ್ತೀನಿ ಅನ್ನುತ್ತಾನಲ್ಲ. ಒಂದು ಚಿಟಕೆ ಹೊಡೆದರೆ ನೂರು ಪೀಸ್ ಆಗಿಬಿಡುತ್ತಾನೆ, ಬಚ್ಚಾ ನನ್ನ ಮಗ ಎಂದಿದ್ದರು ಕೆಸಿಆರ್. ಮುಂದುವರೆದು, ಇಂಥಹಾ ಹತ್ತು ನಾಯಿಗಳು ಪ್ರತಿದಿನ ನನ್ನನ್ನು ಬೈದುಕೊಳ್ಳುತ್ತವೆ ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ'' ಎಂದಿದ್ದರು.

ಕೆಸಿಆರ್ ಅನ್ನು ಹೊಗಳಿದ ಪವನ್ ಕಲ್ಯಾಣ್
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ವರಸೆ ಬದಲಾಯಿಸಿಕೊಂಡ ಪವನ್ ಕಲ್ಯಾಣ್, ''ಚೆನ್ನೈನಲ್ಲಿ ಸ್ಥಿತವಾಗಿದ್ದ ತೆಲುಗು ಚಿತ್ರರಂಗವನ್ನು ಅವಿಭಜಿತ ಆಂಧ್ರದ ರಾಜಧಾನಿಯಾದ ಹೈದರಾಬಾದ್‌ಗೆ ತರುವ ಕಾರ್ಯವನ್ನು ಕೀರ್ತಿಶೇಷ ಚೆನ್ನಾರೆಡ್ಡಿ ಅಂಥಹಾ ಮಹನೀಯರು ಮಾಡಿದರು. ಇಂದಿನ ದಿನ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಸಿನಿಮಾ ರಂಗವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿದ್ದಾರೆ. ಚಿತ್ರರಂಗದೊಂದಿಗೆ ಸಹಯೋಗ ಸಾಧಿಸಿ ಚಿತ್ರರಂಗಕ್ಕೆ ಬೆಂಬಲವಾಗಿ ನಿಂತು ಅದಕ್ಕೆ ಹೆಗಲಿಗೆ ಹೆಗಲು ಕೊಡುವ ಕಾರ್ಯವನ್ನು ಅವರು ಮಾಡಿದ್ದಾರೆ. ಅದಕ್ಕೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ'' ಎಂದರು.

ತೆಲಂಗಾಣ ಸರ್ಕಾರದ ಸಚಿವರನ್ನು ಹೊಗಳಿದ ಪವನ್ ಕಲ್ಯಾಣ್
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣ ಸರ್ಕಾರದ ಸಿನಿಮಾಟೊಗ್ರಫಿ ಸಚಿವ ತಲಸಾನಿ ಶ್ರೀನಿವಾಸ ಯಾದವ್ ಅವರು ಭಾಗವಹಿಸಿದ್ದರು. ಅವರನ್ನೂ ಸಹ ಹೊಗಳಿದ ಪವನ್ ಕಲ್ಯಾಣ್, ''ಚಿತ್ರರಂಗದ ಯಾರೇ ಅವರನ್ನು ಸಂಪರ್ಕಿಸಿದರೂ ಶೀಘ್ರವಾಗಿ ಸಹಾಯವನ್ನು ಅವರು ಮಾಡುತ್ತಿದ್ದಾರೆ ಅವರಿಗೂ ಧನ್ಯವಾದ ಹೇಳುತ್ತೇನೆ. ಸಿನಿಮಾ ರಂಗದಲ್ಲಿ ಲಾಭ ನಷ್ಟಗಳು, ಕಷ್ಟ ಸುಖಗಳು ಇರುತ್ತಾವೆ ಅವುಗಳನ್ನೆಲ್ಲ ಗಣನೆಗೆ ತೆಗೆದುಕೊಂಡು ಸಹಕಾರ ನೀಡುತ್ತಿರುವುದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ'' ಎಂದರು.


Click it and Unblock the Notifications











