Kantara Chapter 1: ರಿಷಬ್ ಶೆಟ್ಟಿ 'ಕಾಂತಾರ'ಗೆ ಲೈನ್ ಕ್ಲಿಯರ್ ಮಾಡಿದ ಪವನ್ ಕಲ್ಯಾಣ್!
ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ಪರಭಾಷೆಯ ಸಿನಿಮಾಗಳ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಿದೆ. ಅದರಲ್ಲೂ ಇತ್ತೀಚೆಗೆ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ನಟಿಸಿರುವ 'ಓಜಿ' ಸಿನಿಮಾ ವೇಳೆ ತೆಲುಗು ಪ್ರೇಕ್ಷಕರು ಹಾಗೂ ಕನ್ನಡ ಪರ ಸಂಘಟನೆಗಳ ಮಧ್ಯೆ ಕಿತ್ತಾಟ ನಡೆದಿತ್ತು. ಬೆಂಗಳೂರಿನ ಸಂಧ್ಯಾ ಚಿತ್ರಮಂದಿರಲ್ಲಿ ತೆಲುಗು ಪ್ರೇಕ್ಷಕರು ನಕಲಿ ತಲವಾರ್ ಹಿಡಿದು ಬಂದು ಸಂಭ್ರಮಿಸಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದರು.
ಈ ಸಂಬಂಧ ಕನ್ನಡಪರ ಸಂಘಟನೆಗಳು 'ಓಜಿ' ಸಿನಿಮಾ ನೋಡಲು ಬಂದ ತೆಲುಗು ಪ್ರೇಕ್ಷಕರ ವಿರುದ್ಧ ತಿರುಗಿಬಿದ್ದಿದ್ದರು. ಈ ಹಿಂದೆ ಕೂಡ ತೆಲುಗು ಸಿನಿಮಾಗಳು ತೆರೆಕಂಡಾಗ ತೆಲುಗು ಭಾಷೆಯಲ್ಲಿ ಬ್ಯಾನರ್, ಪೋಸ್ಟರ್‌ಗಳನ್ನು ಹಾಕಿ ಥಿಯೇಟರ್ ಮುಂದೆ ಸಂಭ್ರಮಿಸಿದ್ದರು. ಇದು ಕನ್ನಡ ಪರ ಸಂಘಟನೆಗಳನ್ನು ಕೆರಳಿಸಿತ್ತು. ಹೀಗಾಗಿ ತೆಲುಗು ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಕಿತ್ತಾಕಿಸಿ ಕನ್ನಡದ ಬ್ಯಾನರ್ ಹಾಕಿಸಿದ್ದರು.

ಈ ಎಲ್ಲಾ ಪ್ರಕರಣಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಾಂತಾರ ಚಾಪ್ಟರ್ 1' ಅನ್ನು ಆಂಧ್ರದಲ್ಲಿ ಬಾಯ್‌ಕಾಟ್ ಮಾಡುವಂತೆ ತೆಲುಗು ಮಂದಿ ಅಭಿಯಾನವನ್ನು ಆರಂಭಿಸಿದ್ದರು. ಇದೆಲ್ಲದಕ್ಕೂ ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ತೆಲುಗು ಮಂದಿಗೆ ಶಾಂತವಾಗಿರಬೇಕು ಎಂದು ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಮನವಿ ಮಾಡಿದ್ದಾರೆ. ಇದರೊಂದಿಗೆ 'ಕಾಂತಾರ' ಸಿನಿಮಾದ ರಿಲೀಸ್‌ಗೆ ಯಾವುದೇ ರೀತಿಯ ಅಡೆತಡೆಗಳನ್ನು ಮಾಡಬಾರದು ಎಂದು ಆಂಧ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ತೆಲುಗು ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡುವ ವಿಚಾರಕ್ಕೆ ಹಾಗೂ ಕನ್ನಡ ಸಿನಿಮಾ ಆಂಧ್ರದಲ್ಲಿ ಬಿಡುಗಡೆ ಮಾಡುವ ಬಗ್ಗೆ ಇರುವ ಭಿನ್ನಾಭಿಪ್ರಾಯವನ್ನು ನಿವಾರಿಸುವಂತೆ ಮನವಿ ಕೂಡ ಮಾಡಲಾಗಿತ್ತು.
ತೆಲುಗು ನಿರ್ಮಾಪಕರು ಕರ್ನಾಟಕದಲ್ಲಿ ತೆಲುಗು ಸಿನಿಮಾಗಳ ಟಿಕೆಟ್ ದರವನ್ನು ಹೆಚ್ಚಿಸುವುದಕ್ಕೆ ಅಲ್ಲಿನ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂಬ ಆರೋಪವೂ ಮಾಡಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲಿ ಸರ್ಕಾರ 200 ರೂ. ಸಿನಿಮಾ ಟಿಕೆಟ್ ನಿಗಧಿ ಮಾಡಿದ್ದು, ಅದನ್ನು ವಿರೋಧಿಸಿ ಮಲ್ಟಿಪ್ಲೆಕ್ಸ್ ಹಾಗೂ ನಿರ್ಮಾಣ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿದ್ದು ಗೊತ್ತಿರುವ ವಿಚಾರವೇ?
ಇನ್ನೊಂದು ಕಡೆ ಕರ್ನಾಟಕದಲ್ಲಿ ತೆಲುಗು ಸಿನಿಮಾಗಳ ಪೋಸ್ಟರ್ ಹಾಗೂ ಬ್ಯಾನರ್ ತೆಗದು ಹಾಕಲಾಗುತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತೆಲುಗು ನಿರ್ಮಾಪಕರು ಹಾಗೂ ವಿತರಕರು ಕನ್ನಡ ಸಿನಿಮಾಗಳ ಟಿಕೆಟ್ ದರ ಹೆಚ್ಚಳದ ಮನವಿಯನ್ನು ಮರುಪರಿಶೀಲಿಸುವಂತೆ ಆಂಧ್ರ ಸಿಎಂ ಮತ್ತು ಡಿಸಿಎಂ ಅವರ ಬಳಿ ಕೇಳಿಕೊಳ್ಳಲಾಗಿತ್ತು. ಇದಕ್ಕೆ ಆಂಧ್ರ ಸರ್ಕಾರ "ಕಲೆ ಎಂದರೆ ಮನಸ್ಸುಗಳನ್ನು ಬೆಸೆಯುವ ಸಾಧನವೇ ಹೊರತು, ಭಾಷೆ ಅಥವಾ ಪ್ರದೇಶದ ಹೆಸರಿನಲ್ಲಿ ಜನರನ್ನು ದೂರ ಮಾಡುವುದಲ್ಲ" ಎಂದು ಆಂಧ್ರಪ್ರದೇಶ ಸರ್ಕಾರ ಮನವರಿಕೆ ಮಾಡಿಕೊಟ್ಟಿದೆ.
'ಕಾಂತಾರ ಚಾಪ್ಟರ್ 1' ಇದು ಪರಭಾಷಾ ಸಿನಿಮಾವೆಂದು ಭಿನ್ನವಾಗಿ ನೋಡುವ ಅಗತ್ಯವಿಲ್ಲವೆಂದು ಆಂಧ್ರ ಸರ್ಕಾರ ಹೇಳಿದೆ. ನಟ ರಿಷಬ್ ಶೆಟ್ಟಿಯವರ ಈ ಸಿನಿಮಾಗೆ ಬೇರೆ ಸಿನಿಮಾಗಳಂತೆ ಟಿಕೆಟ್ ದರ ಹೆಚ್ಚಳಕ್ಕೆ ಆಂಧ್ರ ಸರ್ಕಾರ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದು, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ವರದಿಯಾಗಿದೆ. ಹಾಗೇ "ಕರ್ನಾಟಕದ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ತೊಂದರೆ ನೀಡುವುದು ಸರಿಯಲ್ಲ. ದೊಡ್ಡ ಮನಸ್ಸಿನಿಂದ ಮುಂದುವರಿಯಬೇಕು" ಎಂದು ಸಿನಿಮಾವನ್ನು ಬಹಿಷ್ಕರಿಸುವ ಬೇಡಿಕೆ ಮತ್ತು ವಿವಾದದ ಕುರಿತು ಡಿಸಿಎಂ ಪವನ್ ಕಲ್ಯಾಣ್ ಸಿನೆಮಾಟೋಗ್ರಫಿ ಸಚಿವ ಕಂದುಲಾ ದುರ್ಗೇಶ್ ಸೇರಿದಂತೆ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆಂದೂ ಹೇಳಲಾಗಿದೆ.
ಡಾ. ರಾಜ್‌ಕುಮಾರ್ ಕಾಲದಿಂದ ಇತ್ತೀಚೆಗಿನ ಕಿಚ್ಚ ಸುದೀಪ್, ಉಪೇಂದ್ರ, ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿಯವರೆಗೂ ಎಲ್ಲರನ್ನೂ ತೆಲುಗು ಪ್ರೇಕ್ಷಕರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಹೀಗಾಗಿ ಎರಡೂ ಭಾಷೆಯ ಫಿಲ್ಮ್ ಚೇಂಬರ್‌ಗಳು ಒಟ್ಟಾಗಿ ಸೇರಿ ಸಮಸ್ಯೆಗಳನ್ನು ಚರ್ಚಿಸಿ ನಿರ್ಧಾರಕೈಗೊಳ್ಳಬೇಕು.ಆ ನಂತರ ಸರ್ಕಾರವು ಈ ವಿಷಯದಲ್ಲಿ ಮಧ್ಯಪ್ರವೇಶಿಸುತ್ತದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.


Click it and Unblock the Notifications











