ಪವನ್ ಕಲ್ಯಾಣ್ 'ಭೀಮ್ಲಾ ನಾಯಕ್' ಚಿತ್ರಕ್ಕೆ 10 ಕೋಟಿ ನಷ್ಟ: ಜಗನ್ ಸರ್ಕಾರದ ಮೇಲೆ ಫ್ಯಾನ್ಸ್ ಸಿಟ್ಟು
ಪವರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ 'ಭೀಮ್ಲಾ ನಾಯಕ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರದ ಮೊದಲ ದಿನ ಗಳಿಕೆ ಚೆನ್ನಾಗಿದೆ. ಆದರೆ, ಈ ಗಳಿಕೆ ಬಗ್ಗೆ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಸಮಧಾನವಿಲ್ಲ. ಪವನ್ ಕಲ್ಯಾಣ್ ಅಭಿಮಾನಿಗಳು ಮೊದಲ ದಿನ 'ಭೀಮ್ಲಾ ನಾಯಕ್' ಗಳಿಸಿದ ಗಳಿಕೆ ಏನೂ ಅಲ್ಲ ಅಂತ ಕಿಡಿಕಾರುತ್ತಿದ್ದಾರೆ. ಇದಕ್ಕೆ ಆಂಧ್ರ ಪ್ರದೇಶದ ಜಗನ್ ಮೋಹನ್ ರೆಡ್ಡಿ ಸರ್ಕಾರವೇ ಕಾರಣ ಅಂತ ಆರೋಪ ಮಾಡುತ್ತಿದ್ದಾರೆ.
ಪವನ್ ಕಲ್ಯಾಣ್ 'ಭೀಮ್ಲಾ ನಾಯಕ್' ಥಿಯೇಟರ್‌ಗೆ ಲಗ್ಗೆ ಇಟ್ಟಲ್ಲಿಂದ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಗಿಟ್ಟಿಸಿಕೊಳ್ಳುತ್ತಿದೆ. ಇದು 2020ರಲ್ಲಿ ತೆರೆಕಂಡಿದ್ದ ಮಲಯಾಳಂ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರಿಮೇಕ್. ಆದರೂ, ಸಿನಿಮಾದಲ್ಲಿ ಪವನ್ ಕಲ್ಯಾಣ್ ಪ್ಲೇವರ್ ಅನ್ನು ಹೆಚ್ಚಾಗಿ ಬೆರೆಸಿ ಸಿನಿಮಾ ಮಾಡಲಾಗಿದೆ ಎನ್ನಲ್ಲಾಗಿತ್ತು. ಹೀಗಿದ್ದರೂ, ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಸಮಾಧಾನ ಆಗಿಲ್ಲ. ಮೊದಲ ದಿನ ಆದ ನಷ್ಟದ ಬಗ್ಗೆ ಆಂಧ್ರ ಸರ್ಕಾರದ ವಿರುದ್ಧ ಪವನ್ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ.

ಪವನ್ ಸಿನಿಮಾಗೆ 10 ಕೋಟಿ ನಷ್ಟ
ಪವನ್ ಕಲ್ಯಾಣ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತವೆ. ಇದುವರೆಗೆ ಬಿಡುಗಡೆಯಾದ ಒಂದೊಂದೂ ಸಿನಿಮಾನೂ ಬಾಕ್ಸಾಫೀಸ್ ರೆಕಾರ್ಡ್ ಮಾಡುತ್ತಲೇ ಇದೆ. ಆದರೆ, ಕಳೆದೆರಡು ಸಿನಿಮಾಗಳು ಮೊದಲ ದಿನದ ಕಲೆಕ್ಷನ್‌ನಲ್ಲಿ ಕೊಂಚ ಹಿನ್ನೆಡೆ ಅನುಭವಿಸಿವೆ. ಇದು ಪವರ್‌ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಕೆರಳಿಸಿದೆ. ಇದಕ್ಕೆ ಜಗನ್ ನೇತೃತ್ವದ ಆಂಧ್ರ ಸರ್ಕಾರ ತಂದಿರುವ ಹೊಸ ರೂಲ್ಸ್ ಕಾರಣವೆಂದು ಕಿಡಿಕಾರುತ್ತಿದ್ದಾರೆ. ಈ ನೀತಿಯಿಂದ 'ಭೀಮ್ಲಾ ನಾಯಕ್' ಸಿನಿಮಾಗೆ ಮೊದಲ ದಿನ ಕಮ್ಮಿ ಅಂದರೂ 10 ಕೋಟಿ ನಷ್ಟ ಆಗಿದೆ ಎನ್ನಲಾಗಿದೆ.

ಭೀಮ್ಲಾ ನಾಯಕ್ ನಷ್ಟಕ್ಕೆ ಕಾರಣವೇನು?
ಆಂಧ್ರ ಪ್ರದೇಶ ಸರ್ಕಾರ ಇತ್ತೀಚೆಗೆ ಹೊಸ ನಿಯಮವನ್ನು ಜಾರಿಗೆ ಗೊಳಿಸಿತ್ತು. ಬಿಗ್ ಬಜೆಟ್ ಸಿನಿಮಾಗಳು ಟಿಕೆಟ್ ದರವನ್ನು ಏರಿಕೆ ಮಾಡುವಂತಿಲ್ಲ. ಸರ್ಕಾರ ನಿಗದಿ ಪಡಿಸಿದ ದರದಲ್ಲೇ ಸಿನಿಮಾ ತೋರಿಸಬೇಕು. ಇದರೊಂದಿಗೆ ದಿನಕ್ಕೆ ನಾಲ್ಕು ಶೋಗಳನ್ನು ಮಾತ್ರ ಪ್ರದರ್ಶನ ಮಾಡಬೇಕು ಎಂದು ನಿಯಮ ವಿಧಿಸಿತ್ತು.ಇದರಿಂದ 'ಭೀಮ್ಲಾ ನಾಯಕ್' ಸಿನಿಮಾ ಮೊದಲ ದಿನ ಕೇವಲ ಶೇ. 80ರಷ್ಟು ಮಾತ್ರ ಗಳಿಕೆ ಕಂಡಿದೆ ಎನ್ನಲಾಗಿದೆ. ಹೀಗಾಗಿ ಮೊದಲ ದಿನವೇ 10 ಕೋಟಿ ಹೆಚ್ಚು ಗಳಿಕೆ ಕಾಣಬೇಕಿತ್ತು. ಅಲ್ಲಿ ಈ ಚಿತ್ರಕ್ಕೆ ನಷ್ಟ ಆಗಿದೆ ಎನ್ನಲಾಗಿದೆ.

ಫಸ್ಟ್ ಡೇ ಕಲೆಕ್ಷನ್ ಎಷ್ಟು?
ಭೀಮ್ಲಾ ನಾಯಕ್ ಸಿನಿಮಾ ಮೊದಲ ದಿನ ತೆಲುಗು ರಾಜ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದೆ. ಮೊದಲ ದಿನ 'ಭೀಮ್ಲಾ ನಾಯಕ್' ಗಳಿಸಿದ್ದು, ಬರೋಬ್ಬರಿ 37.3 ಕೋಟಿ ರೂಪಾಯಿ. ವಿಶ್ವದಾದ್ಯಂತ ಈ ಚಿತ್ರ ಗಳಿಸಿದ್ದು 50 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಗಳಿಸಿರುವ 37.3 ಕೋಟಿಗೆ ಇನ್ನೂ 10 ಹೆಚ್ಚು ಸೇರಬೇಕಿತ್ತು ಎಂಬುದು ಪವನ್ ಅಭಿಮಾನಿಗಳ ಆಕ್ರೋಶ. ಆಂಧ್ರ ಸಿಎಂ ಜಗನ್ ಹೊಸ ನೀತಿಯಿಂದ ನಿರ್ಮಾಪಕರಿಗೆ 10 ಕೋಟಿ ನಷ್ಟ ಆಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

ತಮಿಳಿನಲ್ಲೂ ಭೀಮ್ಲಾ ನಾಯಕ್
'ಭೀಮ್ಲಾ ನಾಯಕ್' ಮಲಯಾಳಂ ಸಿನಿಮಾ ರಿಮೇಕ್. ಆಂಧ್ರದಲ್ಲಿ 'ಭೀಮ್ಲಾ ನಾಯಕ್' ಚಿತ್ರಕ್ಕೆ ಸಿಕ್ಕಿರುವ ಹೈಪ್ ನೋಡಿ ತಮಿಳಿನಲ್ಲಿಯೂ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಮಲಯಾಳಂ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ಚಿತ್ರವನ್ನು ಯತಾವತ್ತಾಗಿ ತೆರೆಮೇಲೆ ತರಲು ನಿರ್ಧರಿಸಿದ್ದಾರೆ. ತಮಿಳಿನಲ್ಲಿ ಶರತ್ ಕುಮಾರ್ ಹಾಗೂ ಶಶಿಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಸಿನಿಮಾಗೆ ಸಕಲ ಸಿದ್ಧತೆಗಳೂ ನಡೆಯುತ್ತಿವೆ.


Click it and Unblock the Notifications











