"ಚಿರಂಜೀವಿ ಸರ್ ಪಕ್ಕದಲ್ಲಿದ್ದರೆ, ನಾನು ನಾಯಕ ಎಂಬುದನ್ನು ಮರೆತುಬಿಡುತ್ತೇನೆ" ಪವನ್ ಕಲ್ಯಾಣ್
ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ತೆಲುಗು ಚಿತ್ರರಂಗದ ಪವರ್‌ಸ್ಟಾರ್ ಪವನ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ರಿಲೀಸ್‌ಗೆ ಕೆಲವೇ ದಿನಗಳ ಬಾಕಿ ಇವೆ. ಮಾರ್ಚ್ 19ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾಗೆ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹರೀಶ್ ಶಂಕರ್ ನಿರ್ದೇಶನದ ಈ ಸಿನಿಮಾ ಮಾಸ್ ಅಭಿಮಾನಿಗಳಿಗೆ ಮಸ್ತ್ ಕಿಕ್ ಕೊಡಲಿದೆ.
ಯುಗಾದಿ ಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗುತ್ತಿರುವ 'ಉಸ್ತಾದ್ ಭಗತ್ ಸಿಂಗ್' ಪ್ರಿ-ರಿಲೀಸ್ ಇವೆಂಟ್ ಅನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಹೈದರಾಬಾದ್‌ನಲ್ಲಿ ನಡೆದ ಈ ಇವೆಂಡ್‌ನಲ್ಲಿ ಪವನ್ ಕಲ್ಯಾಣ್ ತಮ್ಮ ಭಾಷಣದಿಂದ ಗಮನ ಸೆಳೆದಿದ್ದಾರೆ. ಈ ವೇದಿಕೆಯಲ್ಲಿ ಪವನ್ ಕಲ್ಯಾಣ್ ಭಾವನಾತ್ಮಕ ಭಾಷಣ ಅವರ ಅಭಿಮಾನಿಗಳ ಗಮನ ಸೆಳೆಯಿತು.

ಸಿನಿಮಾ ಕ್ಷೇತ್ರದ ಮೇಲಿನ ತಮಗಿರುವ ಆಳವಾದ ಪ್ರೀತಿಯನ್ನು ಪವನ್ ಕಲ್ಯಾನ್ ವ್ಯಕ್ತಪಡಿಸಿದರು. "ಸಿನಿಮಾ ನನಗೆ ತುಂಬಾ ಇಷ್ಟ. ಇದು ನನಗೆ ಅನ್ನ ಕೊಟ್ಟಿದೆ. ಇಂದು ಜನರಿಗೆ ಸೇವೆ ಮಾಡುವ ಅವಕಾಶ ಕೊಟ್ಟಿದೆ. ಅದಕ್ಕಾಗಿಯೇ ನನ್ನ ನಿರ್ಮಾಪಕರು ಚೆನ್ನಾಗಿರಬೇಕು. ನನ್ನ ಅಭಿಮಾನಿಗಳು ಉತ್ಸಾಹದಿಂದ ಸಂತೋಷವಾಗಿರಬೇಕು ಎಂದು ನಾನು ಬಯಸುತ್ತೇನೆ. ಸಿನಿಮಾ ಬಿಡುಗಡೆಯಾದ ನಂತರ ಅದರ ಗಳಿಕೆಯ ಬಗ್ಗೆ ನಾನು ಎಂದಿಗೂ ನಿರ್ಮಾಪಕರನ್ನು ಕೇಳಿಲ್ಲ" ಎಂದು ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಹೇಳಿದ್ದಾರೆ.
ಹಾಗೇ "ನಾನು ಎಂದಿಗೂ ತೆಲುಗು ಸಿನಿಮಾ, ತಮಿಳು ಸಿನಿಮಾ ಅಂತ ಭೇದ-ಭಾವ ಮಾಡಿಲ್ಲ. ನಾನು ಅದನ್ನು ಭಾರತೀಯ ಸಿನಿಮಾ ಎಂದೇ ಪರಿಗಣಿಸಿದ್ದೇನೆ. ನಮ್ಮ ತೆಲುಗು ಚಿತ್ರರಂಗ ಆಸ್ಕರ್ ವೇದಿಕೆಯನ್ನೂ ತಲುಪಿದೆ" ಎಂದು ಪವನ್ ಕಲ್ಯಾಣ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಣ್ಣ ಮೆಗಾಸ್ಟಾರ್ ಚಿರಂಜೀವಿ ಬಗ್ಗೆನೂ ಪವನ್ ಮಾತಾಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಹರೀಶ್ ಶಂಕರ್ ಬಂದು ಕಾರ್ಯಕ್ರಮಕ್ಕೆ ಚಿರಂಜೀವಿ ಅವರನ್ನು ಆಹ್ವಾನಿಸುವಂತೆ ಕೇಳಿದನ್ನು ನೆನಪಿಸಿಕೊಂಡಿದ್ದಾರೆ. "ನಿಮಗೆ ನಾಯಕ ಬೇಕಿದ್ದರೆ, ನನ್ನನ್ನು ಕರೆಯಿರಿ.. ಅಣ್ಣ ಬೇಕಿದ್ದರೆ ಚಿರಂಜೀವಿ ಸರ್ ಅವರನ್ನು ಕರೆಯಿರಿ ಎಂದು ನಾನು ಹೇಳಿದ್ದೆ. ಚಿರಂಜೀವಿ ಸರ್ ಪಕ್ಕದಲ್ಲಿದ್ದರೆ, ನಾನು ನಾಯಕ ಎಂಬುದನ್ನು ಮರೆತುಬಿಡುತ್ತೇನೆ" ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಅಣ್ಣ ಚಿರಂಜೀವಿ 'ಉಸ್ತಾದ್ ಭಗತ್ ಸಿಂಗ್' ಟ್ರೈಲರ್ ನೋಡಿ ಟ್ವೀಟ್ ಮಾಡಿದ್ದನ್ನು ಪವನ್ ಕಲ್ಯಾಣ್ ನೆನಪಿಸಿಕೊಂಡು ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ಅಣ್ಣಯ್ಯ ಚಿರಂಜೀವಿ ಸರ್ ಅವರಿಗೆ ನನ್ನ ಧನ್ಯವಾದಗಳು. ರಾಮ್ ಚರಣ್ ಕೂಡ ಟ್ವೀಟ್ ಮಾಡಿದ್ದಕ್ಕಾಗಿ ಧನ್ಯವಾದ. ಜನಪ್ರಿಯ ನಿರ್ದೇಶಕ ಬುಚ್ಚಿಬಾಬು ಸರ್ ಅವರಿಗೂ ನನ್ನ ಧನ್ಯವಾದಗಳು" ಎಂದು ಪವನ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸಿನಿಮಾ ನಿರ್ಮಾಣದ ಸವಾಲುಗಳ ಬಗ್ಗೆನೂ ಮಾತಾಡಿದ್ದಾರೆ. "ಒಂದು ಸಿನಿಮಾ ಪ್ರಾರಂಭವಾದ ನಂತರ ಅನೇಕ ಅಡೆತಡೆಗಳು ಎದುರಾಗುತ್ತವೆ. ನಾವೆಲ್ಲರೂ ಅದರ ಯಶಸ್ಸಿಗಾಗಿ ದುಡಿಯುತ್ತೇವೆ. ಯೋಚಿಸಿದಂತೆ ಸಿನಿಮಾವನ್ನು ಮಾಡಿ ಯಶಸ್ಸು ಸಾಧಿಸುವುದು ಬಹಳ ಕಷ್ಟ. ಯಾವುದೇ ನಾಯಕ ತನ್ನ ಸಿನಿಮಾ ವಿಫಲವಾಗಬೇಕೆಂದು ಬಯಸುವುದಿಲ್ಲ. ಆದರೆ ಪರಿಸ್ಥಿತಿಗಳು ಯಾವಾಗಲೂ ಅನುಕೂಲಕರವಾಗಿರುವುದಿಲ್ಲ" ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
"ನಾನು ಈ ಸಿನಿಮಾ ಪ್ರಾರಂಭಿಸಿದಾಗ ಹರೀಶ್ ಶಂಕರ್ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ನಾನು ನಿರ್ದೇಶಕರನ್ನು ಕುರುಡಾಗಿ ನಂಬುತ್ತೇನೆ. ಕಥೆ ಬದಲಾಯಿತು. ಮಧ್ಯದಲ್ಲಿ ಕೋವಿಡ್ ಬಂತು. ಈ ಮಧ್ಯೆ ರಾಜಕೀಯಕ್ಕೆ ಹೋಗಿ ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡೆ. ಆದರೂ, ನನ್ನ ಮಿತಿಯಲ್ಲಿ ಯಾವುದೇ ತೊಂದರೆಯಾಗದಂತೆ 45 ದಿನಗಳಲ್ಲಿ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದೇನೆ. ನಾನು ಬೆಳಿಗ್ಗೆ ಎರಡು ಗಂಟೆ ಹಾಗೂ ಸಂಜೆ ಎರಡು ಗಂಟೆಗಳ ಕಾಲ ಈ ಸಿನಿಮಾಗಾಗಿ ಕೆಲಸ ಮಾಡಿದ್ದೇನೆ. 'ಉಸ್ತಾದ್ ಭಗತ್ ಸಿಂಗ್' ಸರಿಯಾಗಿ ಪ್ಲಾನ್ ಮಾಡಿದರೆ, ಸಿನಿಮಾ ಮಾಡಬಹುದು ಎಂಬ ವಿಶ್ವಾಸವನ್ನು ನೀಡಿದೆ" ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.


Click it and Unblock the Notifications











