"ನಮಗೆ ರಜನಿ ಅಲ್ಲ ಚಿರಂಜೀವಿ ಸೂಪರ್‌ಸ್ಟಾರ್": ಚಂದ್ರಬಾಬು ನಾಯ್ಡು ಹೊಗಳಿದ್ದಕ್ಕೆ ತೆಲುಗು ನಟ ಪೊಸಾನಿ ಕಿಡಿ!
ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಸೀನಿಯರ್ ಎನ್‌ಟಿಆರ್ ಅವರ 100ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ಚಂದ್ರಬಾಬು ನಾಯ್ಡು ಅವರ ಬಗ್ಗೆ ರಜನಿ ಮಾತಾಡಿದ್ದರು. ಆ ಮಾತುಗಳು ಈಗ ಆಂಧ್ರ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿವೆ.
ತೆಲುಗಿನ ಹಾಸ್ಯ ನಟ ಹಾಗೂ ವೈಎಸ್‌ಆರ್ ಕಾಂಗ್ರೆಸ್‌ನ ಸದಸ್ಯ ಪೊಸಾನಿ ಕೃಷ್ಣ ಮುರಳಿ ಸೂಪರ್‌ಸ್ಟಾರ್ ರಜನಿ ವಿರುದ್ಧ ತಿರುಗಿಬಿದ್ದಿದ್ದಾರೆ. ತಲೈವಾ ವೇದಿಕೆ ಮೇಲೆ ಚಂದ್ರಬಾಬು ನಾಯ್ಡು ಅವರನ್ನು ಹೊಗಳಿ ಭಾಷಣ ಮಾಡಿದ್ದರು. ಇದು ಪೊಸಾನಿ ಅವರ ನಿದ್ದೆ ಕೆಡಿಸಿತ್ತು. ಹೀಗಾಗಿ ರಜನಿಯ ಆಡಿದ ಮಾತುಗಳ ವಿರುದ್ಧ ತಿರುಗಿಬಿದ್ದಿದ್ದಾರೆ.

"ನಮಗೆ ರಜನಿ ಅಲ್ಲ ಚಿರಂಜೀವಿ ಸೂಪರ್‌ಸ್ಟಾರ್"
ರಜನಿಕಾಂತ್ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಹೊಗಳಿದ್ದಕ್ಕೆ ಪೊಸಾನಿ ಕಿಡಿಕಾರಿದ್ದಾರೆ. ಇವರೊಂದಿಗೆ ಹಲವು ಮಂದಿ ರಜನಿಕಾಂತ್ ಅವರ ಮಾತುಗಳನ್ನು ಟೀಕಿಸುತ್ತಿದ್ದಾರೆ. ಆದರೆ, ರಜನಿಕಾಂತ್ ಅನ್ನು ವಿರೋಧಿಸುವ ಭರಾಟೆಯಲ್ಲಿ ಪೊಸಾನಿ ಆಡಿದ ಮಾತುಗಳು ಅಷ್ಟೇ ಚರ್ಚೆಗೆ ಎಡೆ ಮಾಡಿಕೊಟ್ಟಿವೆ.
ಬೇರೆ ರಾಜ್ಯದಿಂದ ಬಂದು ರಜನಿಕಾಂತ್ ಇಲ್ಲಿ ರಾಜಕೀಯ ಮಾಡುತ್ತಿದ್ದಾರೆಂಬ ಟೀಕೆಗಳು ಕೇಳಿ ಬರುತ್ತಿವೆ. ಈ ಮಧ್ಯೆ ಪೊಸಾನಿ " ರಜನಿಕಾಂತ್ ನಮ್ಮ ಸೂಪರ್ ಸ್ಟಾರ್ ಅಲ್ವೇ ಅಲ್ಲ. ಮೆಗಾಸ್ಟಾರ್ ಚಿರಂಜೀವಿ ನಮಗೆ ಸೂಪರ್ ಸ್ಟಾರ್" ಎಂದು ಪೊಸಾನಿ ಕೃಷ್ಣ ಮುರಳಿ ಹೇಳಿದ್ದಾರೆ. ಇವರ ಈ ಹೇಳಿಕೆ ಕೂಡ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

"ಚಿರಂಜೀವಿ ಮಾತಾಡಿದ್ದರೆ ಯೋಚಿಸುತ್ತಿದ್ದೆವು"
ರಜನಿಕಾಂತ್ ನಮಗೆ ಸೂಪರ್‌ಸ್ಟಾರ್ ಅಲ್ಲ ಅಂತ ಹೇಳಿರೋ ಪೊಸಾನಿ ಕೃಷ್ಣ ಮುರಳಿ ವಾಗ್ಯುದ್ಧವನ್ನು ಇಲ್ಲಿಗೆ ನಿಲ್ಲಿಸಿಲ್ಲ. ರಜನಿಕಾಂತ್ ಆಂಧ್ರ ಪ್ರತಿ ಬಂದು ಹೋಗಲಿ. ಅವರ ಗೆಳೆಯ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ,ಹೊಗಳಲಿ. ಆದರೆ, ಆಂಧ್ರದ ಜನರನ್ನು ವಿಮರ್ಶೆ ಯಾಕೆ ಮಾಡಬೇಕು?. ಅವರು ತಮಿಳುನಾಡಿನ ಸೂಪರ್‌ಸ್ಟಾರ್ ತೆಲುಗು ರಾಜ್ಯಗಳಿಗೆ ಅಲ್ಲ" ಎಂದು ಕಿಡಿ ಕಾರಿದ್ದಾರೆ.
"ಮೆಗಾಸ್ಟಾರ್ ಚಿರಂಜೀವಿ ಮಾತಾಡಿದ್ದರೆ, ಅವರ ಬಗ್ಗೆ ಮಾತಿಗೆ ಗೌರವ ನೀಡಬಹುದಿತ್ತು. ರಜನಿಕಾಂತ್ ಆಡಿದ ಮಾತಿಗೆ ನಾವು ಬೆಲೆ ಕೊಡಬೇಕಿಲ್ಲ." ಎಂದು ಪೊಸಾನಿ ರಜನಿಕಾಂತ್ ವಿರುದ್ಧ ಕಿಡಿಕಾರಿದ್ದಾರೆ.
ಹಾಗಂತ ರಜನಿಕಾಂತ್ ಅಷ್ಟೇ ಅಲ್ಲ. ನಿರ್ಮಾಪಕ ಅಶ್ವಿನಿ ದತ್ ವಿರುದ್ಧವೂ ಕಿಡಿಕಾರಿದ್ದಾರೆ. ಕೆಲವು ದಿನಗಳ ಹಿಂದೆ ಆಂಧ್ರದ ಜಗನ್ ಸರ್ಕಾರ ನಂದಿ ಪ್ರಶಸ್ತಿಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ನಿರ್ಮಾಪಕ ಅಶ್ವಿನಿ ದತ್ ಆರೋಪಿಸಿದ್ದರು. ಹೀಗಾಗಿ ಇವರ ವಿರುದ್ಧವೂ ತಿರುಗಿಬಿದ್ದಿದ್ದಾರೆ. ಹೀಗೆ ಹಲವು ಸಂದರ್ಭಗಳಲ್ಲಿ ಪೊಸಾನಿ ಹಲವರ ವಿರುದ್ಧ ತಿರುಗಿಬಿದ್ದಿದ್ದಾರೆ.


Click it and Unblock the Notifications











