50ನೇ ವಾರ್ಷಿಕೋತ್ಸವಕ್ಕೆ ಭರ್ಜರಿ ಸುದ್ದಿ ನೀಡಿದ ವೈಜಯಂತಿ ಮೂವೀಸ್
ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ವೈಜಯಂತಿ ಮೂವೀಸ್ ತನ್ನ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶೇಷ ಸುದ್ದಿಯೊಂದನ್ನು ನೀಡಿದೆ. ನಟ ಪ್ರಭಾಸ್ ಅವರ 21ನೇ ಸಿನಿಮಾವನ್ನು ನಿರ್ಮಾಣ ಸಂಸ್ಥೆ ಪ್ರಕಟಿಸಿದ್ದು, ಇದೇ ಮೊದಲ ಬಾರಿಗೆ ನಟಿ ದೀಪಿಕಾ ಪಡುಕೋಣೆ ತೆಲುಗು ಸಿನಿಮಾದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
Recommended Video
ಪ್ರಭಾಸ್‌ಗೆ ಖ್ಯಾತ ನಟಿಯೊಬ್ಬರು ಜತೆಯಾಗಲಿದ್ದಾರೆ ಎಂಬ ಸುಳಿವನ್ನು ವೈಜಯಂತಿ ಮೂವೀಸ್ ಶನಿವಾರ ನೀಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಜತೆಯಾಗಿ ನಟಿಸಲಿದ್ದಾರೆ ಎಂಬ ಸಂಗತಿ ಆಗಲೇ ಸೋರಿಕೆಯಾಗುವುದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆದಿತ್ತು. ಈಗ ಆ ಸುದ್ದಿ ಅಧಿಕೃತವಾಗಿದೆ. ದೀಪಿಕಾ ಪಡುಕೋಣೆ ತಮ್ಮ ಮುಂದಿನ ಚಿತ್ರದಲ್ಲಿ ಪ್ರಭಾಸ್‌ಗೆ ಜತೆಯಾಗಲಿದ್ದಾರೆ ಎಂಬುದನ್ನು ವೈಜಯಂತಿ ಮೂವೀಸ್ ಘೋಷಿಸಿದೆ. ಮುಂದೆ ಓದಿ...

ನಾಗ್ ಅಶ್ವಿನ್ ನಿರ್ದೇಶನ
'ಮಹಾನಟಿ'ಯಂತಹ ಸಿನಿಮಾ ನಿರ್ದೇಶಿಸಿದ್ದ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ದೀಪಿಕಾ ಮತ್ತು ಪ್ರಭಾಸ್ ಜತೆಯಾಗಿ ನಟಿಸುತ್ತಿರುವ ಸಂಗತಿಯೇ ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಇದು ಪಾನ್ ಇಂಡಿಯಾ ಸಿನಿಮಾ ಆಗಿರಲಿದೆ ಎಂದು ಸಹ ತಿಳಿಸಲಾಗಿದೆ. ಸದ್ಯಕ್ಕೆ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ.

ಮೂರನೇ ವಿಶ್ವಯುದ್ಧದ ಕಲ್ಪನೆ
ಚಿತ್ರದ ಕಥಾ ವಸ್ತು ಕೂಡ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಇದೊಂದು ವೈಜ್ಞಾನಿಕ ತಳಹದಿಯ ಕಥನವಾಗಿರಲಿದ್ದು, ಮೂರನೇ ವಿಶ್ವಯುದ್ಧದ ಕಾಲ್ಪನಿಕ ಕಥೆಯನ್ನು ಹೊಂದಿದೆ. ವಿಶ್ವಯುದ್ಧದ ಹಿನ್ನೆಲೆಯಲ್ಲಿ ಪ್ರೇಮಕಥೆಯನ್ನು ಒಳಗೊಂಡಿರಲಿದೆ. ಅದ್ಧೂರಿ ವೆಚ್ಚದ ಈ ಸಿನಿಮಾಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿದ್ದು, ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಸೆಟ್ಟೇರುವ ನಿರೀಕ್ಷೆಯಿದೆ.

ಸಂಭಾವನೆ ಹೆಚ್ಚಿಸಿಕೊಂಡ ದೀಪಿಕಾ
ದೀಪಿಕಾ ಪಡುಕೋಣೆ ಅವರಿಗೆ ಕಥೆ ಇಷ್ಟವಾಗಿದ್ದು, ಒಪ್ಪಿಗೆ ನೀಡಿದ್ದಾರೆ. ಆದರೆ ಅದಕ್ಕೆ ಅಧಿಕ ಸಂಭಾವನೆಯನ್ನೂ ಕೇಳಿದ್ದಾರೆ ಎನ್ನಲಾಗಿದೆ. ಪ್ರಸ್ತುತ ದೀಪಿಕಾ ಸಿನಿಮಾವೊಂದಕ್ಕೆ ಸುಮಾರು 15 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದು, ಅದರ ಮೊತ್ತವನ್ನು ಏರಿಸಿಕೊಂಡಿದ್ದಾರೆ. ಇದು ಪಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ 'ಬಾಹುಬಲಿ'ಯನ್ನೂ ಮೀರಿಸುವ ಗಳಿಕೆಯನ್ನು ನಿರೀಕ್ಷಿಸಿರುವುದರಿಂದ ನಿರ್ಮಾಣ ಸಂಸ್ಥೆ ದೀಪಿಕಾ ಕೇಳಿದಷ್ಟು ಸಂಭಾವನೆ ನೀಡಲು ಒಪ್ಪಿಕೊಂಡಿದೆ ಎನ್ನಲಾಗಿದೆ.

ರಾಧೆ ಶ್ಯಾಮ್ ಸಿನಿಮಾ
ಸದ್ಯ, ಪ್ರಭಾಸ್ ಈಗ 'ರಾಧೆ ಶ್ಯಾಮ್' ಚಿತ್ರದ ಚಿತ್ರೀಕರಣ ಆರಂಭವಾಗಲು ಕಾದಿದ್ದಾರೆ. ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಬಿಡುಗಡೆ ಮಾಡಲಾಗಿತ್ತು.

ದೀಪಿಕಾ ಸಿನಿಮಾಗಳು
ಇನ್ನೊಂದೆಡೆ ದೀಪಿಕಾ ಪಡುಕೋಣೆ ಕಬೀರ್ ಖಾನ್ ನಿರ್ದೇಶನದ '83' ಚಿತ್ರದ ಬಿಡುಗಡೆಗೆ ಕಾದಿದ್ದಾರೆ. 1983ರ ವಿಶ್ವಕಪ್ ಗೆದ್ದ ಕ್ರಿಕೆಟ್ ತಂಡದ ಕಥೆಯನ್ನು ಒಳಗೊಂಡಿದ್ದು, ಕಪಿಲ್ ದೇವ್ ಅವರ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಕಪಿಲ್ ದೇವ್ ಪತ್ನಿಯ ಪಾತ್ರದಲ್ಲಿ ದೀಪಿಕಾ ಅಭಿನಯಿಸಿದ್ದಾರೆ. ಇದರ ಜತೆಗೆ ಶಕೂನ್ ಬಾತ್ರಾ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಸಿದ್ಧಾರ್ಥ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಜತೆ ನಟಿಸಲು ದೀಪಿಕಾ ಸಹಿ ಹಾಕಿದ್ದಾರೆ.


Click it and Unblock the Notifications











