Kalki 2898AD Day 1 Box Office:'ಕಲ್ಕಿ' ಮೊದಲ ದಿನ ಎಷ್ಟು ಕೋಟಿ ಲೂಟಿ ಮಾಡಬಹುದು?
'ಕಲ್ಕಿ 2898ಎಡಿ' ಜೂನ್ 27ರಂದು ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಭಾರತದ ಅತೀ ದುಬಾರಿ ಸಿನಿಮಾ ಎನಿಸಿಕೊಂಡಿರುವ ಈ ಸಿನಿಮಾ ಮೇಲೆ ಇಡೀ ದೇಶವೇ ಅಚ್ಚರಿಯಿಂದ ನೋಡುತ್ತಿದೆ. ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತದ ಯಾವುದೇ ಚಿತ್ರರಂಗ ಸಿನಿಮಾ ಮಾಡಿಲ್ಲ. ಹೀಗಾಗಿ ಇಷ್ಟು ದೊಡ್ಡ ಬಜೆಟ್ ಸಿನಿಮಾದ ಬಾಕ್ಸಾಫೀಸ್ ಮೇಲೆ ಸಹಜವಾಗಿ ಈಗಾಗಲೇ ಲೆಕ್ಕಾಚಾರ ಹಾಕಲಾಗುತ್ತಿದೆ.
'ಮಹಾನಟಿ' ಸಿನಿಮಾ ನಿರ್ದೇಶಿಸಿದ್ದ ನಾಗ ಅಶ್ವಿನ್ 'ಕಲ್ಕಿ 2898ಎಡಿ'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಈ ಸಿನಿಮಾದ ತುಣುಕುಗಳು ಹಾಲಿವುಡ್‌ಗೆ ಕಾಂಪಿಟೇಷನ್ ಕೊಡುವಂತೆ ಇದೆ. ಆದರೆ, ಸಿನಿಮಾ ಬಜೆಟ್‌ಗೆ ತಕ್ಕಂತೆ ಪ್ರಚಾರದ ಅವಶ್ಯಕತೆ ಇತ್ತೇನೋ ಅನಿಸುವಾಗಲೇ ಸಿನಿಮಾ ರಿಲೀಸ್‌ಗೆ ರೆಡಿಯಾಗಿ ನಿಂತಿದೆ. ಸಿನಿಮಾ ಬಿಡುಗಡೆ ವಿಷಯಕ್ಕೆ ಸಂಬಂಧಿಸಿದಂತೆ ದೊಡ್ಡ ಇವೆಂಟ್‌ಗಳು ನಡೆದಿಲ್ಲ.

'ಕಲ್ಕಿ 2898ಎಡಿ' ರಿಲೀಸ್ ಬಳಿಕ ಮೌತ್ ಪಬ್ಲಿಸಿಟಿಯಿಂದ ಥಿಯೇಟರ್‌ಗಳು ತುಂಬ ಬಹುದೆಂದು ನಿರೀಕ್ಷೆ ಮಾಡಲಾಗಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಅಂತಹ ದಿಗ್ಗಜರು ಈ ಸಿನಿಮಾದ ಭಾಗವಾಗಿದ್ದಾರೆ. ಈ ಕಾರಣಕ್ಕೆ ಟ್ರೇಡ್ ಎಕ್ಸ್‌ಪರ್ಟ್‌ಗಳ ಒಂದೊಂದು ಲೆಕ್ಕಾಚಾರವನ್ನು ಮುಂದಿಡುತ್ತಿದ್ದಾರೆ.
ಪ್ರಭಾಸ್ ನಟನೆಯ ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಕಲ್ಕಿ 2898ಎಡಿ'. ಈ ಸಿನಿಮಾ ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಅಲ್ಲದೆ ಐದು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಬಹುದು? ಅನ್ನೂ ಕುತೂಹಲವೂ ಇದೆ. ಸದ್ಯ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಅನ್ನೋ ಲೆಕ್ಕಾಚಾರ ಈಗಾಗಲೇ ಹಾಕಿದ್ದಾರೆ.
'ಕಲ್ಕಿ 2898ಎಡಿ' ಭಾರತೀಯ ಸಿನಿಮಾಗಳ ಪೈಕಿ ಅತೀ ದೊಡ್ಡ ಓಪನಿಂಗ್ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಮೊದಲ ದಿನ 175 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಇದರಲ್ಲಿ ಪ್ರೀಮಿಯರ್ ಕಲೆಕ್ಷನ್ ಕೂಡ ಸೇರಿದೆ. 35 ಕೋಟಿ ರೂಪಾಯಿ ವಿಶ್ಚದ ಬೇರೆ ಬೇರೆ ಕಡೆಗಳಲ್ಲಿ ಆದ ಪ್ರೀಮಿಯರ್‌ನಿಂದ ಕಲೆಕ್ಷನ್ ಆಗಿದ್ದರೆ, ಉಳಿದ 140 ಕೋಟಿ ರೂಪಾಯಿ ಥಿಯೇಟರ್‌ನಿಂದ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಸುಮಾರು 70 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದೆಂದು ಹೇಳಲಾಗುತ್ತಿದೆ. ಉಳಿದಂತೆ ಉತ್ತರ ಭಾರತದಿಂದ 30 ಕೋಟಿ ರೂಪಾಯಿ, ಕರ್ನಾಟಕದಿಂದ ಮೊದಲ ದಿನ 10 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದೆಂದು ಹೇಳಲಾಗುತ್ತಿದೆ. ಬಹಳ ದಿನಗಳ ಬಳಿಕ ಥಿಯೇಟರ್‌ಗಳಲ್ಲಿ ಮತ್ತೊಂದು ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಬಹುದೆಂಬ ನಿರೀಕ್ಷೆಯಿದೆ.
ಒಂದು ವೇಳೆ 'ಕಲ್ಕಿ 2898ಎಡಿ' ಮೊದಲ ದಿನ 175 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೂ, ಬಾಹುಬಲಿ 2 ಹಾಗೂ RRR ಸಿನಿಮಾದ ಮೊದಲ ದಿನ ಗಳಿಕೆಯನ್ನು ಹಿಂದಿಕ್ಕೆ ಹಾಕುವುದಕ್ಕೆ ಸಾಧ್ಯವಾಗುವುದಿಲ್ಲ. 'ಬಾಹುಬಲಿ 2' ಸಿನಿಮಾ ಮೊದಲ ದಿನ 200 ಕೋಟಿ ಗಳಿಸಿತ್ತು. ಅದೇ RRR 189 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿತ್ತು. ಈ ಕಾರಣಕ್ಕೆ 'ಕಲ್ಕಿ 2898ಎಡಿ' ಮೇಲೆ ಎಲ್ಲರ ಕಣ್ಣು ನೆಟ್ಟಿದೆ.


Click it and Unblock the Notifications











