'ಸಲಾರ್'ನಲ್ಲಿ ಪ್ರಭಾಸ್ ಹೊಡೆದಿದ್ದು 2.20 ನಿಮಿಷ ಡೈಲಾಗ್ ಅಷ್ಟೇನಾ? ಪ್ರತಿ ಸೆಕೆಂಡ್‌ಗೆ ಸಿಕ್ಕ ಹಣವೆಷ್ಟು?
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದರು. 'ಬಾಹುಬಲಿ' ಬಳಿಕ ಸತತ ಮೂರು ಸಿನಿಮಾಗಳು ಹೀನಾಯವಾಗಿ ಸೋತಿದ್ದರು. ಈ ಸೋಲಿನಿಂದ ಹೊರಬರುವುದಕ್ಕೆ ಡಾರ್ಲಿಂಗ್ ಪ್ರಭಾಸ್ ಪಟ್ಟ ಪಾಡು ಅಷ್ಟಿಲ್ಲ. ಕೊನೆಗೂ ಪ್ರಶಾಂತ್ ನೀಲ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್‌ಗೆ ಸಕ್ಸಸ್‌ಫುಲ್ ಸಿನಿಮಾ ಕೊಟ್ಟು ಗೆಲ್ಲಿಸಿದ್ದಾರೆ.
'ಸಲಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ 700 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. 'ಉಗ್ರಂ' ಸಿನಿಮಾದ ದುಬಾರಿ ರಿಮೇಕ್ ಅನ್ನೋ ಹಣೆಪಟ್ಟಿ ಹೊತ್ತು ರಿಲೀಸ್ ಆಗಿದ್ದರೂ, ಭಾರತದ ಹಲವು ಭಾಗಗಳಲ್ಲಿ ಈ ಸಿನಿಮಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಟ್ರೇಡ್ ಎಕ್ಸ್‌ಪರ್ಟ್ ಮನೋಬಾಲ ವಿಜಯಬಾಲನ್ ಪ್ರಕಾರ, 729.63 ಕೋಟಿ ರೂಪಾಯಿ ಫೈನಲ್ ಕಲೆಕ್ಷನ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಪ್ರಭಾಸ್ ಮತ್ತೆ ಗೆಲುವಿನ ನಗೆ ಬೀರುವಂತಾಗಿತ್ತು.

'ಸಲಾರ್' ರಿಲೀಸ್ ಆಗಿ ಓಟಿಟಿಗೂ ಬಂದ್ಮೇಲೂ ಸಿನಿಮಾ ಬಗ್ಗೆ ಚರ್ಚೆ ಮಾಡುವುದು ನಿಂತಿಲ್ಲ. ಈಗ ಸೋಶಿಯಲ್ ಮೀಡಿಯಾದಲ್ಲಿ 'ಸಲಾರ್' ಸಿನಿಮಾದಲ್ಲಿ ಪ್ರಭಾಸ್‌ಗೆ ಇರುವ ಡೈಲಾಗ್ ಬಗ್ಗೆ ಚರ್ಚೆಯಾಗುತ್ತಿದೆ. ಕೆಲವು ಇಡೀ ಸಿನಿಮಾದಲ್ಲಿ ಪ್ರಭಾಸ್‌ಗೆ ಎಷ್ಟು ನಿಮಿಷ ಡೈಲಾಗ್ ಇದೆ ಇರಬಹುದು ಅನ್ನೋದನ್ನು ಲೆಕ್ಕ ಹಾಕಿದ್ದಾರೆ. ಅದನ್ನೇ ಆಧಾರವಾಗಿಟ್ಟುಕೊಂಡು ಪ್ರತಿನಿಮಿಷಕ್ಕೆ ಪಡೆದ ಸಂಭಾವನೆಯನ್ನು ಲೆಕ್ಕಹಾಕಲಾಗಿದೆ.
ಪ್ರಭಾಸ್ ನಟಿಸಿದ ಬಹುತೇಕ ಸಿನಿಮಾಗಳನ್ನು ಗಮನಿಸಿದರೆ, ಅಲ್ಲಿ ಡೈಲಾಗ್ ಕಡಿಮೆ ಇರುತ್ತೆ. ಭಾವನೆಗಳು ಹಾಗೂ ಆಕ್ಷನ್ ದೃಶ್ಯಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇದು 'ಸಲಾರ್' ಸಿನಿಮಾದಲ್ಲೂ ಪ್ರೂವ್ ಆಗಿದೆ. ಡಾರ್ಲಿಂಗ್ ಅಭಿಮಾನಿಯೊಬ್ಬ 'ಸಲಾರ್' ಸಿನಿಮಾದಲ್ಲಿ ಇರುವ ಪ್ರಭಾಸ್ ಡೈಲಾಗ್‌ಗಳನ್ನು ಕಲೆ ಹಾಕಿ, ಅದನ್ನೇ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2 ನಿಮಿಷ 20 ಸೆಕೆಂಡ್ ಇರುವ ವಿಡಿಯೋ ನೋಡಿ ಮಜವಾದ ತರಹೇವಾರಿ ಕಮೆಂಟ್‌ಗಳು ಹಾಕುತ್ತಿದ್ದಾರೆ.
ಯಾವುದೇ ಸಿನಿಮಾ ತಂಡ ಆಗಲಿ, ಹೀರೊ ಆಗಲಿ. ತಾವು ಪಡೆದ ಸಂಭಾವನೆ ಬಗ್ಗೆ ಬಹಿರಂಗವಾಗಿ ಎಲ್ಲೂ ಹೇಳಿಕೊಳ್ಳುವುದಿಲ್ಲ. ಆದರೂ, ಅವರ ಆಪ್ತವಲಯದಿಂದ ಕೆಲವೊಮ್ಮೆ ಸ್ಟಾರ್ ನಟರು ಪಡೆದ ಸಂಭಾವನೆ ರಿವೀಲ್ ಆಗಿ ಬಿಡುತ್ತೆ. ಹಾಗೇ 'ಸಲಾರ್'ಗೆ ಪ್ರಭಾಸ್ ಸುಮಾರು 100 ಕೋಟಿ ರೂಪಾಯಿ ಸಂಭಾವನೆ ಹಾಗೂ ಶೇ.10ರಷ್ಟು ಲಾಭ ಪಡೆದಿದ್ದಾರೆಂದು ವರದಿಯಾಗಿದೆ.
ವಿಶ್ವದಾದ್ಯಂತ 729.63 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ 'ಸಲಾರ್'ಗೆ ಲಾಭ ಅಂತ 250 ರಿಂದ 300 ಕೋಟಿ ರೂಪಾಯಿ ಬಂದಿರಬಹುದು ಎಂದು ಊಹಿಸಲಾಗಿದೆ. ಈ ಮೂಲಕ 100 ಕೋಟಿ ರೂಪಾಯಿ ಸಂಭಾವನೆ ಜೊತೆಗೆ ಶೇ.10ರಷ್ಟು ಲಾಭ ಅಂದರೆ, 25 ರಿಂದ 30 ಕೋಟಿ ರೂಪಾಯಿ ನೀಡಬೇಕಾಗಬಹುದು. ಹೀಗಾಗಿ ಪ್ರಭಾಸ್ 'ಸಲಾರ್' 125 ರಿಂದ 130 ಕೋಟಿ ರೂಪಾಯಿ ಪಡೆದಿದ್ದಾರೆ ಅಂತ ಲೆಕ್ಕ ಹಾಕುತ್ತಿದ್ದಾರೆ.
ಇದೆಲ್ಲವನ್ನೂ ನೋಡಿದರೆ, ಒಂದು ಸೆಕೆಂಡ್ ಡೈಲಾಗ್‌ಗೆ ಪ್ರಭಾಸ್ ಅಂದಾಜು 80 ರಿಂದ 85 ಲಕ್ಷ ರೂಪಾಯಿ ತೆಗೆದುಕೊಂಡಂತೆ ಆಗುತ್ತೆ ಎಂದು ಕೆಲವು ಬಾಲಿವುಡ್ ವೆಬ್‌ಸೈಟ್‌ಗಳು ಲೆಕ್ಕ ಹಾಕಿದೆ. ಆದರೆ, ಈ ಲೆಕ್ಕಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಪ್ರಭಾಸ್ ಡೈಲಾಗ್ ಕಡಿಮೆ ಹೊಡೆದಿದ್ದರೂ, ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ.


Click it and Unblock the Notifications











