'ಸಲಾರ್:ಸೀಸ್ ಫೈರ್' ಸಿನಿಮಾದ ಬಜೆಟ್ 200 ಕೋಟಿ ಅಲ್ಲ: ಹೊಂಬಾಳೆ ಫಿಲ್ಮ್ಸ್ ಸುರಿದ ಹಣವೆಷ್ಟು?
ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ ಸಿನಿಪ್ರಿಯರಲ್ಲಿ ಕ್ರೇಜ್ ಹುಟ್ಟಾಗಿದೆ. ಬರೀ ಪೋಸ್ಟರ್ ಬಿಟ್ಟು ಸತಾಯಿಸುತ್ತಿದ್ದ ಪ್ರಶಾಂತ್ ನೀಲ್ ಕೊನೆಗೂ ಟೀಸರ್ ರಿಲೀಸ್ ಮಾಡಿದ್ದಾರೆ. ಅದೂ ನಸುಕಿನ ಜಾವದಲ್ಲಿ ಬಿಡುಗಡೆ ಮಾಡಿ ಎದ್ದು ಕೂರುವಂತೆ ಮಾಡಿದ್ದಾರೆ.
'ಸಲಾರ್' ಟೀಸರ್ ಆಗಿದ್ದೇನೋ ಆಗಿದೆ. ಆದರೆ, ದಾಖಲೆ ಬರೆಯೋ ಮಟ್ಟಿಗೆ ಸದ್ದು ಮಾಡಿಲ್ಲ. ಕೆಲವರಿಗೆ ಟೀಸರ್ ಇಷ್ಟ ಆಗಿಲ್ಲ. ಮತ್ತೆ ಕೆಲವರಿಗೆ ಮಜಾ ಕೊಟ್ಟಿದೆ. ಕೆಲವರಿಗಂತೂ ಮತ್ತೆ ಹಳೇ ಪ್ರಭಾಸ್ ಕಣ್ತುಂದೆ ಬಂದಂತೆ ಆಗಿದೆ. ಖುಷಿ ವಿಷಯ ಏನಂದ್ರೆ, 'ಆದಿಪುರುಷ್' ಟೀಸರ್‌ನಷ್ಟು ಬೇಸರಗೊಳಿಸಿಲ್ಲ ಅನ್ನೋದೇ ಸಮಾಧಾನ.

ಟೀಸರ್ ನೋಡಿದವರಿಗೆ ಇದೂ ಕೂಡ ಪಕ್ಕಾ ಆಕ್ಷನ್ ಸಿನಿಮಾ ನೋಡೋದು ಮನವರಿಕೆಗೆ ಬಂದಿದೆ. ಹಾಗೇ ಪ್ರಶಾಂತ್ ನೀಲ್ ಕೆಜಿಎಫ್ ಗುಂಗಿನಿಂದ ಹೊರಬಂದಿಲ್ಲ ಅನ್ನೋ ಸುಳಿವು ಕೂಡ ಸಿಕ್ಕಿದೆ. ಟೀಸರ್ ರಿಲೀಸ್ ಆಗಿ ಒಂದಿಷ್ಟು ಸಮಯ ಕಳೆದ ಬಳಿಕ ಸಿನಿಮಾ ಬಜೆಟ್ ಎಷ್ಟಿರಬಹುದು ಅನ್ನೋ ಚರ್ಚೆಯಾಗುತ್ತಿದೆ. ಇಲ್ಲಿವರೆಗೂ ಹಬ್ಬಿದ್ದ ಸುದ್ದಿ ಸುಳ್ಳಾಗಿದೆ. ಹಾಗಿದ್ದರೆ, ಸಿನಿಮಾದ ಅಸಲಿ ಬಜೆಟ್ ಎಷ್ಟು ಅನ್ನೋದನ್ನು ತಿಳಿಯಲು ಮುಂದೆ ಓದಿ.
ಎರಡು ಪಾರ್ಟ್‌ನಲ್ಲಿ ಬರುತ್ತೆ 'ಸಲಾರ್'
'ಬಾಹುಬಲಿ' ಬಳಿಕ ಪ್ರಭಾಸ್ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ರಿಲೀಸ್ ಆಗಿದ್ದೇ ಇಲ್ಲ. ಆದ್ರೀಗ 'ಸಲಾರ್' ಎರಡು ಭಾಗಗಳಾಗಿ ರಿಲೀಸ್ ಆಗುತ್ತಿದೆ. ಇದನ್ನು ಟೀಸರ್‌ನಲ್ಲೇ ಅನೌನ್ಸ್ ಮಾಡಿದ್ದಾರೆ. 'ಸಲಾರ್: ಸೀಸ್ ಫೈರ್' ಆ ಬಳಿಕ ಇನ್ನೊಂದು ಪಾರ್ಟ್ ರಿಲೀಸ್ ಆಗುತ್ತಿದೆ. ಅದ್ಯಾವಾಗ ಅನ್ನೋದು ಇನ್ನೂ ರಿವೀಲ್ ಆಗಿಲ್ಲ.

ಸದ್ಯ ಟೀಸರ್ ಅಷ್ಟೇ ಬಿಟ್ಟಿದ್ದಾರೆ. ಇನ್ನೂ ಟ್ರೈಲರ್, ಸಾಂಗ್ಸ್ ಬರೋದು ಬಾಕಿಯಿದೆ. ಟೀಸರ್ ಬಿಟ್ಟಿದ್ದರೂ, ಪ್ರಭಾಸ್ ಮುಖ ತೋರಿಸಿಲ್ಲ. ಇದು ಕೂಡ ಪ್ರಭಾಸ್ ಅಭಿಮಾನಿಗಳ ಬೇಸರಕ್ಕೆ ಒಂದು ಕಾರಣ. ದುಬಾರಿ ಸೆಟ್ಟು, ಮಾಸ್ ಆಕ್ಷನ್ ಇರುತ್ತೆ ಅನ್ನೋದು ಚಿಕ್ಕ ಟೀಸರ್‌ನಲ್ಲಿ ಗೊತ್ತಾಗಿದೆ. ಹೀಗಾಗಿ ಸಿನಿಮಾ ಬಜೆಟ್ ಬಗ್ಗೆ ಚರ್ಚೆ ಶುರುವಾಗಿದೆ.
'ಸಲಾರ್' ಸಿನಿಮಾ ಬಜೆಟ್ ಎಷ್ಟು?
'ಸಲಾರ್' ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಇಬ್ಬರನ್ನೂ ಒಟ್ಟಿಗೆ ಸೇರಿಸಿ ಸಿನಿಮಾ ಮಾಡಿದ್ದು, ಬಿಡುಗಡೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ 'ಸಲಾರ್' 200 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಆಗಿದೆ ಎಂದು ವರದಿಯಾಗಿತ್ತು. ಆದರೆ, ಈ ಸಿನಿಮಾ ಬಜೆಟ್ 200 ಕೋಟಿ ರೂ. ಅಲ್ಲ ಅನ್ನೋದು ಗೊತ್ತಾಗಿದೆ.
'ಸಲಾರ್' ಸಿನಿಮಾ ಅಸಲಿ ಬಜೆಟ್ ಅಂದುಕೊಂಡಿದ್ದಕ್ಕಿಂತ ದುಪ್ಪಟ್ಟು. ಅಂದ್ರೆ, ಬರೋಬ್ಬರಿ 400 ಕೋಟಿ ರೂ. 'ಬಾಹುಬಲಿ' ಬಳಿಕ ಪ್ರಭಾಸ್ ಸಿನಿಮಾದ ಬಜೆಟ್ 300 ಕೋಟಿ ರೂ.ಯನ್ನು ಮೀರುತ್ತಿವೆ. ಅಂತಹ ಸಿನಿಮಾಗಳ ಸಾಲಿಗೆ 'ಸಲಾರ್' ಕೂಡ ಸೇರಿಕೊಂಡಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಿಗೆ ಕಲೆಕ್ಷನ್ ಮಾಡಲೇ ಬೇಕಾಗಿದೆ.
400 ಕೋಟಿ ಖರ್ಚಾಗಿದ್ದು ಏನಕ್ಕೆ?
'ಕೆಜಿಎಫ್' ಬಳಿಕ ಹೊಂಬಾಳೆ ಫಿಲ್ಮ್ಸ್‌ಗೆ ಕಾನ್ಫಿಡೆನ್ಸ್ ಬಂದಿದೆ. ಕನ್ನಡದ ಸಂಸ್ಥೆಯೊಂದು ಇಷ್ಟೊಂದು ಹಣ ಸುರಿದು ಸಿನಿಮಾ ಮಾಡುತ್ತಿರೋದು ಹೆಮ್ಮೆಯೇ. ಕನ್ನಡ ಪ್ಯಾನ್ ಇಂಡಿಯಾ ಸಿನಿಮಾಗೆ ಹಿಂದೆ ಮುಂದೆ ನೋಡದೇ 150 ರಿಂದ 200 ಕೋಟಿ ರೂ. ಹಣ ಸುರಿದಿದ್ದರು. ಇನ್ನು ತೆಲುಗು ಸಿನಿಮಾಗೆ ದೊಡ್ಡ ಮೊತ್ತದ ಹಣದ ಅಗತ್ಯವಿದ್ದೇ ಇದೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸುಮಾರು 14 ಬೃಹತ್ ಸೆಟ್ಟುಗಳನ್ನು ಹಾಕಲಾಗಿತ್ತು. ಇದಕ್ಕೆ ಬಹುಪಾಲು ಹಣ ಖರ್ಚಾಗಿದೆ. ಇದರೊಂದಿಗೆ ಆಕ್ಷನ್ ಸೀಕ್ವೆನ್ಸ್, ಕಲಾವಿದರ, ತಂತ್ರಜ್ಞರ ಸಂಭಾವನೆ, ಪೋಸ್ಟ್ ಪ್ರೊಡಕ್ಷನ್, ಡಬ್ಬಿಂಗ್, ಪ್ರಚಾರ ಅಂತ ಹೆಚ್ಚು ಹಣವನ್ನು ಸುರಿಯಲಾಗಿದೆ. ಸಲಾರ್ ಸೆಪ್ಟೆಂಬರ್ 28ಕ್ಕೆ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.


Click it and Unblock the Notifications











