ಯಶ್ ಹೇಳಿದ್ದೂ ಇದೇ.. ಪ್ರಭಾಸ್, ಶ್ರುತಿ ಹಾಸನ್ ಹೇಳ್ತಿರೋದೂ ಅದೇ; ಪ್ರಶಾಂತ್ ನೀಲ್ ಮೇಲೆ ಏನಿದು ದೂರು?
ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ಸಕ್ಸಸ್‌ಫುಲ್ ನಿರ್ದೇಶಕ ಅನ್ನೋದು ಸಾಬೀತಾಗಿದೆ. 'ಕೆಜಿಎಫ್' ಸೀರಿಸ್ ಬಳಿಕ ಪ್ರಶಾಂತ್ ನೀಲ್ ಭವಿಷ್ಯ ಹೇಗಿರುತ್ತೆ? ಅನ್ನೋದನ್ನು ನೋಡುವುದಕ್ಕೆ ಸಿನಿಮಾ ಮಂದಿ ತುದಿಗಾಲಲ್ಲಿ ನಿಂತಿದ್ದರು. ಅದಕ್ಕೆ ಉತ್ತರವೆಂಬಂತೆ 'ಸಲಾರ್' ಕೊಟ್ಟು ಗೆದ್ದಿದ್ದಾರೆ.
'ಸಲಾರ್' ಅವರೇ ನಿರ್ದೇಶಿಸಿದ 'ಉಗ್ರಂ' ಸಿನಿಮಾದ ರಿಮೇಕ್ ಅನ್ನೋದು ಕನ್ನಡಿಗರಿಗೆ ನಿರಾಸೆ ಮೂಡಿಸಿದ್ದರೂ, ಬೇರೆ ಭಾಷಿಗರಿಗೆ ಉತ್ತಮ ಸಿನಿಮಾ ಅಂತಲೇ ಅನಿಸಿದೆ. ಹೀಗಾಗಿ ಪ್ರಶಾಂತ್ ನೀಲ್ ಗೆದ್ದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್‌ಗೆ ಮತ್ತೆ ಗೆಲುವು ಸಿಕ್ಕಂತೆ ಆಗಿದೆ. 'ಸಲಾರ್' ಸಿನಿಮಾವೇನೋ ಗೆದ್ದಿದೆ. ಆದರೆ, ಒಂದು ಕಾರಣಕ್ಕೆ ಪ್ರಭಾಸ್ ಹಾಗೂ ಶ್ರುತಿ ಹಾಸನ್ ಇಬ್ಬರೂ ಪ್ರಶಾಂತ್ ನೀಲ್ ಅನ್ನು ದೂರಿದ್ದಾರೆ.

ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಕೂಡ ಇದೇ ರೀತಿ ಹೇಳಿದ್ದರು. 'ಉಗ್ರಂ' ಸಿನಿಮಾ ಬಳಿಕ 'ಕೆಜಿಎಫ್' ಸಿನಿಮಾ ಮಾಡ್ಬೇಕು ಅಂತ ಹೊರಟಾಗ ರಾಕಿ ಭಾಯಿಗೂ ಇದೇ ರೀತಿ ಅನಿಸಿತ್ತು ಎಂದು 'ಕೆಜಿಎಫ್ ಚಾಪ್ಟರ್ 1' ಬಿಡುಗಡೆ ವೇಳೆನೇ ಹೇಳಿದ್ದರು. ಪ್ರಶಾಂತ್ ನೀಲ್ ಮೆಗಾ ಸಿನಿಮಾಗಳನ್ನು ನಿರ್ದೇಶನ ಮಾಡಿರಬಹುದು. ಆದರೆ, ಅವರಲ್ಲೂ ಒಂದು ಸಮಸ್ಯೆಯಿದೆ ಅನ್ನೋದು ಈಗ ಪ್ರಭಾಸ್ ಹಾಗೂ ಶ್ರುತಿ ಹಾಸನ್ ಹೇಳಿಕೆ ಬಳಿಕ ಸಾಬೀತಾಗಿದೆ.
ವಿಷ್ಯ ಏನಪ್ಪ ಅಂದರೆ, 'ಸಲಾರ್' ಸಕ್ಸಸ್ ಬಳಿಕ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮೂವರು ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಿದೆ. ಇದರಲ್ಲಿ ಪ್ರಭಾಸ್ ಹಾಗೂ ಶ್ರುತಿ ಹಾಸನ್ ಇಬ್ಬರೂ "ಪ್ರಶಾಂತ್ ನೀಲ್‌ಗೆ ಕಥೆ ಹೇಳುವುದಕ್ಕೆ ಬರುವುದಿಲ್ಲ. ತುಂಬಾ ಕೆಟ್ಟದಾಗಿ ಕಥೆ ಹೇಳುತ್ತಾರೆ" ಅಂತ ಹೇಳಿದ್ದಾರೆ.
ಈ ಹಿಂದೆ 'ಕೆಜಿಎಫ್ ಚಾಪ್ಟರ್ 1' ರಿಲೀಸ್ ವೇಳೆ ಯಶ್ ನೀಡಿದ ಸಂದರ್ಶನದಲ್ಲಿ ಇದೇ ಮಾತನ್ನು ಹೇಳಿದ್ದರು. "ಪ್ರಶಾಂತ್ ನೀಲ್‌ಗೆ ಕಥೆ ಹೇಳುವುದಕ್ಕೆ ಬರುವುದಿಲ್ಲ. ಆದರೆ, ಕಥೆಯ ಮೇಲೆ ಅವರಿಗೆ ಹಿಡಿತವಿದೆ. ಸಿನಿಮಾದಲ್ಲಿ ಹೇಗೆ ಕಥೆ ಹೇಳಬೇಕು ಅನ್ನೋದು ಗೊತ್ತಿದೆ. ಅದು ನನ್ನ ಗಮನಕ್ಕೆ ಬಂದಿತ್ತು. ಹೀಗಾಗಿ 'ಕೆಜಿಎಫ್' ಅನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ನಿರ್ಧರಿಸಿದ್ದೆವು." ಎಂದು ಹೇಳಿದ್ದರು.
ಈಗ ಪ್ರಭಾಸ್ ಹಾಗೂ ಶ್ರುತಿ ಹಾಸನ್ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಶ್ರುತಿ ಹಾಸನ್ "ನನಗೆ ಆರಂಭದಲ್ಲಿ ಜೂಮ್ ಕಾಲ್‌ನಲ್ಲಿ ಕಥೆ ಹೇಳಿದ್ದರು. ನನಗೆ ಸರಿಯಾಗಿ ಏನೂ ಅರ್ಥನೇ ಆಗಿರಲಿಲ್ಲ" ಎಂದಿದ್ದಾರೆ. ಅದೇ ಇನ್ನೊಂದು ಕಡೆ ಪೃಥ್ವಿರಾಜ್ ಸುಕುಮಾರ್ ತದ್ವಿರುದ್ಧವಾಗಿ ಹೇಳಿದ್ದಾರೆ. "ನನಗೂ ಜೂಮ್ ಕಾಲ್‌ನಲ್ಲಿಯೇ ಕಥೆ ಹೇಳಿದ್ರು. ಬಳಿಕ ನೇರವಾಗಿ ಭೇಟಿ ಮಾಡಿ ಮತ್ತೊಂದು ಕಥೆ ಹೇಳಿದ್ರು. ಎರಡೂ ಬಾರಿ ಅದ್ಭುತವಾಗಿ ಕತೆ ಒಪ್ಪಿಸಿದ್ದರು" ಎಂದು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಅದೇ ಚರ್ಚೆ ವೇಳೆ ಹೇಳಿದ್ದಾರೆ.


Click it and Unblock the Notifications











