ಪ್ರಕಾಶ್ ರಾಜ್ 'ರಾಮಾಯಣ' ವಿವಾದ; ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ ಕರಾಟೆ ಕಲ್ಯಾಣಿ
ಬಹುಭಾಷಾ ನಟ ಪ್ರಕಾಶ್ ರಾಜ್‌ಗೆ ವಿವಾದವೇನು ಹೊಸದಲ್ಲ. ಏನಾದರೂ ಒಂದು ವಿವಾದ ಇವರನ್ನು ಸುತ್ತಿಕೊಳ್ಳುತ್ತಲೇ ಇರುತ್ತೆ. ಇತ್ತೀಚೆಗೆ ಇವರು 'ರಾಮಾಯಣ'ದ ಬಗ್ಗೆ ಆಡಿದ ಮಾತುಗಳು ಕೆಲವರ ಕಣ್ಣುಗಳನ್ನು ಕೆಂಪಾಗಿಸಿತ್ತು. ಹಿಂದೂ ಧರ್ಮ ಹಾಗೂ ರಾಮಾಯಣಕ್ಕೆ ಅವಮಾನ ಮಾಡಿದ್ದಾರೆಂದು ಹಿಂದೂಪರ ಸಂಘಟನೆಗಳು ಆಕ್ರೋಶವನ್ನು ಹೊರ ಹಾಕಿದ್ದವು.
ರಾವಣನ ತೋಟದಲ್ಲಿ ರಾಮ, ಲಕ್ಷ್ಮಣ ಹಣ್ಣುಗಳನ್ನು ಕದ್ದು ತಿಂದರು ಎಂದು ಪ್ರಕಾಶ್ ಹೇಳಿಕೆ ನೀಡಿದ್ದರು. ಇದೇ ವರ್ಷ ಜನವರಿಯಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ ಪ್ರಕಾಶ್ ರಾಜ್ ಈ ಹೇಳಿಕೆಗಳನ್ನು ನೀಡಿದ್ದರು. ಆ ಹೇಳಿಕೆಯ ವಿಡಿಯೋ ಕಳೆದ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಪ್ರಕಾಶ್ ರಾಜ್ ನೀಡಿದ ಹೇಳಿಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಲವೆಡೆ ನಟನ ವಿರುದ್ಧ ಕೇಸ್‌ಗಳನ್ನು ದಾಖಲಿಸಲಾಗಿತ್ತು.

ಪ್ರಕಾಶ್ ರಾಜ್ ಹೇಳಿಕೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಕಠಿಣ ಶಿಕ್ಷೆ ನೀಡಬೇಕು. ಪ್ರಕಾಶ್ ರಾಜ್ ಅವರನ್ನು ಚಿತ್ರರಂಗದಿಂದಲೇ ದೂರವಿಡಬೇಕು ಎಂದು ಆಗ್ರಹಿಸಿದ್ದರು. ಈಗ ತೆಲುಗು ನಟಿ ಹಾಗೂ ಬಿಜೆಪಿ ನಾಯಕಿ ಕರಾಟೆ ಕಲ್ಯಾಣಿ ಕೂಡ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಅಷ್ಟಕ್ಕೂ ಕೇರಳ ಸಾಹಿತ್ಯ ಉತ್ಸವದಲ್ಲಿ ಪ್ರಕಾಶ್ ರಾಜ್ ನೀಡಿದ ಹೇಳಿಕೆಯ ಹಿನ್ನೆಲೆಯನ್ನು ನೋಡುವುದಾರೇ, ಈ ಕಾರ್ಯಕ್ರಮದಲ್ಲಿ ಮಕ್ಕಳು ರಾಮಾಯಣ ನಾಟಕವನ್ನು ಆಧುನಿಕ ಶೈಲಿಯಲ್ಲಿ ಪ್ರಸ್ತುತ ಪಡಿಸಿದ್ದರು. ರಾಮ, ಲಕ್ಷ್ಮಣ, ರಾವಣ ಹಾಗೂ ಶೂರ್ಪನಖಿ ಪಾತ್ರಗಳಿಗೆ ಹಾಸ್ಯದ ಟಚ್ ಕೊಟ್ಟು, ಹಣ್ಣುಗಳು, ಅವುಗಳ ಬೆಲೆ ಹಾಗೂ ಜಿಎಸ್‌ಟಿ ಅಂತಹ ಅಂಶಗಳನ್ನು ಸೇರಿಸಿ ಪ್ರದರ್ಶನ ನೀಡಿದ್ದರು.
ಈ ಆಧುನಿಕ ನಾಟಕವನ್ನು ಪ್ರಶಂಸೆ ಮಾಡಿದ ಪ್ರಕಾಶ್ ರಾಜ್, ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಶ್ರೀರಾಮ ಉತ್ತರ ಭಾರತದಿಂದ ಬಂದವನು. ರಾವಣ ದಕ್ಷಿಣ ಭಾರತದ ಬುಡಕಟ್ಟು ಸಮುದಾಯದ ನಾಯಕ. ಕೇವಲ ಹಣ್ಣುಗಳನ್ನು ಕದ್ದಿದ್ದರಿಂದಲೇ ಅವರಿಬ್ಬರ ನಡುವೆ ಘರ್ಷಣೆ ನಡೀತು" ಎಂದು ಹೇಳಿದ್ದರು. ಅಲ್ಲದೆ, ರಾಮ, ಲಕ್ಷ್ಮಣ ಹಾಗೂ ರಾವಣ ಹಾಗೂ ಅವನ ಸಹೋದರಿ ಶೂರ್ಪನಖಿ ನಡುವೆ ಹಣ್ಣಿನ ಬೆಲೆ ಪಾವತಿಯ ಮಾಡುವ ವಿಚಾರವಾಗಿ ನಡೆದ ಘರ್ಷಣೆಯನ್ನು ತಮ್ಮದೇ ಶೈಲಿಯಲ್ಲಿ ವರ್ಣಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕಾಶ್ ರಾಜ್ ವಿರುದ್ಧ ಹಿಂದೂಪರ ಸಂಘಟನೆಗಳು ತಿರುಗಿಬಿದ್ದಿದ್ದವು.

ಇದೇ ಸಮಯದಲ್ಲಿ ತೆಲುಗಿನ ಜನಪ್ರಿಯ ನಟಿವ ಹಾಗೂ ಬಿಜೆಪಿ ನಾಯಕಿ ಕರಾಟೆ ಕಲ್ಯಾಣಿ ಕಣ್ಣುಗಳು ಕೆಂಪಾಗಿವೆ. ಪ್ರಕಾಶ್ ರಾಜ್ ವಿರುದ್ಧ ಕರಾಟೆ ಕಲ್ಯಾಣಿ ಕೆಂಡಾಮಂಡಲ ಆಗಿದ್ದಾರೆ. ಬಹುಭಾಷಾ ನಟನ ಹೇಳಿಕೆಯನ್ನು ಖಂಡಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ಹೈದರಾಬಾದ್‌ನ ಪಂಜುಗುಟ್ಟಾ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ಹಾಗೇ ಆಂಧ್ರಪ್ರದೇಶದ ಬಿಜೆಪಿ ನಾಯಕ ಹಾಗೂ ಟಿಟಿಡಿ ಮಂಡಳಿ ಸದಸ್ಯ ಭಾನು ಪ್ರಕಾಶ್ ಕೂಡ ಪ್ರಕಾಶ್ ರಾಜ್ ಹೇಳಿಕೆಯನ್ನು ಖಂಡಿಸಿದ್ದಾರೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಅವರ ಹೇಳಿಕೆಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರನ್ನೂ ಸಲ್ಲಿಸಿದ್ದಾರೆ. ಇತ್ತ ಪ್ರಕಾಶ್ ರಾಜ್ ಜಮೀನಿನ ಕೆಲಸ ನಡುಯುತ್ತಿದೆ. ಮುಗಿಸಿ ಬರುತ್ತೇನೆ ಕಾಯಿರಿ ಎನ್ನುವ ಅರ್ಥದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications
