"ಬಿಗ್ ಸ್ಟಾರ್ ಸಿನಿಮಾ ಬರ್ತಿದೆ ಅಂತ ಭಯ ಇಲ್ಲ ನಮಗೆ.. ನಮ್ಮ ಭಯನೇ ಬೇರೆ": ಪ್ರಶಾಂತ್ ನೀಲ್
ಡಿಸೆಂಬರ್ ತಿಂಗಳು ಸಿನಿಪ್ರಿಯರಿಗೆ ಹಬ್ಬವೋ ಹಬ್ಬ. ಕ್ರಿಸ್‌ಮಸ್, ಇಯರ್ ಎಂಡ್, ಹೊಸ ವರ್ಷ ಅಂತ ಜಾಲಿ ಮೂಡಿನಲ್ಲಿರೋ ಜನರಿಗೆ ಮಸ್ತ್ ಎಂಟರ್‌ಟೈನ್ಮೆಂಟ್ ಕೊಡುವುದಕ್ಕೆ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಡಿಸೆಂಬರ್ 1 ರಿಂದಲೇ ಸಿನಿಮಾ ಹಬ್ಬ ಆರಂಭ ಆಗುತ್ತಿದೆ.
ಡಿಸೆಂಬರ್ ತಿಂಗಳ ಕೊನೆಯಲ್ಲಿ ಎರಡು ದೊಡ್ಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಪೈಪೋಟಿಗೆ ಇಳಿದಿರೋದು ಗೊತ್ತೇ ಇದೆ. ಬಾಲಿವುಡ್ ಕಿಂಗ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಸಿನಿಮಾ 'ಡಂಕಿ'. ಇನ್ನೊಂದು ಕಡೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನ 'ಸಲಾರ್'. ಈ ಎರಡೂ ಸಿನಿಮಾಗಳು ಕೇವಲ ಒಂದು ದಿನದ ಅಂತರದಲ್ಲಿ ರಿಲೀಸ್ ಆಗುತ್ತಿದೆ.

'ಸಲಾರ್' ತಂಡ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದಂತೆ ಒಂದು ಸುದ್ದಿಗಳು ಹರಿದಾಡಿದ್ದವು. ಬೇಕಂತಲೇ 'ಸಲಾರ್' ಸಿನಿಮಾವನ್ನು 'ಡಂಕಿ' ಜೊತೆ ರಿಲೀಸ್ ಮಾಡುತ್ತಿದ್ದಾರೆ ಎಂದು ಗುಲ್ಲೆದ್ದಿತ್ತು. ಈಗ ಪ್ರಶಾಂತ್ ನೀಲ್ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ 'ಡಂಕಿ' ಜೊತೆಗಿನ ಪೈಪೋಟಿ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ.
ಬಾಕ್ಸಾಫೀಸ್‌ನಲ್ಲಿ ಶಾರುಖ್ ಖಾನ್ ಹಾಗೂ ಪ್ರಭಾಸ್ ನಡುವಿನ ಕಾದಾಟವೋ.. ಇಲ್ಲ ಪ್ರಶಾಂತ್ ನೀಲ್ ಹಾಗೂ ರಾಜ್‌ಕುಮಾರ್ ಹಿರಾನಿ ನಡುವಿನ ಗುದ್ದಾಟವೋ..? ಅವರ ಅಭಿಮಾನಿಗಳೇ ಗೊಂದಲಕ್ಕೆ ಬಿದ್ದಿರೋದಂತೂ ನಿಜ. ಈ ಎಲ್ಲಾ ಗೊಂದಲಗಳಿಗೆ ಪ್ರಶಾಂತ್ ನೀಲ್ ಹೇಳಿದ್ದು ಇಷ್ಟು.
"ಹೊಸ ಸಿನಿಮಾನೇ ಆಗಿರಲಿ.. ಇಲ್ಲ ಭಾರತೀಯ ಚಿತ್ರರಂಗದ ಅತೀ ದೊಡ್ಡ ನಟನ ಸಿನಿಮಾನೇ ಆಗಿರಲಿ. ಈ ಕ್ಲ್ಯಾಶ್ ಅನ್ನೋದು ನನಗೆ ಬೇಕಾಗಿರಲಿಲ್ಲ. ಯಾರದ್ದೋ ಡೇಟ್‌ನಲ್ಲಿ ಇನ್ಯಾರೋ ಸಿನಿಮಾ ರಿಲೀಸ್ ಮಾಡಿದರೆ, ಇದು ಎಂತಹವರಿಗೂ ಖುಷಿ ಕೊಡುವ ಸಂಗತಿ ಅಲ್ಲವೇ ಅಲ್ಲ. ಒಂದು ವರ್ಷದ ಹಿಂದೆ ನಾವು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದಾಗಲೂ ನಾವೂ ಇದನ್ನೇ ಬಯಸಿದ್ದೆವು. ನಾವು ಇದನ್ನು ಬಯಸಿರಲಿಲ್ಲ. ಆದರೆ, ನಿರ್ಮಾಣ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ. ಅವರ ನಿರ್ಧಾರದಲ್ಲಿ ನಾನು ತಲೆ ಹಾಕುವುದಿಲ್ಲ." ಎಂದು ಪ್ರಶಾಂತ್ ನೀಲ್ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ.

ಇನ್ನು 'ಡಂಕಿ' ಜೊತೆ ಪೈಪೋಟಿ ಮಾಡುತ್ತಿರುವ ಬಗ್ಗೆ ತಮಗೆ ಭಯವಿಲ್ಲ. ನಮಗೆ ಇರುವ ಭಯವೇ ಬೇರೆ ಎಂಬುದನ್ನು ಹೇಳಿದ್ದಾರೆ. ಈ ಮೂಲಕ ಬಾಕ್ಸಾಫೀಸ್‌ನಲ್ಲಿ ಪ್ರಬಲ ಪೈಪೋಟಿ ಕೊಡುತ್ತೇವೆ ಅನ್ನೋ ಸೂಚನೆಯನ್ನಂತೂ ಕೊಟ್ಟಿದ್ದಾರೆ.
"ಇನ್ನೊಂದು ಇಷ್ಟೇ ದೊಡ್ಡ ಸಿನಿಮಾ ಹಾಗೂ ಅದರ ಕಾಂಬಿನೇಷನ್ ನೋಡಿ ನಾವು ಭಯ ಪಟ್ಟಿಲ್ಲ. ರಾಜ್‌ಕುಮಾರ್ ಹಿರಾನಿ ಸರ್ ನನ್ನ ಫೇವರಿಟ್ ಡೈರೆಕ್ಟರ್. ನಾನು ಡಂಕಿ ಸಿನಿಮಾವನ್ನು ಖಂಡಿತಾ ನೋಡುತ್ತೇನೆ. ದೊಡ್ಡ ಸಿನಿಮಾ ರಿಲೀಸ್ ಆಗುತ್ತಿದೆ ಅಂತ ನನಗೆ ಗೊತ್ತು. ಆದರೆ, ಪ್ರತಿಯೊಂದು ಸಿನಿಮಾ ಮಾಡುವಾಗ ನಮಗೆ ಪ್ರೇಕ್ಷಕರು ಇಷ್ಟ ಪಡುತ್ತಾರಾ? ಇಲ್ಲವಾ? ಅನ್ನೋದಷ್ಟೇ ಭಯ." ಎಂದು ಹೇಳಿದ್ದಾರೆ.


Click it and Unblock the Notifications











